ಪುತ್ತೂರು: ಪ್ರತಿಷ್ಠಿತ ಕರ್ನಾಟಕ ಸಂಘ ಕತಾರ್ ಇದರ ಅಧ್ಯಕ್ಷರಾಗಿ ಡಾ. ರವಿ ಶೆಟ್ಟಿ ಮೂಡಂಬೈಲು ಆಯ್ಕೆಯಾಗಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಡಾ. ರವಿ ಶೆಟ್ಟಿ ಮೂಡಂಬೈಲು ಸರ್ವಸಮ್ಮತದಿಂದ ಆಯ್ಕೆಯಾಗಿದ್ದಾರೆ.
ಡಾ.ರವಿ ಶೆಟ್ಟಿಯವರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದು, ಕಳೆದ ವರ್ಷ ಬಹಳ ವಿಜೃಂಭಣೆಯಿಂದ ನಡೆದ ಪುಣಚ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಮಿತಿಯ ಅಧ್ಯಕ್ಷರಾಗಿದ್ದರು. ಅಲ್ಲದೆ ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಮತ್ತು ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ತುಳುಕೂಟ ಕತಾರ್‌ನ ಪೋಷಕರಾಗಿ, ಮೂರು ಬಾರಿ ಅಧ್ಯಕ್ಷರಾಗಿ, ಈ ಹಿಂದೆ ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ, ಬಂಟ್ಸ್ ಕತಾರಿನ ಸಂಸ್ಥಾಪಕ ಅಧ್ಯಕ್ಷರಾಗಿ, ಭಾರತೀಯ ರಾಯಭಾರಿ ಕಚೇರಿಯ ಅಧೀನದಲ್ಲಿರುವ ಐಸಿಬಿಎಫ್, ಐಬಿಪಿಸಿಯ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸಂಘ ಕತಾರಿನ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಈ ಸಂದರ್ಭದಲ್ಲಿ ಡಾ. ರವಿ ಶೆಟ್ಟಿ ಮೂಡಂಬೈಲು ಅವರು ಅಧ್ಯಕ್ಷರಾಗಿರುವುದು ಖುಷಿ ತಂದಿದೆ ಎಂದು ಕತಾರ್ ಕನ್ನಡಿಗರು ಶುಭ ಹಾರೈಸಿದ್ದಾರೆ.