ಅಶೋಕ್‌ ಕುಮಾರ್‌ ರೈ ಶಾಸಕರಾಗಿ ವರ್ಷ ಪೂರ್ಣ- ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರಿಂದ ಸನ್ಮಾನ

0

ಎಲ್ಲರ ಸಹಕಾರದಿಂದ ನನಗೆ ಕೆಲಸ ಮಾಡಲು ಸಾಧ್ಯವಾಗಿದೆ: ಶಾಸಕ ಅಶೋಕ್ ರೈ
ನಾನು ಇನ್ನು ಟಿಕೆಟ್ ಆಕಾಂಕ್ಷಿಯಲ್ಲ: ಕಾವು ಹೇಮನಾಥ ಶೆಟ್ಟಿ


ಪುತ್ತೂರು: ಅಶೋಕ್ ರೈ ಯವರು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಮೇ.13 ಕ್ಕೆ ಒಂದು ವರ್ಷ ಪೂರ್ಣವಾಗಿದ್ದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಶಾಸಕರ ಖಾಸಗಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹಾರ ಹಾಕಿ, ಫಲಪುಷ್ಪಗಳನ್ನು ನೀಡಿ ಶಾಸಕರನ್ನು ಗೌರವಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಶಾಸಕರು ಶಾಸಕನಾಗಿ ಒಂದು ವರ್ಷದ ಅವಧಿಯಲ್ಲಿ ಏನು ಅಭಿವೃದ್ದಿ ಕೆಲಸ ಮಾಡಿದ್ದೇನೋ ಅದು ನಾನು ಒಬ್ಬ ಮಾಡಿದ್ದಲ್ಲ ನಿಮ್ಮೆಲ್ಲರ ಸಹಕಾರದಿಂದ ಅದು ಸಾಧ್ಯವಾಗಿದೆ. ನಾನೊಬ್ಬನೇ ಏನೂ ಮಾಡಲು ಸಾಧ್ಯವಿಲ್ಲ. ಪಕ್ಷದ ನಾಯಕರ ಸಹಕಾರ, ಕಾರ್ಯಕರ್ತರ ಪರಿಶ್ರಮ ಮತ್ತು ಜಾತಿ, ಮತ ಪಕ್ಷ ಬೇಧವಿಲ್ಲದೆ ಎಲ್ಲರೂ ನನ್ನ ಜೊತೆ ಕೈ ಜೋಡಿಸಿದ ಕಾರಣ ಇದುವರೆಗೆ ಆಗಿರುವ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ, ಮುಂದೆಯೂ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ಆಗಬೇಕಿದ್ದು ಇದು ಸಾಕಾರಗೊಳ್ಳುವಲ್ಲಿ ಎಲ್ಲರ ನೆರವು ಅತೀ ಅಗತ್ಯ ಎಂದು ಶಾಸಕರು ಹೇಳಿದರು.

ನಾನು ಇನ್ನು ಟಿಕೆಟ್ ಆಕಾಂಕ್ಷಿಯಲ್ಲ: ಕಾವು ಹೇಮನಾಥ ಶೆಟ್ಟಿ
ನಾನು ಹಲವಾರು ಬಾರಿ ವಿಧಾನಸಭಾ ಚುನಾವಣೆಯ ಸಂದರ್ಬದಲ್ಲಿ ಟಿಕೆಟ್‌ಗಾಗಿ ಅರ್ಜಿ ಹಾಕುತ್ತಿದ್ದೇನೆ, ಕಳೆದ ಬಾರಿಯೂ ನಾನು ಆಕಾಂಕ್ಷಿಯಾಗಿದ್ದೆ ಆದರೆ ಇನ್ನು ನಾನು ಟಿಕೆಟ್ ಆಕಾಂಕ್ಷಿಯಲ್ಲ ನನ್ನ ಸಂಪೂರ್ಣ ಸಹಕಾರ ಅಶೋಕ್ ರೈಯವರಿಗೆ ನೀಡಲಿದ್ದೇನೆ ಅವರು ಮುಂದೆಯೂ ನಮಗೆ ಶಾಸಕರಾಗಲಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅಶೋಕ್ ರೈ ಶಾಸಕರಾಗಿ ಒಂದು ವರ್ಷ ಪೂರ್ಣಗೊಂಡಿದೆ, ಪುತ್ತೂರಿನಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ಆಗಿದೆ, ಮುಂದೆಯೂ ಆಗಲಿದೆ. ಪ್ರತೀಯೊಬ್ಬ ಕಾರ್ಯಕರ್ತರೂ ಶಾಸಕರ ಜೊತೆ ಕೈ ಜೋಡಿಸುವ ಮೂಲಕ ಅವರಿಗೆ ನಾವು ಬೆನ್ನೆಲುಬಾಗಿ ಕೆಲಸ ಮಾಡುವಂತಾಗಬೇಕು. ಮುಂದೆ ಬರುವ ಚುನಾವಣೆಯಲ್ಲಿಯೂ ಅಶೋಕ್ ರೈಯವರೇ ಶಾಸಕರಾಗಿ ಗೆದ್ದುಬರಲಿದ್ದಾರೆ. ಬೇರೆ ಯಾರೇ ಶಾಸಕರಾಗಿದ್ದರೂ ಪುತ್ತೂರಿನಲ್ಲಿ ಇಷ್ಟೊಂದು ಅಭಿವೃದ್ದಿ ಕೆಲಸ ಮಾಡಲು ಸಾದ್ಯವಾಗುತ್ತಿರಲಿಲ್ಲ, ಈ ಹಿಂದೆ ಶಾಸಕರಾದವರು ಯಾರೂ ಈ ಪರಿ ಕೆಲಸವನ್ನು ಮಾಡಿಲ್ಲ ಎಂದು ಹೇಳಿದರು.

ಅಭಿವೃದ್ದಿಯ ಹರಿಕಾರರು: ಡಾ. ರಾಜಾರಾಂ
ಶಾಸಕರಾದ ಅಶೋಕ್ ರೈಯವರು ಅಭಿವೃದ್ದಿಯ ಹರಿಕಾರರಾಗಿದ್ದಾರೆ. ಯಾರೇ ಏನೇ ಹೇಳಿದರೂ ಅದನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿಯೇ ಅದನ್ನು ಮಾಡುವ ಪೃವೃತ್ತಿ ಶಾಸಕರಲ್ಲಿರುವುದು ಅಭಿನಂದನಾರ್ಹ, ಎಷ್ಟೇ ಒತ್ತಡಗಳಿದ್ದರೂ ಸಮಾಧಾನ ಚಿತ್ತದಿಂದ ಕಾರ್ಯಕರ್ತರ ಮತ್ತು ಜನರ ಸಮಸ್ಯೆಯನ್ನು ಆಲಿಸುವ ಮೂಲಕ ಅವರು ಜನ ಮೆಚ್ಚಿದ ಶಾಸಕರಾಗಿ ಬೆಳೆಯುತ್ತಿದ್ದಾರೆ. ಮುಂದಿನ ನಾಲ್ಕು ವರ್ಷದಲ್ಲಿ ಪುತ್ತೂರು ಕ್ಷೇತ್ರ ಸಮಗ್ರ ಅಭಿವೃದ್ದಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಹೇಳಿದರು.


ಹಿರಿಯ ಕಾಂಗ್ರೆಸ್ ಮುಖಂಡರಾದ ನಿರ್ಮಲ್‌ಕುಮಾರ್ ಜೈನ್ ಮಾತನಾಡಿ ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗುವ ಮೂಲಕ ಶಾಸಕರು ಯಾವುದೇ ಭೇದವಿಲ್ಲದೆ ಎಲ್ಲರಲ್ಲೂ ಸಮಾನ ಭಾವವನ್ನು ಕಾಣುತ್ತಿದ್ದಾರೆ. ಓರ್ವ ಶಾಸಕನಲ್ಲಿ ಇರಬೇಕಾದ ಎಲ್ಲಾ ಗುಣಗಳು ಅವರಲ್ಲಿದೆ. ಇಂಥವರು ಶಾಸಕರಾಗಬೇಕು ಎಂದು ಪುತ್ತೂರಿನ ಜನತೆ ಬಯಸಿದ್ದು ಅದನ್ನೇ ದೇವರು ಕರುಣಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಗೆದ್ದು ಎರಡನೇ ಬಾರಿಯೂ ಶಾಸಕರಾಗಲಿದ್ದಾರೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಅರುಣಾ ಡಿ ರೈ, ವತ್ಸಲಾ ಪಿ ಶೆಟ್ಟಿ, ನಿವೃತ್ತ ಶಿಕ್ಷಕಿ ವೇದಾವತಿ, ಗ್ರಾಪಂ ಸದಸ್ಯರುಗಳಾದ ನವೀನಾ, ಜಯಂತಿ, ದಿವ್ಯನಾಥ ಶೆಟ್ಟಿ, ನಗರಸಭಾ ಸದಸ್ಯ ರಾಬಿನ್ ತಾವ್ರೋ, ಇಸಾಕ್ ಸಾಲ್ಮರ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ,ನಯನಾ ರೈ ನೆಲ್ಲಿಕಟ್ಟೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಗಣೇಶ್ ಕೋರಂಗ, ಭಾಸ್ಕರ ರೈ ಬನ್ನೂರು, ಕೃಷ್ಣ ನಾಯ್ಕ ತೆಂಕಿಲ, ಇಬ್ರಾಹಿಂ ಸಂಪ್ಯ, ಶಾಪಿ ಪಾಪೆತ್ತಡ್ಕ, ರವೀಂದ್ರ ಅರಿಯಡ್ಕ, ರವೂಫ್ ಸಾಲ್ಮರ, ಗಂಗಾಧರ್ ಶೆಟ್ಟಿ ಎಲಿಕ, ಹಾಫಿಲ್ ಕೂರ್ನಡ್ಕ, ಕೆ ಸಿ ಅಶೋಕ್ ಶೆಟ್ಟಿ, ಶಿವಕುಮಾರ್ ಶೆಟ್ಟಿ ಶಾಂತಿಗೋಡು, ಜಯಪ್ರಕಾಶ್ ರೈ ನೂಜಿಬೈಲು,ಅಬೂಬಕ್ಕರ್ ಮುಲಾರ್, ರವಿಚಂದ್ರ ಆಚಾರ್ಯ, ಉದ್ಯಮಿ ರಿತೇಶ್ ಶೆಟ್ಟಿ,ಗಂಗಾಧರ ಪಟ್ಟುಮೂಲೆ, ಸಲಾಂ ಸಂಪ್ಯ, ಸುಪ್ರಿತ್ ಕಣ್ಣಾರಾಯ, ಯೋಗೀಶ್ ಸಾಮಾನಿ, ಕೃಷ್ಣ ಪ್ರಸಾದ್ ಭಟ್ ಬೊಳ್ಳಾಯಿ, ಮುಂಡಾಲಗುತ್ತು ಶಶಿರಾಜ್ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ದಿನೇಶ್ ಪಾಣಾಜೆ ಮತ್ತಿತರರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here