ಬಿಂದು ಫ್ಯಾಕ್ಟರಿಯಲ್ಲಿ ಕೊಳವೆ ಬಾವಿ ವಾಹನಗಳ ಮೇಲೆ ಕಲ್ಲು ತೂರಾಟ ಇತ್ತಂಡದ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು:ಬಿಂದು ಫ್ಯಾಕ್ಟರಿಯ ಆವರಣದಲ್ಲಿದ್ದ ಕೊಳವೆ ಬಾವಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಘಟನೆ ಸಂಬಂಧ ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.


ನರಿಮೊಗರು ಗ್ರಾಮದ ಮೇಘಾ ಫ್ರುಟ್ ಪ್ರೊಸೆಸಿಂಗ್ ಪ್ರೈ ಲಿ.ನಲ್ಲಿ ಕೊಳವೆ ಬಾವಿ ಶುದ್ದೀಕರಿಸುವ ಬಗ್ಗೆ ಭೂ ವಿಜ್ಞಾನ ಇಲಾಖೆ ಮತ್ತು ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆದುಕೊಂಡಿದ್ದು ಮೇ.27ರಂದು ಸಂಜೆ ಸಂಸ್ಥೆಯ ಆವರಣದಲ್ಲಿ ಕೊಳವೆ ಬಾವಿ ಶುದ್ದೀಕರಿಸುವ ಸಮಯದಲ್ಲಿ ಸ್ಥಳೀಯ ನಿವಾಸಿಗಳಾದ ಸಲೀಂ ಮತ್ತು ಇತರರು ಸೇರಿಕೊಂಡು ಸಂಸ್ಥೆಯ ಆವರಣದ ಒಳಗೆ ಅಕ್ರಮ ಪ್ರವೇಶ ಮಾಡಿ ಬೋರ್‌ವೆಲ್ ಲಾರಿ ಹಾಗೂ ಅದರಲ್ಲಿದ್ದ ಕಾರ್ಮಿಕರ ಮೇಲೆ ಕಲ್ಲು ಬಿಸಾಡಿರುತ್ತಾರೆ. ಇದರಿಂದ ಕಾರ್ಮಿಕರಾದ ಸಾಂಗ್‌ಲಾಲ್ ಮತ್ತು ಶೇಖರ್ ಎಂಬವರಿಗೆ ಗಾಯವಾಗಿದ್ದು ಲಾರಿಗೆ ಕಲ್ಲು ಬಿದ್ದು ಲಾರಿಯ ಗಾಜು ಪುಡಿಯಾಗಿರುತ್ತದೆ.ಇದರಿಂದ ಸುಮಾರು ರೂ.10 ಸಾವಿರ ನಷ್ಟ ಉಂಟಾಗಿರುತ್ತದೆ ಎಂದು ನರಿಮೊಗರು ಗ್ರಾಮದ ಮೇಘಾ ಫ್ರುಟ್ ಪ್ರೊಸೆಸಿಂಗ್ ಪ್ರೈ ಲಿ. ನಲ್ಲಿ ಮೆನೇಜರ್ ಲಕ್ಷ್ಮೀನಾರಾಯಣ ಎಮ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದಾರೆ.


ನಮಗೆ ಕಲ್ಲು ಬಿಸಾಡಿದ್ದಾರೆ-ಪ್ರತಿ ದೂರು:
ನರಿಮೊಗರು ಗ್ರಾಮದ ಮೇಘಾ ಫ್ರುಟ್ ಪ್ರೊಸೆಸಿಂಗ್ ಪ್ರೈ ಲಿ. ನಲ್ಲಿ, ಅನುಮತಿ ಇಲ್ಲದೇ ಕೊಳವೆ ಬಾವಿ ಶುದ್ದೀಕರಿಸುವ ಬಗ್ಗೆ ಮಾಹಿತಿ ತಿಳಿದಂತೆ ನಾವು ಸಂಸ್ಥೆಯ ಒಳಗೆ ಹೋಗಿ ಗ್ರಾಮ ಪಂಚಾಯತ್ ಅಧಿಕಾರಿಯವರು ಬಂದ ಬಳಿಕ ಕೆಲಸ ಮುಂದುವರೆಸುವಂತೆ ತಿಳಿಸಿದ್ದರೂ ಸದ್ರಿ ಸಂಸ್ಥೆಯವರು ಕೊಳವೆ ಬಾವಿಯ ಶುದ್ದೀಕರಣ ಕೆಲಸವನ್ನು ಮುಂದುವರೆಸಿರುತ್ತಾರೆ.ಅಲ್ಲದೆ ಹೆಚ್ಚುವರಿಯಾಗಿ ಪೈಪ್ ಅನ್ನು ಅಳವಡಿಸುತ್ತಿದ್ದರು.ಈ ಕುರಿತು ಗ್ರಾಮ ಪಂಚಾಯತ್ ಅಧಿಕಾರಿಯಾದ ರವಿಚಂದ್ರರವರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿ, ಸ್ಥಳಕ್ಕೆ ಬರುವಂತೆ ಹೇಳಿ ಸಂಸ್ಥೆಯ ಒಳಗಡೆ ನಡೆಯುತ್ತಿದ್ದ ಪ್ರಕ್ರಿಯೆಯನ್ನು ಅಲ್ಲೇ ಇದ್ದ ಏಣಿಯನ್ನು ಹತ್ತಿ ವಿಡಿಯೋ ಮಾಡಲು ಪ್ರಯತ್ನಿಸುತ್ತಿರುವಾಗ ಸಂಸ್ಥೆಯ ಒಳ ಆವರಣದಲ್ಲಿದ್ದ, ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಎಂಬವರು ನಮ್ಮನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯನ್ನು ಹಾಕಿದ್ದಲ್ಲದೆ ಲಕ್ಷ್ಮೀನಾರಾಯಣ ಮತ್ತು ಇತರರು ಸಂಸ್ಥೆಯ ಒಳಗಿನಿಂದ ಕಲ್ಲು ಬಿಸಾಡಿದ್ದಾರೆ.ಈ ಸಂದರ್ಭ ಕಲ್ಲು ಬಿದ್ದು ನಮಗೆ ಗಾಯವಾಗಿದ್ದಲ್ಲದೆ ನಾವು ಏಣಿಯಿಂದ ಕೆಳಗೆ ಬಿದ್ದಿದ್ದೇವೆ.ಇದರ ಜೊತೆಗೆ ಕಲ್ಲು ಅಲ್ಲೇ ಆಟವಾಡುತ್ತಿದ್ದ ಮಗುವಿನ ಮೇಲೆಯೂ ಬಿದ್ದಿದೆ.ಆರೋಪಿಗಳು ಕೆಲಸ ನಿರ್ವಹಿಸುವ ಸಂಸ್ಥೆಯಲ್ಲಿ ಹೊಸ ಕೊಳವೆ ಬಾವಿಯನ್ನು ಅನುಮತಿಯಿಲ್ಲದೇ ನಿರ್ಮಾಣ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಕ್ಕೆ ಈ ಕೃತ್ಯವನ್ನು ಎಸಗಿರುತ್ತಾರೆ ಎಂಬುದಾಗಿ ಪುರುಷರಕಟ್ಟೆಯ ಮಹಮದ್ ಸಲೀಲ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here