ಒಂದು ಸಂಸ್ಥೆಯ 144 ವಿದ್ಯಾರ್ಥಿಗಳಿಗೆ ಸನದುದಾನ ಇತಿಹಾಸದಲ್ಲೇ ಪ್ರಥಮ
ಪುತ್ತೂರು: ಕರ್ನಾಟಕದ ಇತಿಹಾಸದಲ್ಲಿ ಧಾರ್ಮಿಕವಾಗಿ ಒಂದು ಸಂಸ್ಥೆಯಲ್ಲಿ 140 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಮೊದಲ ಕಾರ್ಯಕ್ರಮವಾಗಿ ಕಡೇಶ್ವಾಲ್ಯ ಗ್ರಾಮದ ನಚ್ಚಬೆಟ್ಟುವಿನ ದಾರುಲ್ ಮುಸ್ತಾಫ ಮೋರಲ್ ಅಕಾಡೆಮಿಯ ವಾರ್ಷಿಕೋತ್ಸವದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಹ್ ರೂಫ್ ಸುಲ್ತಾನಿ ಆತೂರು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಕಡೇಶ್ವಾಲ್ಯ ಗ್ರಾಮದ ನಚ್ಚಬೆಟ್ಟುವಿನಲ್ಲಿ ತೋಕೆ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ಸಾರಥ್ಯದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಾಫ ಮೋರಲ್ ಅಕಾಡೆಮಿ ಸಂಸ್ಥೆಯು ಕಳೆದ 8 ವರ್ಷಗಳಿಂದ ಲೌಕಿಕ, ಧಾರ್ಮಿಕ ಮತ್ತು ನೈತಿಕತೆಯ ಪ್ರಜ್ಞೆಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದು, ಇದೀಗ 8ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಂಸ್ಥೆಯಲ್ಲಿ ಉಳಿದು ಕಲಿತು ಸಮಾಜಕ್ಕೆ ಸಮರ್ಪಣೆಯಾಗುವ 144 ಯುವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ಮೇ 17 ಮತ್ತು 18ಕ್ಕೆ ಜರುಗಲಿದೆ ಎಂದು ಅವರು ಹೇಳಿದರು.
ಮೇ.17 ರಂದು ರಾತ್ರಿ ಅಸ್ಸಯ್ಯದ್ ತ್ವಾಹ ತಂಙಳ್ ಹಾಗು ಸಂಗಡಿಗರಿಂದ ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದ್ದು, ಅಸ್ಸಯ್ಯಿದ್ ಮುಡೀಸ್ ತಂಙಳ್ ಚೇಲಕ್ಕರ ತೃಶೂರು ದುವಾಶೀರ್ವಚನ ನೀಡಲಿದ್ದಾರೆ. ಮೇ.18ಕ್ಕೆ ಸಮಾರೋಪ ಸಮಾರಂಭದಲ್ಲಿ ಬೆಳಿಗ್ಗೆ ಫುರ್ಖಾನಿ ಸಂಗ ಮತ್ತು ಪದವಿ ವಸ್ತ್ರ ವಿತರಣೆ ನಡೆಯಲಿದೆ. ಅಸ್ಯಯ್ಯಿದ್ ಜಲಾಲುದ್ದೀನ್ ತಂಙಳ್ ಪೊಸೋಟು ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ ಗಂಟೆ 4ಕ್ಕೆ ಗಲ್ಫ್ ಮೀಟ್ ನಡೆಯಲಿದೆ. ರಾತ್ರಿ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಜಂಇಯ್ಯುತುಲ್ ಉಲಮಾ ರಾಜ್ಯಾಧ್ಯಕ್ಷ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಪ್ರಾರ್ಥನೆ ನೇತೃತ್ವ ನೀಡಲಿದ್ದು, ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಸನದುದಾನ ಪ್ರದಾನ ಮಾಡಲಿದ್ದಾರೆ. ಅಸ್ಸಯ್ಯಿದ್ ನೂರುಸ್ಸಾದಾತ್ ಬಾಯಾರ್ ತಂಙಳ್ ಸನದುದಾನ ಭಾಷಣ ಮಾಡಲಿದ್ದಾರೆ. ಅನೇಕ ಮಂದಿ ಧಾರ್ಮಿಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಮುಖ್ಯೋಪಾದ್ಯಾಯ ಅಹ್ಸನಿ ಮಲಪ್ಪುರಂ, ಸ್ವಾಗತ ಸಮಿತಿ ಸಂಚಾಲಕ ಡಾ. ಉಮರುಲ್ ಫಾರೂಕ್, ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಲ್ವಿತ್ ಮುರ, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅಬೂಬಕ್ಕರ್ ಸುಲ್ತಾನಿ ಉಪಸ್ಥಿತರಿದ್ದರು.