





ರೂ.2.10ಕೋಟಿ ಸಂಗ್ರಹ, ರೂ.2.06ಕೋಟಿ ಖರ್ಚು, ರೂ.4.25 ಲಕ್ಷ ಉಳಿಕೆ


ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ವಿವಿಧ ಮೂಲಗಳಿಂದ ರೂ.2,10,57,709 ಸಂಗ್ರಹವಾಗಿದೆ. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಎಲ್ಲಾ ವೆಚ್ಚಗಳು ಸೇರಿ ರೂ.2,06,33,427 ಕೋಟಿ ಪಾವತಿಸಲಾಗಿದ್ದು ಎಲ್ಲಾ ವೆಚ್ಚಗಳು ಕಳೆದು ರೂ.4.25ಲಕ್ಷ ಉಳಿತಾಯವಾಗಿದೆ ಎಂದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.





ದೇವಸ್ಥಾನದಲ್ಲಿ ಜೂ.2ರಂದು ಸಂಜೆ ನಡೆದ ಲೆಕ್ಕಪತ್ರ ಮಂಡನ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಜೀರ್ಣೋದ್ಧಾರದ ಜೊತೆಗೆ ದೇವಸ್ಥಾನಕ್ಕೆ ಅಗತ್ಯವಾದ 33 ಸೆಂಟ್ಸ್ ಜಾಗವನ್ನು ರೂ.40ಲಕ್ಷ ವೆಚ್ಚದಲ್ಲಿ ಖರೀದಿಸಲಾಗಿದೆ. ಜೀರ್ಣೋದ್ಧಾರ, ಬ್ರಹ್ಮಕಲಶ, ವಾರ್ಷಿಕ ಜಾತ್ರೋತ್ಸವ ಹಾಗೂ ಉಳ್ಳಾಲ್ತಿ, ಉಳ್ಳಾಕ್ಲು ದೈವಸ್ಥಾನದ ನೇಮೋತ್ಸವಗಳು ಸೇರಿದಂತೆ ರೂ.2.06,33,427 ಪಾವತಿಸಲಾಗಿದೆ. ದಾನಿಗಳ ಆರ್ಥಿಕ, ವಸ್ತು ರೂಪ ಸೇರಿದಂತೆ ವಿವಿಧ ರೂಪದ ಸಹಕಾರ, ಭಕ್ತಾದಿಗಳು ಶ್ರಮದಾನ ಮೂಲಕ ಕೆಲಸ ಕಾರ್ಯಗಳು ನಡೆದಿದೆ. ಭಕ್ತಾದಿಗಳ ಕರಸೇವೆಯ ಸುಮಾರು ರೂ.50 ಲಕ್ಷದಷ್ಟು ಮೊತ್ತದ ಕೆಲಸಗಳು ನಡೆದಿದೆ. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಗಳಿಗೆ ಸಂಬಂದಿಸಿದಂತೆ ಎಲ್ಲಾ ಹಣ ಪಾವತಿಸಲಾಗಿದೆ. ಕೆಲವೊಂದು ಬಜೆಟ್ ಗಿಂತ ಹೆಚ್ಚುವರಿಯಾಗಿ ಖರ್ಚಾದ ಮೊತ್ತ ಪಾವತಿಸಲು ಬಾಕಿಯಿದ್ದು ಉಳಿಕೆ ಮೊತ್ತದಲ್ಲಿ ಪಾವತಿಸಲಾಗುವುದು. ಅದನ್ನು ಉಳಿಕೆ ಮೊತ್ತದಲ್ಲಿ ಭರಿಸಲಾಗುವುದು. ಹೀಗಾಗಿ ಯಾವುದೇ ಸಾಲ ಇಲ್ಲದೆ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನೆರವೇರಿಸಲಾಗಿದೆ ಎಂದರು.
ಮುಂದಿನ ಯೋಜನೆಗಳು:
ದೇವಸ್ಥಾನದಲ್ಲಿ ಅಡುಗೆ ಕೋಣೆ, ಅನ್ನಛತ್ರ ಹಾಗೂ ದೇವಸ್ಥಾನದ ಜಾಗಕ್ಕೆ ಸುತ್ತ ಆವರಣಗೋಡೆ ಸೇರಿದಂತೆ ಸುಮಾರು ರೂ.50ಲಕ್ಷದ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬೂಡಿಯಾರ್ ರಾಧಾಕೃಷ್ಣ ರೈ ತಿಳಿಸಿದರು.
ಜೂ.13 ದೃಢಕಲಶ: ದೇವಸ್ಥಾನದಲ್ಲಿ ದೇವರಿಗೆ ದೃಢಕಲಶವು ಜೂ.13ರಂದು ನಡೆಯಲಿದೆ.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎ.ಪಿ ಸತೀಶ್ ರಾವ್, ಸಂಚಾಲಕ ಸುಧಾಕರ ರಾವ್ ಆರ್ಯಾಪು, ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ ಕೂರೇಲು, ಮಹಾಬಲ ರೈ ವಳತ್ತಡ್ಕ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ವೈದಿಕ ಸಮಿತಿ ಸಂಚಾಲಕ ಸಂದೀಪ ಕಾರಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ ಸ್ವಾಗತಿಸಿ, ಸಭಾ ಕಾರ್ಯಕ್ರಮ ಸಮಿತಿ ಸಂಚಾಲಕ ಸೀತಾರಾಮ ರೈ ಕೈಕಾರ ವಂದಿಸಿದರು.








