ಸುಬ್ರಹ್ಮಣ್ಯ ಮಠದ ಶ್ರೀನರಸಿಂಹ ಜಯಂತಿಯಲ್ಲಿ ‘ನೃತ್ಯೋಹಂ’ ಪ್ರದರ್ಶನ

0

ಪುತ್ತೂರು: ಶ್ರೀಸಂಪುಟ ನರಸಿಂಹಸ್ವಾಮಿ ಶ್ರೀಸುಬ್ರಹ್ಮಣ್ಯ ಮಠ ಇಲ್ಲಿ ಶ್ರೀನರಸಿಂಹ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀಮದಾನಂದತೀರ್ಥ ತತ್ವದರ್ಶಿನಿ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ತಂಡದಿಂದ ಸೋಮವಾರ ರಾತ್ರಿ ‘ನೃತ್ಯೋಹಂ’ ಭರತನಾಟ್ಯ ಪ್ರದರ್ಶನಗೊಂಡಿತು.


ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ನಿರ್ದೇಶನದಲ್ಲಿ ನೃತ್ಯ ಪ್ರದರ್ಶನ ನಡೆಯಿತು. ಆಶೀರ್ವಚನದಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪ್ರಸಕ್ತ ಪಾಶ್ಚಾತ್ಯ ನೃತ್ಯಗಳು ವಿಜೃಂಭಿಸುತ್ತಿರುವ ಇಂದಿನ ದಿನಗಳಲ್ಲಿ ಶಾಸ್ತ್ರೀಯ ನೃತ್ಯಕಲೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ವಿದ್ಯಾರ್ಥಿಗಳು ಕೂಡ ಭರತನಾಟ್ಯದಂತಹ ನೃತ್ಯಗಳ ಕಡೆ ಹೆಚ್ಚಿನ ಒಲವು ತೋರಿಸಬೇಕಿದೆ ಎಂದು ಆಶಿಸಿದರು.


ಈ ಸಂದರ್ಭ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ನಿಜೇಶ್‌, ವರ್ಷಾ ಬೇಕಲ್‌, ನಮ್ರತಾ ಹಾಗೂ ದಿಶಾ ಇವರನ್ನು ಸ್ವಾಮೀಜಿ ಅವರು ಶಾಲು ಹೊದಿಸಿ ಸನ್ಮಾನಿಸಿ ಆಶೀರ್ವದಿಸಿ, ಗ್ರಾಮೀಣ ವಿದ್ಯಾರ್ಥಿಗಳ ಪರಿಶ್ರಮವನ್ನು ಉಲ್ಲೇಖಿಸಿ, ಉನ್ನತ ವಿದ್ಯಾಭ್ಯಾಸಕ್ಕೆ ಹಾರೈಸಿದರು.
ಮಠದ ದಿವಾನ ಸುದರ್ಶನ್‌ ಜೋಯಿಸ್‌, ಕೃಪಾ ಸುದರ್ಶನ್‌ ಜೋಯಿಸ್‌, ಪ್ರಮುಖರಾದ ಯಜ್ಞೇಶ್‌ ಆಚಾರ್ಯ ಉಪಸ್ಥಿತರಿದ್ದರು. ಅಧ್ಯಾಪಕ ಸತ್ಯಶಂಕರ್‌ ನಿರೂಪಿಸಿದರು.

LEAVE A REPLY

Please enter your comment!
Please enter your name here