ರೆಂಜಲಾಡಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಉದ್ಘಾಟನೆ – ಮಾಜಿ ಸಚಿವರುಗಳ ಸಹಿತ ಹಲವು ಗಣ್ಯರ ಆಗಮನ – ಅತ್ಯುತ್ತಮ ಸಂಸ್ಥೆಯಾಗಿ ಆರ್.ಐ.ಸಿ ಗುರುತಿಸುವಂತಾಗಲಿ-ತ್ವಾಖಾ ಅಹ್ಮದ್ ಮುಸ್ಲಿಯಾರ್

0

ಪುತ್ತೂರು: ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ನೀಡುವ ಉದ್ದೇಶಕ್ಕೆ ಸರ್ವೆ ಗ್ರಾಮದ ರೆಂಜಲಾಡಿಯಲ್ಲಿ ನಿರ್ಮಾಣಗೊಂಡ ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನ ನೂತನ ಕಟ್ಟಡದ ಉದ್ಘಾಟನೆ ಮೇ.31ರಂದು ಸಂಜೆ ನಡೆಯಿತು.

ನೂತನ ಕಟ್ಟಡವನ್ನು ಉದ್ಘಾಟಿಸಿ ದುವಾ ನೆರವೇರಿಸಿದ ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರವರು ಆರ್‌ಐಸಿ ಸಂಸ್ಥೆ ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಸಮಾಜದಲ್ಲಿ ಹೆಸರು ಪಡೆಯಲಿ ಎಂದು ಹಾರೈಸಿದರು.
ಇರ್ಷಾದ್ ದಾರಿಮಿ ಮಿತ್ತಬೈಲು, ಎಸ್.ಬಿ ಮುಹಮ್ಮದ್ ದಾರಿಮಿ ಶುಭ ಹಾರೈಸಿದರು. ಆದಂ ಹಾಜಿ ಕಮ್ಮಾಡಿ, ಹಮೀದ್ ದಾರಿಮಿ ಸಂಪ್ಯ, ಅಶ್ರಫ್ ಫಾಝಿಲ್ ಬಾಖವಿ, ಅನೀಸ್ ಕೌಸರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್‌ಐಸಿ ಮುಖ್ಯಸ್ಥ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಉದ್ಘಾಟನಾ ಸಮಾರಂಭದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಹುಸೈನ್ ದಾರಿಮಿಯವರು ಬಹಳ ಕಷ್ಟಪಟ್ಟು ಸ್ಥಾಪನೆ ಮಾಡಿರುವ ಶಿಕ್ಷಣ ಸಂಸ್ಥೆ ಭವಿಷ್ಯದಲ್ಲಿ ನೂರಾರು ಮಕ್ಕಳಿಗೆ ವಿದ್ಯೆ ನೀಡುವ ಕೇಂದ್ರವಾಗಿ ಬೆಳಗಬೇಕು, ಇದಕ್ಕೆ ಯಾವುದೇ ರೀತಿಯ ಸಹಕಾರ ನೀಡಲು ನಾನು ಸಿದ್ದನಿದ್ದೇನೆ ಎಂದು ಹೇಳಿದರು. ಅಲ್ಲದೇ ಕಲ್ಪಣೆ ಭಾಗದಲ್ಲಿ ಸರಕಾರಿ ಪಿಯುಸಿ ನಿರ್ಮಾಣ ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ ರೆಂಜಲಾಡಿ ಎಂಬ ಗ್ರಾಮೀಣ ಭಾಗದಲ್ಲಿ ನಿರ್ಮಾಣಗೊಂಡ ಆರ್‌ಐಸಿ ಶಿಕ್ಷಣ ಸಂಸ್ಥೆ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಲಿದೆ ಎನ್ನುವ ವಿಶ್ವಾಸ ನನಗಿದೆ, ಹುಸೈನ್ ದಾರಿಮಿಯವರು ಬಹಳ ಸಮರ್ಥರು, ಅವರಿಂದ ಈ ಸಂಸ್ಥೆ ಮುನ್ನಡೆಸುವುದು ದೊಡ್ಡ ವಿಷಯವಲ್ಲ, ನಾವೆಲ್ಲರೂ ಪರಸ್ಪರ ಸಹೋದದರಂತೆ ಒಗ್ಗಟ್ಟಾಗಿರಬೇಕು ಎಂದು ಅವರು ಹೇಳಿದರು.

ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿ ಹುಸೈನ್ ದಾರಿಮಿ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯೊಂದು ಪ್ರಾರಂಭಗೊಳ್ಳುತ್ತಿರುವುದು ಸಂತೋಷದ ವಿಚಾರ, ಈ ಸಂಸ್ಥೆ ದಾರಿಮಿಯವರ ಪರಿಶ್ರಮದ ಫಲವಾಗಿ ನಿರ್ಮಾಣಗೊಂಡಿದ್ದು ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಪಡೆದ ಶಿಕ್ಷಣ ಸಂಸ್ಥೆಯಾಗಿ ಗುರಿತಿಸುವಂತಾಗಲಿ, ಇದಕ್ಕೆ ನನ್ನಿಂದಾಗುವ ಸಹಕಾರ ನೀಡಲು ನಾನು ಸಿದ್ದ ಎಂದು ಹೇಳಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಹುಸೈನ್ ದಾರಿಮಿಯವರು ಒಬ್ಬ ಉತ್ತಮ ಸಂಘಟಕ ಮತ್ತು ವಾಗ್ಮಿ, ಅವರ ಭಾಷಣ ಕೇಳುವುದೆಂದರೆ ಅದುವೇ ಒಂದು ಖುಷಿ, ಎಲ್ಲ ಧರ್ಮವನ್ನು ಅರಿತು ಅದರ ಬಗ್ಗೆ ಮಾತನಾಡುವ ಶಕ್ತಿ ಅವರಲ್ಲಿದೆ, ಅವರ ನೇತೃತ್ವದಲ್ಲಿ ಇಲ್ಲಿ ನಿರ್ಮಾಣಗೊಂಡ ಶಿಕ್ಷಣ ಸಂಸ್ಥೆ ಮುಂದಿನ ಪೀಳಿಗೆಗೂ ಉಪಯುಕ್ತವಾಗಲಿದೆ, ಇದರ ಅಭಿವೃದ್ಧಿಗೆ ಅವರ ಜೊತೆ ನಾವೆಲ್ಲಾ ನಿಲ್ಲಬೇಕಾಗಿದೆ ಎಂದು ಅವರು ಹೇಳಿದರು.

ಎಸ್.ಬಿ ಮುಹಮ್ಮದ್ ದಾರಿಮಿ ಮಾತನಾಡಿ ಅನೇಕ ಮಸೀದಿ, ಮದ್ರಸಗಳ ನಿರ್ಮಾಣದಲ್ಲಿ ಹುಸೈನ್ ದಾರಿಮಿಯವರ ಮಹತ್ತರ ಕೊಡುಗೆ ಇದೆ. ಅವರಿಗೆ ಆ ಶಕ್ತಿ, ಸಾಮರ್ಥ್ಯವನ್ನು ಅಲ್ಲಾಹು ಕೊಟ್ಟಿದ್ದಾನೆ, ಇದೀಗ ತನ್ನ ಸ್ವಂತ ಶ್ರಮದಿಂದ ಶಿಕ್ಷಣ ಸಂಸ್ಥೆಯೊಂದನ್ನು ಅವರು ಪ್ರಾರಂಭಿಸಿದ್ದು ಇದು ಯಶಸ್ಸಿನ ಪಥದಲ್ಲಿ ಸಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.

ಆರ್‌ಐಸಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ರೆಂಜಲಾಡಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆನ್ನುವುದು ನನ್ನ ಬಹು ಕಾಲದ ಕನಸಾಗಿದೆ. ಇದೀಗ ಹುಡುಗರ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥಯ ಕಟ್ಟಡ ಉದ್ಘಾಟನೆಗೊಂಡಿದ್ದು ಭವಿಷ್ಯದಲ್ಲಿ ಮಹಿಳಾ ಶರೀಅತ್ ಕಾಲೇಜನ್ನು ಕೂಡಾ ಇಲ್ಲಿ ಸ್ಥಾಪನೆ ಮಾಡುವ ಗುರಿ ಇದೆ ಎಂದು ಹೇಳಿದರು. ಭವಿಷ್ಯದಲ್ಲಿ ಸಮಾಜದಲ್ಲಿ ಉತ್ತಮ ಹೆಸರು ಪಡೆಯುವಂತಹ ಮಕ್ಕಳನ್ನು ಸೃಷ್ಟಿಸುವುದು ನಮ್ಮ ಸಂಸ್ಥೆಯ ಗುರಿಯಾಗಿದ್ದು ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣವನ್ನು ಸಂಸ್ಥೆಯಲ್ಲಿ ನೀಡಲಿದ್ದೇವೆ, ಅದಕ್ಕಾಗಿ ಉತ್ತಮ ಶಿಕ್ಷಕರನ್ನು ಕೂಡಾ ನೇಮಕ ಮಾಡಲಾಗುವುದು ಎಂದು ಹೇಳಿದರು.

ಮುಂಡೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಕೆಐಸಿ ಪ್ರಾಧ್ಯಾಪಕ ಅನೀಸ್ ಕೌಸರಿ, ಇಕ್ಬಾಲ್ ಬಾಳಿಲ, ತಬೂಕ್ ದಾರಿಮಿ, ಸಯ್ಯದ್ ಹಾದಿ ತಂಙಳ್ ಮೊದಲಾದವರು ಸಮಯೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹುಸೈನ್ ದಾರಿಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ರೆಂಜಲಾಡಿ ಮಸೀದಿಯ ಅಧ್ಯಕ್ಷ ಆರ್.ಎಂ ಅಲಿ ಹಾಜಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here