ಮೈತ್ರಿ ಅಭ್ಯರ್ಥಿಗಳಿಗೆ ಅಧಿಕ ಮತಗಳ ಗೆಲುವು-ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣೀಕ್ ವಿಶ್ವಾಸ

0

ಮಂಗಳೂರು: ಶಿಕ್ಷಕರು ಸಮಾಜವನ್ನು ತಿದ್ದುವವರು ಹಾಗೂ ಪದವೀದರರು ಪ್ರಜ್ಞಾವಂತರು. ಜನಸಾಮಾನ್ಯರು ಮಾಡುವ ತಪ್ಪುಗಳನ್ನು ಶಿಕ್ಷಕರು, ಪದವೀಧರರು ಮಾಡುವುದಿಲ್ಲ, ಮೈತ್ರಿಯ ಅಭ್ಯರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸುತ್ತಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣೀಕ್ ಹೇಳಿದರು.


ಮಂಗಳೂರು ನಗರ ಉತ್ತರ ಬಿಜೆಪಿ ಕಾರ್ಯಾಲಯದಲ್ಲಿ ನೈರುತ್ಯ ಪದವೀಧರ ಮ್ತತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪರಿಷತ್ ಚುನಾವಣೆಯನ್ನು ನಾವೆಲ್ಲರೂ ಇದು ನಮ್ಮ ಚುನಾವಣೆ ಎಂದು ಸ್ವೀರಿಸಬೇಕು, ಗ್ರಾಮ, ವಾರ್ಡ್, ಬೂತ್ ಮಟ್ಟದಲ್ಲಿ ಚುರುಕಾಗಿ ಕೆಲಸ ಮಾಡಬೇಕು, ಪ್ರತಿ ಶಿಕ್ಷಕರು ಹಾಗೂ ಪದವೀಧರರನ್ನು ತಲುಪಿ ಅಭ್ಯರ್ಥಿಗಳ ಬಗ್ಗೆ ಮನವರಿಕೆ ಮಾಡಿ ಮತ ನೀಡುವಂತೆ ಮನವೊಲಿಸಬೇಕು ಎಂದು ಹೇಳಿದರು.


ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಹೆಚ್ಚಿನ ಲೀಡ್ ಕೊಡುವ ಶಕ್ತಿ ಮಂಗಳೂರು ಜಿಲ್ಲೆಗಿದೆ, ಇವತ್ತಿನಿಂದ ಚುನಾವಣೆ ತನಕ ಮತದಾರರ ಸಂಪರ್ಕ ಮತ್ತು ಸಂಬಂಧವನ್ನು ಬೆಳೆಸಿ ಮತಗಳಾಗಿ ಪರಿವರ್ತಿಸಬೇಕು, ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಕಾರ್ಯಕರ್ತರು ಗೆಲುವಿಗೆ ಶ್ರಮಿಸುತ್ತಾರೆಂಬ ವಿಶ್ವಾಸವಿದೆ ಎಂದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಇದೊಂದು ಪವಿತ್ರವಾದ ಚುನಾವಣೆ, ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಿದ ಚುನಾವಣೆ, ಕಾಂಗ್ರೆಸ್ ನ ಜನ ವಿರೋಧಿ ನೀತಿಯನ್ನ ಖಂಡಿಸಲಿಕ್ಕೆ ಪರಿಷತ್ತು ಒಂದೊಳ್ಳೆಯ ವೇದಿಕೆ, ನಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಬೇಕೆಂದರೆ ಗೆಲ್ಲಲೇಬೇಕಿದ್ದು, ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕಾರ್ಯಾನ್ಮುಖರಾಗಬೇಕಿದೆ ಎಂದರು. ಮಂಗಳೂರು ನಗರ ಉತ್ತರ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮಾತನಾಡಿ, ಮಂಗಳೂರು ನಗರ ಉತ್ತರದಲ್ಲಿ ಒಟ್ಟು ಏಳು ಮಹಾಶಕ್ತಿ ಕೇಂದ್ರ, 69 ಶಕ್ತಿ ಕೇಂದ್ರಗಳಿವೆ, ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಕ್ಕೆ ಸಂಚಾಲಕರು, ಸಹ ಸಂಚಾಲಕರನ್ನು ನೇಮಕ ಮಾಡಿದ್ದು, ತಂಡವಾಗಿ ಮತದಾರರನ್ನು ತಲುಪಲು ಶ್ರಮಿಸುವಂತೆ ಕರೆ ನೀಡಿದರು.


ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಚುನಾವಣೆಗೆ ಇನ್ನು ಕೇವಲ 12 ದಿನಗಳು ಮಾತ್ರ ಬಾಕಿ ಇವೆ, ಇದು ಕಾರ್ಯಕರ್ತರ ಚುನಾವಣೆ, ಹಾಗಾಗಿ ಯುದ್ಧೋಪಾದಿಯಲ್ಲಿ ಮುನ್ನುಗ್ಗಿದರೆ ಗೆಲುವು ಸುಲಭವಾಗಲಿದೆ, ತಾವೇ ಅಭ್ಯರ್ಥಿ ಎಂದು ತಿಳಿದು ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಶಿಕ್ಷಕರ ನೈರುತ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ ಮಾತನಾಡಿ, ಬಿಜೆಪಿ ಶಿಸ್ತು ಮತ್ತು ಸಂಘಟನೆಯಲ್ಲಿ ಇಡೀ ದೇಶದಲ್ಲೇ ಅತ್ಯಂತ ಬಲಿಷ್ಠವಾದುದು, ಪ್ರಧಾನಿ ನರೇಂದ್ರ ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿ ಆಗುವ ಕಾಲಸನ್ನಿಹಿತವಾಗಿದೆ, ಪಕ್ಷದ ಚಿಹ್ನೆ ಇಲ್ಲದೇ ನಡೆಯುವ ಈ ಚುನಾವಣೆಯಲ್ಲಿ ಮತದಾರರನ್ನು ಮತ ಹಾಕುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.

ಮಂಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ, ಶಿಕ್ಷಕರ ಕ್ಷೇತ್ರದ ಸಂಚಾಲಕರು ಹಾಗೂ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ನೈರುತ್ಯ ಪದವೀಧರ ಕ್ಷೇತ್ರದ ಸಹ ಸಂಚಾಲಕರಾದ ವಿಕಾಸ್ ಪುತ್ತೂರ್, ಜಿಲ್ಲಾ ಉಪಾಧ್ಯಕ್ಷರಾದ ಪೂಜಾ ಪ್ರಶಾಂತ್, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ, ಮುಖಂಡರಾದ ಆರ್‌.ಸಿ. ನಾರಾಯಣ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here