ಕುಂಬ್ರ ಮರ್ಕಝುಲ್ ಹುದಾ ಬೆಳ್ಳಿಹಬ್ಬ ‘ಸಿಲ್ವರಿಯಂ’ ಉದ್ಘಾಟನೆ

0

ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ-ಪೇರೋಡ್ ಉಸ್ತಾದ್

ಪುತ್ತೂರು: ಜೀವನದಲ್ಲಿ ಪುರುಷರಿಗೂ, ಮಹಿಳೆಯರಿಗೂ ಶಿಕ್ಷಣ ಅವಶ್ಯಕ. ಅದರಲ್ಲೂ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ, ಕೌಟುಂಬಿಕ ಜೀವನದಲ್ಲೂ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಧ್ವಾಂಸ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು.
ಮೇ.16ರಂದು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮ್ಮೇಳನ, ಬೆಳ್ಳಿ ಹಬ್ಬ ಉದ್ಘಾಟನಾ ಸಮಾವೇಶದಲ್ಲಿ ಅವರು ಮುಖ್ಯ ಪ್ರಭಾಷಣ ನಡೆಸಿದರು.


ನಮಗೆ ಎಲ್ಲವನ್ನೂ ನೀಡಿದವನು ಸೃಷ್ಟಿಕರ್ತನಾದ ಅಲ್ಲಾಹು ಆಗಿದ್ದಾನೆ. ನಮಗೆ ಆರೋಗ್ಯ, ಸಂಪತ್ತು, ಮನೆ, ವಾಹನ ಹೀಗೇ ಎಲ್ಲವನ್ನೂ ನೀಡಿದ್ದು ಅಲ್ಲಾಹು ಆಗಿದ್ದು ಅಲ್ಲಾಹನಿಗೆ ಕೃತಜ್ಞರಾಗುವ ರೀತಿಯ ಜೀವನ ನಮ್ಮದಾಗಬೇಕು, ಕುಟುಂಬದಲ್ಲಿ, ಸಮಾಜದಲ್ಲಿ ಒಳ್ಳೆಯವರೆಂದು ಕರೆಸಿಕೊಳ್ಳಬೇಕು, ಹಿರಿಯರನ್ನು, ಕಿರಿಯರನ್ನು ಗೌರವಿಸಬೇಕು, ಯಾರಿಗೂ ಅನ್ಯಾಯ ಮಾಡಬಾರದು. ಪರಿಶುದ್ದತೆಯ ಮಾದರಿ ಜೀವನ ನಮ್ಮದಾದಾಗ ಮಾತ್ರ ನಮ್ಮ ಬದುಕು ಸಾರ್ಥಕ್ಯ ಕಾಣಲು ಸಾಧ್ಯ ಎಂದು ಅವರು ಹೇಳಿದರು.

ಜೀವನದಲ್ಲಿ ಶಿಕ್ಷಣದ ಪಾತ್ರ ಮಹತ್ತರ-ಝೈನುಲ್ ಉಲಮಾ
ಉದ್ಘಾಟಿಸಿದ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮಾತನಾಡಿ ವಿದ್ಯಾಭ್ಯಾಸ ಎನ್ನುವುದು ಮನುಷ್ಯದ ಪ್ರತೀ ಆಗುಹೋಗುಗಳಲ್ಲಿ ಹೆಚ್ಚು ಪಾತ್ರವನ್ನು ವಹಿಸುತ್ತದೆ. ಮಹಿಳೆಯರೂ ಸುಶಿಕ್ಷಿತರಾಗುವುದು ಕಾಲದ ಬೇಡಿಕೆಯಾಗಿದ್ದು ಲೌಕಿಕ ಶಿಕ್ಷಣದ ಜೊತೆಗೆ ಶರೀಅತ್‌ನಂತಹ ಧಾರ್ಮಿಕ ಶಿಕ್ಷಣವನ್ನು ಮಹಿಳೆ ಪಡೆದಾಗ ಅಂತಹ ಮನೆ, ಕುಟುಂಬ ಸುಶಿಕ್ಷಿತವಾಗುತ್ತದೆ ಎಂದು ಅವರು ಹೇಳಿದರು.

ಮರ್ಕಝ್‌ನಿಂದ ಬಹುದೊಡ್ಡ ಪರಿವರ್ತನೆ-ಅಬೂ ಸುಫಿಯಾನ್
ಕೆಎಂಜೆ ಪ್ರ.ಕಾರ್ಯದರ್ಶಿ ಅಬೂ ಸುಫಿಯಾನ್ ಎಚ್.ಈ ಇಬ್ರಾಹಿಂ ಮದನಿ ಮಾತನಾಡಿ ವಿದ್ಯಾಸಂಸ್ಥೆಗಳು ವಾಣಿಜ್ಯ ಸಂಸ್ಥೆಗಳ ರೀತಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಕುಂಬ್ರ ಮರ್ಕಝುಲ್ ಹುದಾ ಸಂಸ್ಥೆಯು ಅದಕ್ಕೆ ತದ್ವಿರುದ್ದವಾಗಿ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದು ಸಮುದಾಯದಲ್ಲಿ, ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆಗೆ ಈ ಸಂಸ್ಥೆ ಕಾರಣವಾಗಿದೆ ಎಂದು ಹೇಳಿದರು.

ಮರ್ಕಝುಲ್ ಹುದಾ ರಾಜ್ಯಕ್ಕೆ ಮಾದರಿ ಸಂಸ್ಥೆ-ಶಾಫಿ ಸಅದಿ
ಕರ್ನಾಟಕ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ಮಾತನಾಡಿ ಕಳೆದ 23 ವರ್ಷಗಳಿಂದ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇಂದು ಇಡೀ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಅವರು ಹೇಳಿದರು. ಮಾಧ್ಯಮದಲ್ಲಿ ಕೆಲವು ಮಹಿಳಾವಾದಿಗಳು ತ್ರಿವಳಿ ತಲಾಖ್ ಬಗ್ಗೆ, ಹಿಜಾಬ್ ಬಗ್ಗೆ, ದ್ವಿಪತ್ನಿತ್ವ ಬಗ್ಗೆ, ಸೊತ್ತು ವಿಂಗಡನೆ ಬಗ್ಗೆ ಮಾತನಾಡುತ್ತಾರೆ, ಆದರೆ ಅವರಿಗೆ ಇಸ್ಲಾಮಿನ ಪ್ರಾಥಮಿಕ ಅರಿವು ಕೂಡಾ ಇರುವುದಿಲ್ಲ, ಇಂತಹ ಸಂದರ್ಭಗಳಲ್ಲಿ ಅಲ್ ಮಾಹಿರಾ ಪದವಿ ಪಡೆದ ವಿದ್ಯಾರ್ಥಿನಿಯರು ಎಲ್ಲ ವಿಷಯಗಳಲ್ಲೂ ಹೆಚ್ಚಿನ ಅಧ್ಯಯನ ಮಾಡಬೇಕು, ಮತ್ತು ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಮಾತನಾಡಲು ಪ್ರಾವೀಣ್ಯತೆಯನ್ನು ಹೊಂದಿರಬೇಕು. ಅದು ಕಾಲದ ಬೇಡಿಕೆಯೂ ಆಗಿದೆ ಎಂದು ಶಾಫಿ ಸಅದಿ ಹೇಳಿದರು.

ಮಾದರಿ ಶಿಕ್ಷಣ ಸಂಸ್ಥೆಯಾಗಿ ಮರ್ಕಝ್ ಬೆಳಗುತ್ತಿದೆ-ಝೈನಿ ಕಾಮಿಲ್
ಮುನ್ನುಡಿ ಭಾಷಣ ಮಾಡಿದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರ.ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ ೨೦೦೧ರಲ್ಲಿ ಶೇಖಮಲೆ ಮಮ್ಮುಂಞಿ ಹಾಜಿ ದಾನ ಮಾಡಿದ ಜಾಗದಲ್ಲಿ ಎ.ಪಿ ಉಸ್ತಾದರಿಂದ ಶಿಲಾನ್ಯಾಸಗೊಂಡ ಇಲ್ಲಿನ ಮರ್ಕಝ್ ವಿದ್ಯಾಸಂಸ್ಥೆ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಇದುವರೆಗೆ ಸಾವಿರಾರು ವಿದ್ಯಾರ್ಥಿನಿಗಳಿಗೆ ಶಿಕ್ಷಣ ನೀಡಿದೆ, ಹಲವರ ಪರಿಶ್ರಮದ ಫಲವಾಗಿ ಇಂದು ಸಂಸ್ಥೆ ಎತ್ತರಕ್ಕೆ ಬೆಳೆಯುತ್ತಿದೆ ಎಂದು ಹೇಳಿದರು. ಕುಂಬ್ರ ಮರ್ಕಝ್ ಮಾದರಿ ಶಿಕ್ಷಣ ಸಂಸ್ಥೆಯಾಗಿ ಗುರುತಿಸಲ್ಪಡುತ್ತಿದ್ದು ಊರ, ಪರವೂರ, ಅನಿವಾಸಿಗಳ ಸಹಕಾರ, ಬೆಂಬಲದಿಂದ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ ಎಂದು ಅವರು ಅವರು ಹೇಳಿದರು. ಮರ್ಕಝುಲ್ ಹುದಾದ ಅಧಿನದಲ್ಲಿ ಇದೀಗ ಹುಡುಗರಿಗೂ ಶಿಕ್ಷಣ ನೀಡಲು ಮುಂದಾಗಿದ್ದು ಮಂಜದಲ್ಲಿ ದಅವಾ ಕಾಲೇಜನ್ನು ಆರಂಭಿಸಲಾಗಿದೆ ಸಂಸ್ಥೆಯ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು. ಮುಂದಿನ ಎರಡು ವರ್ಷದಲ್ಲಿ ಸಂಸ್ಥೆ ಬೆಳ್ಳಿ ಹಬ್ಬ ಆಚರಿಸುತ್ತಿದ್ದು ಈ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳಲಿದೆ ಎಂದು ಅವರು ಹೇಳಿದರು.
ಮರ್ಕಝುಲ್ ಹಿದಾಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಶುಭ ಹಾರೈಸಿದರು. ಎಪಿಎಸ್ ಹುಸೈನ್ ಆಟಕೋಯ ತಂಙಳ್ ಉಪ್ಪಳ್ಳಿ ತಂಙಳ್ ದುವಾ ನಿರ್ವಹಿಸಿದರು.

ಕುಂಬ್ರ ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು, ಮರ್ಕಝ್ ಶರೀಅತ್ ಪ್ರಿನ್ಸಿಪಾಲ್ ಯುಕೆ ಮಹಮ್ಮದ್ ಸಅದಿ ವಳವೂರು, ಎಸ್‌ಜೆಯು ದ.ಕ ಜಿಲಾಧ್ಯಕ್ಷ ಬಿ.ಕೆ ಮಹಮ್ಮದ್ ಅಲಿ ಫೈಝಿ ಬಾಳೆಪುಣಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಮರ್ಕಝ್ ಬಹರೈನ್ ಸಮಿತಿ ಅಧ್ಯಕ್ಷ ಹಾಜಿ ಜಮಾಲುದ್ದೀನ್ ವಿಟ್ಲ, ಮರ್ಕಝುಲ್ ಹುದಾ ಗಲ್ಫ್ ಕೌನ್ಸಿಲ್ ಸಂಚಾಲಕ ಶಂಸುದ್ದೀನ್ ಬೈರಿಕಟ್ಟೆ, ಮರ್ಕಝುಲ್ ಹುದಾ ಒಮಾನ್ ರಾಷ್ಟ್ರೀಯ ಸಮಿತಿ ಸಂಚಾಲಕ ಉಬೈದುಲ್ಲಾ ಸಖಾಫಿ ಮಿತ್ತೂರು, ಜುಬೈಲ್ ಕಮಿಟಿಯ ಮಹಮ್ಮದ್ ಅಲಿ ಉಪ್ಪಿನಂಗಡಿ, ಮರ್ಕಝುಲ್ ಹುದಾ ಡಿಗ್ರಿ ಕಾಲೇಜು ಪ್ರಾಂಶುಪಾಲ ಮನ್ಸೂರ್ ಕಡಬ, ಮುದರ್ರಿಸ್ ಸ್ವಾಲಿಹ್ ಹನೀಫಿ ಜಾಲ್ಸೂರು, ಕುಂಬ್ರ ಮರ್ಕಝುಲ್ ಹುದಾದ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಗುತ್ತಿಗೆದಾರ ಉಸ್ಮಾನ್ ಹಾಜಿ ಚೆನ್ನಾರ್, ಮಹಮ್ಮದ್ ಅಲಿ ಸಖಾಫಿ, ರಹಿಮಾನ್ ಶಾಲಿಮಾರ್, ಸ್ವಲಾಹುದ್ದೀನ್ ಸಖಾಫಿ, ಮಹಮೂದ್ ಬೆಳ್ಳಾರೆ, ರಶೀದ್ ಸಖಾಫಿ ಮಂಜ, ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ, ಹಸನ್ ಸಖಾಫಿ ಬೆಳ್ಳಾರೆ, ಯೂಸುಫ್ ಹಾಜಿ ಕೈಕಾರ, ಅಬ್ದುಲ್ ಖಾದರ್ ಹಾಜಿ ಸುರಯ್ಯ, ಉದ್ಯಮಿ ರಹೀಂ ಎ.ಪಿ ಸುಳ್ಯ, ಅಡ್ವಕೇಟ್ ಮೂಸಾ ಪೈಂಬಚ್ಚಾಲ್, ಮಹಮ್ಮದ್ ಅಲಿ ಉಪ್ಪಿನಂಗಡಿ, ಹಸೈನಾರ್ ಅಮಾನಿ ಅಜ್ಜಾವರ, ಶೇಕಮಲೆ ಮುದರ್ರಿಸ್ ಬದ್ರುದ್ದೀನ್ ಅಹ್ಸನಿ, ಮರ್ಕಝ್ ಶರೀಅತ್ ಮುದರ್ರಿಸ್ ಮಹಮ್ಮದ್ ಹನೀಫ್ ಸಖಾಫಿ ಕಡಬ ಉಪಸ್ಥಿತರಿದ್ದರು. ಡಾ.ಎಂಎಸ್‌ಎಂ ಝೈನಿ ಕಾಮಿಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಮರ್ಕಝುಲ್ ಹುದಾದ ಪ್ರ.ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಆಡಿಟರ್ ಅನ್ವರ್ ಹುಸೈನ್ ಗೂಡಿನಬಳಿ, ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಹಮೀದ್ ಸುಳ್ಯ, ಆಶಿಕುದ್ದೀನ್ ಅಖ್ತರ್ ಕುಂಬ್ರ ಹಾಗೂ ಉಸ್ಮಾನ್ ಮುಸ್ಲಿಯಾರ್ ಬದ್ರಿಯಾನಗರ, ಇಕ್ಬಾಲ್ ಬಪ್ಪಳಿಗೆ, ಎಸ್.ಎಂ ಕುಂಞಿ ಶೇಖಮಲೆ, ಕೆ.ಎಚ್ ಜಲೀಲ್ ಹಾಜಿ ಕುಂಬ್ರ, ಮಹಮ್ಮದ್ ಕೆಜಿಎನ್ ರೆಂಜಲಾಡಿ ಸ್ವಾಲಿಹ್ ಮುರ, ಉವೈಸ್ ಬೀಟಿಗೆ, ಮಜೀದ್ ಅಲಂಗೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಹಲವಾರು ಮಂದಿ ಮರ್ಕಝ್ ಅಭಿಮಾನಿಗಳು, ಹಿತೈಷಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು. ಸಾವಿರಾರು ಮಂದಿ ಭಾಗವಹಿಸಿದ್ದರು.

ಖವಾಲಿ ಸಂಗಮ, ಬುರ್ದಾ, ನಅತ್ ಮಜ್ಲಿಸ್:
ಸಂಜೆ ಡಾ.ಕೋಯಾ ಕಾಪಾಡ್ ಕೋಝಿಕ್ಕೋಡ್ ಬಳಗದವರಿಂದ ಖವಾಲಿ ಸಂಗಮ, ನಅತ್, ಬುರ್ದಾ, ಮದ್‌ಹ್ ಸಂಗಮ ನಡೆಯಿತು. ಕುಂಬ್ರ ಮರ್ಕಝುಲ್ ಹುದಾ ಶರೀಅತ್ ಕಾಲೇಜಿನ ಮುದರ್ರಿಸ್ ಎ.ಎಂ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ದುವಾ ಮಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಕೆ.ಎಂ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಕುಂಬ್ರ ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಮರ್ಕಝುಲ್ ಹುದಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ಯು.ಕೆ ಮಹಮ್ಮದ್ ಸಅದಿ ವಳವೂರ್, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಎಂಎಸ್‌ಎಂ ಝೈನಿ ಕಾಮಿಲ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here