ಉಪ್ಪಿನಂಗಡಿ: ಕೆಲವು ದಿನಗಳ ಹಿಂದೆ ಟ್ರಾಫಿಕ್ ಜಾಮ್‌ನಿಂದ ಸುದ್ದಿಯಾಗುತ್ತಿದ್ದ ಉಪ್ಪಿನಂಗಡಿ ಪೇಟೆಯಲ್ಲಿ ಪ್ರಯಾಣಿಕರಿಗೆ ಗುರುವಾರ ಮತ್ತೆ ಟ್ರಾಫಿಕ್ ಜಾಮ್‌ನ ಬಿಸಿ ತಟ್ಟಿದೆ. ಸುಮಾರು ಎರಡು ಗಂಟೆಗಳ ಕಾಲ ಇಲ್ಲಿನ ಎಲ್ಲಾ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರನ್ನು ಹೈರಾಣಾಗಿಸಿತು.
ಪೂರ್ವಾಹ್ನ 11 ಗಂಟೆಯ ಬಳಿಕ ಟ್ರಾಫಿಕ್ ಜಾಮ್ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ, ಬಸ್ ನಿಲ್ದಾಣ ರಸ್ತೆ, ಮಾದರಿ ಶಾಲಾ ರಸ್ತೆ, ರಥಬೀದಿ, ಬ್ಯಾಂಕ್ ರಸ್ತೆ ಸೇರಿದಂತೆ ಇಲ್ಲಿನ ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ನಿಂದ ಸಂಪೂರ್ಣ ಬ್ಲಾಕ್ ಆಗುವ ಸ್ಥಿತಿ ನಿರ್ಮಾಣವಾಗಿತ್ತು. ಬಸ್ ನಿಲ್ದಾಣ ವೃತ್ತದ ಬಳಿ ಇಬ್ಬರು ಹೋಂ ಗಾರ್ಡ್‌ಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಬಸ್ ನಿಲ್ದಾಣ ರಸ್ತೆಗೆ ತಿರುವು ಪಡೆಯುವಲ್ಲಿ ಓರ್ವ ಹೋಂ ಗಾರ್ಡ್ ಬಿಟ್ಟರೆ ಇಷ್ಟು ಟ್ರಾಫಿಕ್ ಜಾಮ್ ಸಂಭವಿಸಿದ್ದರೂ ಸುಮಾರು ಒಂದು ಗಂಟೆಯಷ್ಟು ಕಾಲ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಆಗಮಿಸಿರಲಿಲ್ಲ. ಹಲವರ ದೂರಿನ ಬಳಿಕ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ ಅವರು ಪುತ್ತೂರು ಡಿವೈಎಸ್ಪಿಗೆ ವಿಷಯ ತಿಳಿಸಿದ್ದು, ಅವರು ಉಡಾಫೆಯ ಉತ್ತರ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಬಳಿಕ ಸಂಚಾರಿ ಪೊಲೀಸರು ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಬಂದು ಸುಮಾರು ಒಂದು ಗಂಟೆಯಷ್ಟು ಕಾಲ ಶ್ರಮವಹಿಸಿ ಟ್ರಾಫಿಕ್ ಕ್ಲಿಯರ್ ಮಾಡಿದರು. ಇವರೊಂದಿಗೆ ಪ್ರಶಾಂತ್ ಡಿಕೋಸ್ತ ಕೂಡಾ ಟ್ರಾಫಿಕ್ ಜಾಮ್ ಕ್ಲಿಯರ್‌ಗೊಳಿಸುವಲ್ಲಿ ಸಹಕರಿಸಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣ ರಸ್ತೆಗೆ ತಿರುವು ಪಡೆಯುವಲ್ಲಿ ರಾಜಕಾಲುವೆಯ ಕಾಮಗಾರಿ ನಡೆಯುತ್ತಿರುವುದು ಸಂಚಾರ ದಟ್ಟಣೆಗೆ ಒಂದು ಕಾರಣವಾದರೆ, ಪೇಟೆಯೊಳಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ಬರುವ ಗ್ರಾಹಕರು ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಹೋಗುತ್ತಿರುವುದು ಇನ್ನೊಂದು ಕಾರಣವಾಗಿದೆ. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಹೋದರೂ, ಇದರಿಂದ ಸುಗಮ ವಾಹನ ಸಂಚಾರಕ್ಕೆ ತಡೆಯಾದರೂ, ಪೊಲೀಸರು ಯಾವುದೇ ಶಿಸ್ತು ಕ್ರಮ ಅಳವಡಿಸದೇ ಸುಮ್ಮನಾಗಿರುವುದು ಯಾಕೆ ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.
ಕಾರ್ಯರೂಪಕ್ಕೆ ಬಾರದ ಎಸಿ ಸೂಚನೆ: ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯಲ್ಲಿ ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ಮುಂಜಾಗೃತಾ ಸಭೆ ನಡೆದಿದ್ದು, ಈ ಸಂದರ್ಭ ಪುತ್ತೂರು ಸಹಾಯಕ ಆಯುಕ್ತರು ಉಪ್ಪಿನಂಗಡಿಯ ರಾಜಕಾಲುವೆಯ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿ, ಇಲ್ಲಿ ಕಾಮಗಾರಿ ನಡೆಯುವಾಗ ಸಂಚಾರ ದಟ್ಟಣೆ ಸಂಭವಿಸುವ ಸಂಭವವಿದೆ. ಆದ್ದರಿಂದ ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಬೇಕು ಎಂದು ಸಭೆಗೆ ಆಗಮಿಸಿದ ಸಂಚಾರಿ ಪೊಲೀಸ್ ಉಪನಿರೀಕ್ಷಕರಿಗೆ ಸೂಚಿಸಿದ್ದರೂ, ಆದರೂ ಇದು ಮಾತ್ರ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಸಮಸ್ಯೆ ಬಿಗಡಾಯಿಸುತ್ತಿದ್ದಂತೆಯೇ ಕಾಂಕ್ರೀಟ್ ಮೋರಿ ಅಳವಡಿಕೆಗಾಗಿ ರಸ್ತೆಯನ್ನು ಅಗೆದ ಬಳಿಕ ಮಣ್ಣು ಹಾಕದೆ ಇರುವುದರಿಂದ ಲಭ್ಯ ರಸ್ತೆಯ ಭಾಗದಲ್ಲಿ ಏಕ ಕಾಲದಲ್ಲಿ ಎರಡು ಘನ ವಾಹನಗಳು ಸಂಚರಿಸಲು ಅಸಾಧ್ಯವಾದ ಕಾರಣವನ್ನು ಅರಿತು ಹೆದ್ದಾರಿ ಅಗಲೀಕರಣ ಕಾಮಗಾರಿ ನಿರತರನ್ನು ಒತ್ತಾಯಿಸಿ ಕಡಿಯಲಾದ ರಸ್ತೆಗೆ ಮಣ್ಣು ಹಾಕಿಸುವ ಕಾರ್ಯವನ್ನು ಭರದಲ್ಲಿ ನಡೆಸಲಾಯಿತು.
ಬ್ಲಾಕ್ ಮೇಲ್ ಮಾಡಬೇಡಿ ಎಂದರು: ಪ್ರಶಾಂತ್ ಡಿಕೋಸ್ತ
ಉಪ್ಪಿನಂಗಡಿಯಲ್ಲಿ ಸಂಚಾರಿ ದಟ್ಟಣೆ ಉಂಟಾಗಿರುವ ಬಗ್ಗೆ ನನಗೆ ವರ್ತಕರಿಂದ ಹಲವು ಮೊಬೈಲ್ ಕರೆಗಳು ಬಂದವು. ಸ್ಥಳಕ್ಕೆ ತೆರಳಿದಾಗ ಅಲ್ಲಿ ಯಾವುದೇ ಪೊಲೀಸರು ಇರಲಿಲ್ಲ. ಈ ಬಗ್ಗೆ ನಾನು ಪುತ್ತೂರು ಡಿವೈಎಸ್ಪಿಯವರಿಗೆ ಕರೆ ಮಾಡಿ ತಿಳಿಸಿದ್ದು, ‘ಸರ್, ಮೊನ್ನೆಯೆಲ್ಲಾ ಪತ್ರಿಕೆಯಲ್ಲಿ ಟ್ರಾಫಿಕ್ ಜಾಮ್‌ನ ವರದಿಗಳನ್ನು ನೀವು ಗಮನಿಸಿರಬಹುದು. ಇಂದು ಮತ್ತೆ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ತಿಳಿಸಿದ್ದೆ. ಅದಕ್ಕೆ ಡಿವೈಎಸ್ಪಿಯವರು ಪತ್ರಿಕಾ ವರದಿಗೂ ನನಗೂ ಸಂಬಂಧವಿಲ್ಲ. ನೀವು ನನ್ನನ್ನು ಬ್ಲಾಕ್‌ಮೇಲ್ ಮಾಡಬೇಡಿ. ಅಲ್ಲಿನ ಟ್ರಾಫಿಕ್ ಜಾಮ್ ಸಮಸ್ಯೆ ನನಗೆ ಸಂಬಂಧಿಸಿದ್ದಲ್ಲ. ನೀವು ರಾಷ್ಟ್ರೀಯ ಹೆದ್ದಾರಿಯವರಿಗೆ ತಿಳಿಸಿ ಎಂದು ಕರೆ ಕಟ್ ಮಾಡಿದರು.’ ನಾನು ಡಿವೈಎಸ್ಪಿಯವರಲ್ಲಿ ನನ್ನ ವೈಯಕ್ತಿಕ ಸಮಸ್ಯೆ ಹೇಳಿದ್ದಲ್ಲ. ಅದು ಸಾರ್ವಜನಿಕರ ಸಮಸ್ಯೆ. ಆದರೆ ಓರ್ವ ಜವಾಬ್ದಾರಿಯುತ ಅಧಿಕಾರಿಯಾಗಿ ಅದಕ್ಕೆ ಅವರು ಯಾವುದೇ ಸ್ಪಂದನೆ ನೀಡದೇ, ಈ ರೀತಿ ಉಡಾಫೆಯಾಗಿ ವರ್ತಿಸಿರುವುದು ಸರಿಯಲ್ಲ.
ಪ್ರಶಾಂತ್ ಡಿಕೋಸ್ತ
ಅಧ್ಯಕ್ಷರು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಪ್ಪಿನಂಗಡಿ
ಡಿವೈಎಸ್ಪಿ ನಡೆಗೆ ಖಂಡನೆ
ಇತ್ತ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರ ಜೊತೆ ಉಡಾಫೆಯಾಗಿ ಮಾತನಾಡಿದ ಡಿವೈಎಸ್ಪಿಯವರ ನಡೆಯನ್ನು ಖಂಡಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್ , ಸಾರ್ವಜನಿಕರ ಹಿತಾಸಕ್ತಿಯನ್ನು ಮುಂದಿರಿಸಿ ಸಂಘದ ಅಧ್ಯಕ್ಷರು ಪೊಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕನಿಷ್ಠ ಸೌಜನ್ಯದಿಂದ ವರ್ತಿಸಬೇಕು. ಅಧ್ಯಕ್ಷರು ಸ್ವ ಹಿತಕ್ಕಾಗಿ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದ್ದಲ್ಲ. ಸಾರ್ವಜನಿಕರ ಹಿತಕ್ಕಾಗಿ ಸಂಪರ್ಕಿಸಿದ್ದಾಗ ಕೆಟ್ಟದಾಗಿ ವರ್ತಿಸಿದರೆ ಸಹಿಸಲು ಅಸಾಧ್ಯ . ಪ್ರಕರಣವನ್ನು ಸರಕಾರದ ಗಮನಕ್ಕೆ ತರಲಾಗುವುದೆಂದು ತಿಳಿಸಿದ್ದಾರೆ.