ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ

0

ಕೇವಲ ಅಂಕ ಪಡೆಯುವುದಷ್ಟೇ ಶಿಕ್ಷಣವಲ್ಲ : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಅಂಕ ಪಡೆಯುವುದಷ್ಟೇ ಶಿಕ್ಷಣ ಅಲ್ಲ, ಭಾರತದ ಸಂಸ್ಕೃತಿ ಮತ್ತು ದೇಶ ಪ್ರೇಮ ಶಿಕ್ಷಣದಲ್ಲಿ ಅಡಕವಾಗಿರಬೇಕು. ನಮ್ಮ ಮಕ್ಕಳು ಕೇವಲ ನಮ್ಮ ಸಂಪತ್ತಷ್ಟೇ ಅಲ್ಲ ಅವರು ರಾಷ್ಟ್ರದ ಸಂಪತ್ತು. ಹಾಗಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ರಾಷ್ಟ್ರಸಂಪತ್ತನ್ನು ಬೆಳೆಸಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು.

ದೇಶದ ಅವ್ಯವಸ್ಥೆಗಳಿಗೆ ಶಿಕ್ಷಣ ಸಂಸ್ಥೆಗಳೇ ಹೊಣೆ. ಸಂಸ್ಕಾರಯುತ ಶಿಕ್ಷಣ ಕೊಟ್ಟಾಗ ಅಂಕಗಳೂ ತನ್ನಿಂತಾನೇ ಒದಗಿಬರುತ್ತವೆ, ರ‍್ಯಾಂಕ್ ಬಂದೇ ಬರುತ್ತದೆ. ಶಿಸ್ತು ಬದ್ಧ ಜೀವನದಿಂದ ಉದ್ದೇಶ ಸಾಧನೆ ಸಾಧ್ಯ. ಆದರೆ ಸಂಸ್ಕಾರತಯುತ ಶಿಕ್ಷಣವನ್ನು ಸಂಸ್ಥೆಗಳು ಕೊಡದೇ ಇದ್ದರೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದರಲ್ಲದೆ ಹೆತ್ತವರು ನಿರಂತರವಾಗಿ ಸಂಸ್ಥೆಯೊಂದಿಗಿನ ಸಂಪರ್ಕದಲ್ಲಿರಬೇಕು. ಆಗ ಮಕ್ಕಳು ಹಾದಿ ತಪ್ಪುವುದಿಲ್ಲ ಎಂದು ತಿಳಿಸಿದರು.

ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ಮಾತನಾಡಿ ಎಲ್ಲಾ ವಿದ್ಯೆಗಳು ಭಾರತದಲ್ಲಿವೆ. ಆದಾಗ್ಯೂ ವಿದೇಶಕ್ಕೆ ಹೋಗಿ ಕಲಿಯುತ್ತೇವೆ. ಆದರೆ ಕನಿಷ್ಟ ಮುಂದಿನ ನಮ್ಮ ಸೇವೆಯಾದರೂ ನಮ್ಮ ದೇಶವಾದ ಭಾರತಕ್ಕೆ ಇರಬೇಕು ಎಂದರು. ಬಪ್ಪಳಿಗೆಯ ಅಂಬಿಕಾ ವಸತಿಯುತ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಶರ್ಮ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶಿವರಾಮ ಆಳ್ವ ಶುಭಹಾರೈಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯಲ್ಲಿ ತಾಲೂಕು ಪ್ರಥಮ ಸ್ಥಾನಿಯಾದ ಶ್ರೀಲಕ್ಷ್ಮಿ, ದ್ವಿತೀಯ ಪಿಯುಸಿಯಲ್ಲಿ ತಾಲೂಕು ಪ್ರಥಮ ಸ್ಥಾನಿಯಾದ ವರುಣ ಎಂ, ಜೆಇಇ ಪ್ರಥಮ ಸ್ಥಾನಿ ಪ್ರಮಿತ್ ರೈ, ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ಅಭಿರಾಮ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪಟ್ಟಿಯನ್ನು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಉಪ ಪ್ರಾಂಶುಪಾಲೆ ಶೈನಿ ಕೆ ಜೆ ಇವರು ವಾಚಿಸಿದರು.

ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗಿತಿಸಿ, ಪ್ರಸ್ತಾವನೆಗೈದರು. ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಅಧಿಕಾರಿ ಗಣೇಶ್ ಪ್ರಸಾದ ಇವರು ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮಾತಾ-ಪಿತರ ಪಾದ ಪೂಜೆಯನ್ನು ನೆರವೇರಿಸಿದ್ದು ಎಲ್ಲರ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here