ಪುತ್ತೂರು: ನವತೇಜ ಟ್ರಸ್ಟ್ ಪುತ್ತೂರು, ಅಡಿಕೆ ಪತ್ರಿಕೆ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರುಷದ ‘ಹಲಸು ಮತ್ತು ಹಣ್ಣುಗಳ ಮೇಳ’ವು ಮೇ.24 ರಿಂದ 26ರ ತನಕ ಪುತ್ತೂರು ಬಪ್ಪಳಿಗೆ ಜೈನ ಭವನದಲ್ಲಿ ದಿನಪೂರ್ತಿ ನಡೆಯಲಿದೆ.
ಸುಮಾರು 60ಕ್ಕೂ ಮಿಕ್ಕಿ ಮಳಿಗೆಗಳಿದ್ದು, ಯಾವುದೇ ಕೃತಕ ಬಣ್ಣ, ಒಳಸುರಿಗಳನ್ನು ಬಳಸದ ಉತ್ಪನ್ನಗಳು ಮೇಳದಲ್ಲಿದ್ದು, ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರಲ್ಲಿ ರುಚಿವರ್ಧನೆಯನ್ನು ಮಾಡಲಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ. ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ. ಹಲಸಿನ ಹಣ್ಣಿನ ಮಳಿಗೆಯಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್. ಹಲಸಿನ ಇಷ್ಟೊಂದು ಖಾದ್ಯಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುತ್ತಿರುವುದು ಹಲಸು ಪ್ರಿಯರಿಗೆ ಖುಷಿ ತರಬಹುದಾದ ವಿಚಾರ. ತಿಪಟೂರು ಮತ್ತು ಚೆನ್ನಪಟ್ಟಣದಿಂದ ಮೇಳಕ್ಕಾಗಿಯೇ ಹಲಸು ಮತ್ತು ಮಾವು ಬೆಳೆಗಾರರು ಸ್ವತಃ ಹಣ್ಣುಗಳೊಂದಿಗೆ ಮೇಳಕ್ಕೆ ಬರಲಿದ್ದಾರೆ. ಮುಖ್ಯವಾಗಿ ‘ಕೆಂಪು ಹಲಸು’ ಗ್ರಾಹಕರ ಮನ ಸೆಳೆಯಲಿದೆ. ಕೊಕ್ಕೋ ಉತ್ಪನ್ನಗಳ ಮಳಿಗೆಗಳಿವೆ.
ಋತುಗಳಿಗೆ ತಕ್ಕುದಾದ ಹಣ್ಣುಗಳು:
ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರ್ಯಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು.. ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಅಗ್ರಿ ಬ್ಯುಸಿನೆಸ್ ಮಳಿಗೆಗಳು, ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ.. ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು. ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಲಸಿನ ಹಣ್ಣಿನ ಸೊಳೆಯನ್ನು ತಿನ್ನುವ ಸ್ಪರ್ಧೆಯಿದೆ. ಮೇಳದಲ್ಲಿ ಸಂಶೋಧನಾ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವ ಯತ್ನವು ಮೇಳದ ಉದ್ದೇಶಗಳಲ್ಲೊಂದು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ರಂಗದ ಗಣ್ಯರು, ಕೃಷಿಕರು ಆಗಮಿಸಲಿದ್ದಾರೆ. ನವತೇಜ ಟ್ರಸ್ಟಿನೊಂದಿಗೆ ಅಕ್ಷ ಕಾಟೇಜ್ ಇಂಡಸ್ಟ್ರೀಸ್, ನವನೀತ್ ಫಾರ್ಮ್ ನರ್ಸರಿ, ಮರಿಕೆ ಸಾವಯವ ಮಳಿಗೆ, ನಿರ್ಮಾಣ್ ಅಸೋಸಿಯೇಟ್ಸ್ ಮೊದಲಾದ ಸಂಸ್ಥೆಗಳ ಸಹಯೋಗವಿದೆ ಎಂದು ಸುಹಾಸ್ ಮರಿಕೆ ತಿಳಿಸಿದ್ದಾರೆ.