ನೆಲ್ಯಾಡಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡ ಘಟನೆ ಪೆರಿಯಶಾಂತಿ-ಕೊಕ್ಕಡ ರಸ್ತೆಯ ಪಟ್ಲಡ್ಕ ಎಂಬಲ್ಲಿ ಮೇ.13ರಂದು ಬೆಳಿಗ್ಗೆ ನಡೆದಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಹಾಸನದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಾರುತಿ ಶಿಫ್ಟ್ ಕಾರು ಪಟ್ಲಡ್ಕ ಸಮೀಪಿಸುತ್ತಿದ್ದಂತೆ ಹೆದ್ದಾರಿ ಬದಿಯಲ್ಲಿದ್ದ ಮರವೊಂದು ಮುರಿದು ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್‌ಸ್ಟೇಬಲ್ ಕುಶಾಲಪ್ಪ ನಾಯ್ಕ್, ಸಿಬ್ಬಂದಿ ನಾಗರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆರಿಯಶಾಂತಿ-ಕೊಕ್ಕಡ ರಸ್ತೆಯ ಎರಡೂ ಬದಿಯಲ್ಲೂ ಮರಗಳು ರಸ್ತೆಗೆ ಬಾಗಿಕೊಂಡು ನಿಂತಿವೆ. ಕೆಲವೊಂದು ಮರಗಳು ಅಪಾಯಕಾರಿಯಾಗಿದ್ದು ಪದೇ ಪದೇ ಮುರಿದು ರಸ್ತೆಗೆ ಬೀಳುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.