ವಿಟ್ಲ:ಬಂಟ್ವಾಳ ತಾಲೂಕಿನ ಕನ್ಯಾನ ಪೇಟೆಯಲ್ಲಿ ವಾಹನವೊಂದಕ್ಕೆ ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಹಲ್ಲೆ ನಡೆದಿದ್ದು ಇತ್ತಂಡಗಳವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಂದು ಪ್ರಕರಣದಲ್ಲಿ ದ್ವಿಚಕ್ರ ಸವಾರ ಪ್ರಕಾಶ್ ರವರು ಗಾಯಗೊಂಡು ಆಸ್ಲತ್ರೆಗೆ ದಾಖಲಾದರೆ, ಕನ್ಯಾನ ಮಂಡ್ಯೂರು ನಿವಾಸಿಗಳಾದ ಅಬ್ದುಲ್ ಖಾದರ್ ಮತ್ತು ಮೊಹಮ್ಮದ್ ಸಯಾಪ್ ಎಂಬವರು ಗಾಯಗೊಂಡು ಇನ್ನೊಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಕನ್ಯಾನ ಮುಖ್ಯ ಪೇಟೆಯಲ್ಲಿ ನಾನು ನನ್ನ ಸ್ನೇಹಿತನ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತಿದ್ದ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಯುವಕರ ತಂಡವೊಂದು ತಮ್ಮ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ಸ್ಕೂಟರ್ ನಿಂದ ಎಳೆದು ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ದ್ವಿಚಕ್ರವಾಹನ ಸವಾರ ಪ್ರಕಾಶ್ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಸ್ಥಳೀಯ ಆಸ್ಲತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿದೂರು:
‘ನಾವು ಜೂ.7ರಂದು ರಾತ್ರಿ ವಿಟ್ಲದಿಂದ ಬಂದು ಕನ್ಯಾನ ಜಂಕ್ಷನ್ ನಲ್ಲಿ ಕಾರು ನಿಲ್ಲಿಸಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ಕಾರಿಗೆ ತಮ್ಮ ದ್ವಿಚಕ್ರ ವಾಹನವನ್ನು ಅಡ್ಡ ಇಟ್ಟು, ಜಾತಿ ನಿಂದನೆ ಮಾಡಿ, ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಅಬ್ದುಲ್ ಖಾದರ್ ಮತ್ತು ಮೊಹಮ್ಮದ್ ಸಯಾಪ್ ವಿಟ್ಲ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರ ಪ್ರಕರಣ ದಾಖಲಾಗಿದೆ.