ಮೇ 24, 25, 26 ರಂದು ಹಲಸು, ಹಣ್ಣುಗಳ ಮೇಳ

0

ಪುತ್ತೂರು: ನವತೇಜ ಟ್ರಸ್ಟ್ ಪುತ್ತೂರು, ಅಡಿಕೆ ಪತ್ರಿಕೆ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರುಷದ ’ಹಲಸು ಮತ್ತು ಹಣ್ಣುಗಳ ಮೇಳ’ವು ಮೇ 24 ರಿಂದ 26ರ ತನಕ ಪುತ್ತೂರು ಬಪ್ಪಳಿಗೆ ಜೈನ ಭವನದಲ್ಲಿ ದಿನಪೂರ್ತಿ ನಡೆಯಲಿದೆ ಎಂದು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.


2018ರಲ್ಲಿ ಪ್ರಾರಂಭಿಸಿದ ಹಲಸು ಹಣ್ಣಿನ ಮೇಳ ಸತತ ಏಳು ವರ್ಷ ಯಶಸ್ವಿಯಾಗಿ ನಡೆದಿದೆ. ಹಲಸು ಇಲ್ಲದ ಸಮಯದಲ್ಲೂ ಹಲಸಿನ ಮೇಳ ಮಾಡುವ ಮೂಲಕ ಹಲಸು ಪ್ರೀಯರಿಗೆ ಉತ್ಸಾಹ ತುಂಬಿದ್ದೆವೆ. ಮೇಳದಲ್ಲಿ ಸುಮಾರು 60ಕ್ಕೂ ಮಿಕ್ಕಿ ಮಳಿಗೆಗಳಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್ ಭಟ್ ಮಳಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಾ ಕಾರಂತ ಪೆರಾಜೆ ಅವರ ’ಹಲಸು ಸ್ನೇಹಿ ಕೂಟದ ಹಿನ್ನೋಟದ ಹೆಜ್ಜೆಗಳು’ ಎಂಬ’ ಫಲಪ್ರದ’ ಕೃತಿಯನ್ನು ಅಡಿಕೆ ಪತ್ರಿಕೆಯ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿಯವರು ಬಿಡುಗಡೆ ಮಾಡಲಿದ್ದಾರೆ. ಭಾರತೀಯ ಗೇರು ಸಂಶೋಧನಾಲಯದ ನಿದೇಶಕ ಡಾ. ದಿನಕರ ಅಡಿಗ, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಲಸುಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.


ಹಣ್ಣುಗಳೊಂದಿಗೆ ನಾವು ನೀವು:
ಮೇ .25ಕ್ಕೆ ಹಣ್ಣುಗಳೊಂದಿಗೆ ನಾವು ನೀವು ಕಾರ್ಯಕ್ರಮ ನಡೆಯಲಿದ್ದು, ಶ್ರೀ ರಾಮಚಂದ್ರಪುರ ಮಠದ ಮಾತೃತ್ವಂ ಇದರ ಅಧ್ಯಕ್ಷೆ ಈಶ್ವರೀ ಶ್ಯಾಮ ಭಟ್ ಬೇರ್ಕಡವು ಅವರು ಅಧ್ಯಕ್ಷತೆ ವಹಿಸಲಿದ್ದು, ನಾಡಿನ ಮಾವಿನ ರಕ್ಷಣೆ ಕುರಿತು ಮಂಗಳೂರಿನ ಡಾ. ಮನೋಹರ ಉಪಾಧ್ಯ ಮತ್ತು ಅದರ ಅಭಿವೃದ್ಧಿ, ಸಂರಕ್ಷಣೆ ಕುರಿತು ಸುಳ್ಯದ ಜಯರಾಮ ಮುಂಡೋಳಿಮೂಲೆ ಮಾತನಾಡಲಿದ್ದಾರೆ. ಕೊಕ್ಕೋ ಮೌಲ್ಯವರ್ಧನೆ ಕುರಿತು ಪುಣಚದ ನವೀನ ಕೃಷ್ಣ ಶಾಸ್ತ್ರೀಯವರು ಮಾತನಾಡಲಿದ್ದಾರೆ. ರಂಬುಟಾನ್ ಕೃಷಿ ಮಾರುಕಟ್ಟೆಯ ಕುರಿತು ವಿಶ್ವಪ್ರಸಾದ್ ಸೇಡಿಯಾಪು ಅವರು ಮಾತನಾಡಲಿದ್ದಾರೆ. ಇದೇ ಸಂದರ್ಭ ಮಾವು ಮತ್ತು ಹಲಸಿನ ಅಭಿವೃದ್ಧಿ ಮಾಡುತ್ತಿರುವ ಸುಳ್ಯ ಮರ್ಕಂಜದ ಮಾಪಲತೋಟ ಸುಬ್ರಾಯ ಭಟ್ ಅವರನ್ನು ಗೌರವಿಸಲಾಗುವುದು. ನವನೀತ ನರ್ಸರಿಯ ವೇಣುಗೋಪಾಲ್ ಎಸ್ ಟಿ ಅವರು ಸಮನ್ವಯಕಾರರಾಗಿರಲಿದ್ದಾರೆ. ಮೇ .26ಕ್ಕೆ ವೇಣೂರು ರಮೇಶ್ ಕೊಂಕಣಾಜೆ ಅವರು ಹಲಸಿನ ಉತ್ಪನ್ನ, ಉಜಿರೆಯ ಗೋಪಾಲಕೃಷ್ಣ ಕಾಂಚೋಡು ಅವರು ಡ್ರಾಗನ್ ಫುಡ್, ಶ್ವೇತಾ ಮರಕ್ಕಿಣಿ ಅವರು ಹೋಮ್ ಪ್ರೋಡಕ್ಟ್ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಅನಂತಪ್ರಸಾದ್ ನೈತ್ತಡ್ಕ ಹೇಳಿದರು.


ಸಮಾರೋಪ:
ಮೇ.26ಕ್ಕೆ ಸಮಾರೋಪ ಸಮಾರಂಭ ಸಂಜೆ ಗಂಟೆ 4ಕ್ಕೆ ನಡೆಯಲಿದ್ದು, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಹಲಸು ಹಬ್ಬದ ಕುರಿತು ಮಾತನಾಡಲಿದ್ದಾರೆ. ಜಿ.ಎಲ್.ಆಚಾರ್ಯ ಜ್ಯುವೆಲ್ಲ್ಸ್‌ನ ಮಾಲಕ ಜಿ.ಎಲ್.ಬಲರಾಮ ಆಚಾರ್ಯ, ಸಾವಯವ ಕೃಷಿಕ ಗ್ರಾಹಕ ಬಳಗ ಇದರ ಸಂಘಟನಾ ಕಾರ್ಯದರ್ಶಿ ರತ್ನಾಕರ ಕುಳಾಯಿ ,ಸಮೃದ್ಧಿ ಗಿಡಗೆಳೆತನ ಸಂಘದ ಅಧ್ಯಕ್ಷ ನಿರಂಜನ ಪೋಳ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೆಸಿಐ ವಲಯ ಉಪಾಧ್ಯಕ್ಷ ಶಂಕರ ರಾವ್ ಶುಭ ನುಡಿಯನ್ನಾಡಲಿದ್ದಾರೆ ಎಂದು ಅನಂತಪ್ರಸಾದ್ ನೈತ್ತಡ್ಕ ಹೇಳಿದರು.


ಹಲಸಿನ ಮೌಲ್ಯವರ್ಧನೆಗಾಗಿ ಮೇಳ:
ಹಲಸು ಯಾರಿಗೂ ಬೇಡವಾದ ಕಾಲ ಇತ್ತು. ಇವತ್ತು ಅದರ ಮೌಲ್ಯವರ್ಧನೆ ಆಗುತ್ತಿದೆ. ಇನ್ನಷ್ಟು ಹಲಸಿನಿಂದ ಹೊಸ ಅವಿಷ್ಕಾರ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಹಲಸು ಮೇಳ ಏರ್ಪಡಿಸಲಾಗುತ್ತಿದೆ. ಮೇಳವನ್ನು ಮೂರು ವಿಭಾಗ ಮಾಡಿದ್ದು, ಆರಂಭದಲ್ಲಿ ಹಲಸಿನ ಗಿಡಗಳು, ಅದರ ಉತ್ಪನ್ನ, ಹೀಗೆ ಮುಂದೆ ಸಾಗಿದಂತೆ ಹಲಸಿನ ಸೋಳೆಯನ್ನು ಬಿಡಿಸುವ ಪರಿಕರಗಳ ಮಳಿಗೆ ಹೀಗೆ ಇತರ ಹಣ್ಣುಗಳ ಮಳಿಗೆ, ಕೃಷಿಕಗೆ ಸಂಬಂಧಿಸಿದ ಪರಿಕರಗಳ ಮಳಿಗೆ, ಆಹಾರ ಮೇಳಗಳು ಹಲಸು ಮೇಳದಲ್ಲಿ ಕಾಣಸಿಗಲಿದೆ. ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಗ್ರಾಹಕರಲ್ಲಿ ರುಚಿವರ್ಧನೆಯನ್ನು ಮಾಡಲಿವೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ. ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ. ಹಲಸಿನ ಹಣ್ಣಿನ ಮಳಿಗೆಯಿದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್. ತಿಪಟೂರು ಮತ್ತು ಚೆನ್ನಪಟ್ಟಣದಿಂದ ಮೇಳಕ್ಕಾಗಿಯೇ ಹಲಸು ಮತ್ತು ಮಾವು ಬೆಳೆಗಾರರು ಸ್ವತಃ ಹಣ್ಣುಗಳೊಂದಿಗೆ ಮೇಳಕ್ಕೆ ಬರಲಿದ್ದಾರೆ. ಮುಖ್ಯವಾಗಿ ’ಕೆಂಪು ಹಲಸು’ ಗ್ರಾಹಕರ ಮನ ಸೆಳೆಯಲಿದೆ. ಇದರೊಂದಿಗೆ ಹಲಸು ತಿನ್ನುವ, ಹಲಸು ಎತ್ತುವ ಸಹಿತ ವಿವಿಧ ಸ್ಪರ್ಧೆಗಳನ್ನು ಮಾಡಲಿದ್ದೇವೆ. ಮಕ್ಕಳಿಗೆ ಹಲಸಿನ ಉತ್ಪನಗಳ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳು ಇವೆ ಎಂದು ನವತೇಜ ಪುತ್ತೂರು ಇದರ ಟ್ರಸ್ಟಿ ಸುಹಾಸ್ ಮರಿಕೆ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜೆಸಿಐ ಉಪಾಧ್ಯಕ್ಷ ಅನೂಪ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here