ಪುತ್ತೂರು: ಮುಕ್ರಂಪಾಡಿ ಗೋಕುಲ ಬಡಾವಣೆಯ ದ್ವಾರಕಾ ಪ್ರತಿಷ್ಠಾನ ಹಾಗೂ ಕೃಷ್ಣ ಭಟ್ಟ ಪ್ರತಿಷ್ಠಾನದ ಸಹಯೋಗದಲ್ಲಿ ವಸಂತ ವೇದಪಾಠ ಶಿಬಿರದ ಸಮಾರೋಪ ಸಮಾರಂಭ ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ಮೇ.12ರಂದು ನಡೆಯಿತು.
ಸುಸಂಸ್ಕೃತ ಸಮಾಜದ ಧ್ಯೇಯದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ 1 ತಿಂಗಳಿನ ವಸಂತ ವೇದಪಾಠ ಶಿಬಿರ ಎ.14ರಂದು ಪ್ರಾರಂಭಗೊಂಡು ಪ್ರತಿನಿತ್ಯ ವಿವಿಧ ವ್ಯಕ್ತಿತ್ವ ವಿಕಸನ ತರಬೇತಿಗಳೊಂದಿಗೆ ಜರಗಿತು. 72 ಶಿಬಿರಾರ್ಥಿಗಳು ಉಚಿತ ವೇದಪಾಠ ಶಿಬಿರದ ಅನುಕೂಲವನ್ನು ಪಡೆದುಕೊಂಡರು. ಬೆಳಗ್ಗೆ 5.30ರಿಂದ ರಾತ್ರಿ 9.30ರವರೆಗೆ ವೇದಪಾಠ, ಯೋಗ ತರಬೇತಿ, ಪುರಾಣ, ಇತಿಹಾಸ, ಭಜನೆ ತರಬೇತಿಗಳ ಮೂಲಕ ಶಿಬಿರಾರ್ಥಿಗಳ ನಿತ್ಯ ದಿನಚರಿ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ಟ ಕೊಂಕೋಡಿ ಸಮಾರೋಪ ಸಮರಂಭದಲ್ಲಿ ಮಾತನಾಡಿ ವೇದಗಳ ಮಹತ್ವದ ಕುರಿತು ಅರಿವು ಮೂಡಿಸಿದರು. ವೇದವು ಈಗಿನ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದರು. ಹರಿಕೃಷ್ಣ ಭಟ್ ಅರ್ತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು, ಶಿಬಿರಾರ್ಥಿಗಳಿಗೆ ಪ್ರೊ| ವಿ.ಬಿ ಅರ್ತಿಕಜೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಯೋಗರತ್ನ ಗೋಪಾಲ ಕೃಷ್ಣ ಭಟ್ಟ, ಗಣರಾಜ ಕುಂಬ್ಳೆ, ವೇ.ಮೂ. ಶಿವಪ್ರಸಾದ ಚೂಂತಾರು ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆಯ ಆಡಳಿತ ಸದಸ್ಯ ಅಮೃತಕೃಷ್ಣ ಸ್ವಾಗತಿಸಿ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಆಡಳಿತ ಸದಸ್ಯ ಅಶ್ವಿನಿ ಎನ್. ವಂದಿಸಿದರು, ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳು, ಹೆತ್ತವರು, ಗೋಕುಲ ಬಡಾವಣೆಯ ಸದಸ್ಯರು ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಮೊಡಪ್ಪಾಡಿ ಕೃಷ್ಣ ಭಟ್ಟರನ್ನು ಸನ್ಮಾನಿಸಲಾಯಿತು. ಮುದ್ರಾಯೋಗದ ಕುರಿತಾದ ಕೈಪಿಡಿಯನ್ನು ಬಿಡುಗಡೆಗೊಳಿಸಿ, ಯೋಗ ಪ್ರಾತ್ಯಕ್ಷಿಕೆ ನಡೆಯಿತು.