ಉಪ್ಪಿನಂಗಡಿ ಸಿಎ ಬ್ಯಾಂಕ್‌ಗೆ ವಿಜಯಪುರದ ನಿಯೋಗ-ಸಂಘದ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ

0

ಉಪ್ಪಿನಂಗಡಿ: ಸಹಕಾರಿ ಕ್ಷೇತ್ರದಲ್ಲಿ ಅನೇಕ ಹೊಸತನಗಳೊಂದಿಗೆ ವಿಶಾಲವಾಗಿ ಬೆಳೆಯುತ್ತಿರುವ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಬಿಜಾಪುರ ಜಿಲ್ಲೆಯ ವಿಜಯಪುರ ಸಹಕಾರಿ ಸಂಘದ ಆಡಳಿತಗಾರರನ್ನು ಒಳಗೊಂಡ ನಿಯೋಗವು ಅಧ್ಯಯನಕ್ಕೆಂದು ಆಗಮಿಸಿದ್ದು, ಸಂಘದ ಕಾರ್ಯಚಟುವಟಿಕೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿತು.

ವಿಜಯಪುರ ಸಹಕಾರಿ ಸಂಘದ ಅಧ್ಯಕ್ಷ ಸಂಬಾಜಿ ಸಿದ್ದೋಬಾ ಮಿಸಾಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಡಿ. ಬಿರಾದಾರ್ ರವರ ನೇತೃತ್ವದಲ್ಲಿ ಆಗಮಿಸಿದ ನಿಯೋಗ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ , ನಿರ್ದೇಶಕರಾದ ಯಶವಂತ ಜಿ. , ಸಚಿನ್ ಎಂ. , ಶ್ಯಾಮಲಾ ಶೆಣೈ, ಜಗದೀಶ್ ರಾವ್ ಮಣಿಕ್ಕಳ, ರಾಮ ನಾಯ್ಕ್ ರವರೊಂದಿಗೆ ಸಹಕಾರಿ ತತ್ವದಡಿ ನಡೆಸಲಾದ ಕಾರ್ಯಕ್ರಮಗಳ ಮಾಹಿತಿಯನ್ನು ಪಡೆದರು. ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲರಿಗೂ ಸಹಕಾರಿ ತತ್ವದ ಪ್ರಯೋಜನ ಲಭಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಭಾಗದ ಸಹಕಾರಿ ಸಂಘಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಬಾಜಿ ಸಿದ್ದೋಬಾ ಮಿಸಾಲೆ, ನಮ್ಮ ಭಾಗದಲ್ಲಿ ಸಾಲ ನೀಡುವುದು ಮತ್ತು ಸಾಲ ವಸೂಲಿ ಮಾಡುವುದು ಮಾತ್ರ ಸಹಕಾರಿ ಸಂಘಗಳ ಕಾರ್ಯಚಟುವಟಿಕೆಯಾಗಿದೆ. ಆದರೆ ಇಲ್ಲಿ ಸಮಗ್ರ ಬ್ಯಾಂಕಿಂಗ್ ವ್ಯವಸ್ಥೆ, ರಸಗೊಬ್ಬರ ಮಾರಾಟ ವ್ಯವಸ್ಥೆ, ಕೃಷಿ ಸಲಕರಣೆಗಳ ಮಾರಾಟ ವ್ಯವಸ್ಥೆ, ದಿನಸಿ ವಸ್ತುಗಳ ಮಾರಾಟ ಮಳಿಗೆ ವ್ಯವಸ್ಥೆ , ಪಡಿತರ ವಿತರಣಾ ವ್ಯವಸ್ಥೆ, ಬ್ಯಾಂಕಿಂಗ್ ಶಾಖಾ ಕಚೇರಿಗಳ ಕಾರ್ಯ ನಿರ್ವಹಣೆ ಮೊದಲಾದವುಗಳನ್ನು ಕಂಡಾಗ ಸಹಕಾರಿ ತತ್ವವನ್ನು ಇಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here