ಹಿರೇಬಂಡಾಡಿ: ಹೆದ್ದಾರಿ ಕಾಮಗಾರಿ ಸಂಸ್ಥೆಯ ಬೇಜಾವಬ್ದಾರಿ – ಕುಸಿಯುವ ಭೀತಿಯಲ್ಲಿ ಮನೆಯ ಆವರಣ ಗೋಡೆ

0

ಉಪ್ಪಿನಂಗಡಿ: ಹಿರೇಬಂಡಾಡಿ ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರ ಬೇಜಾವಬ್ದಾರಿ ಕಾಮಗಾರಿಯಿಂದಾಗಿ ರಾಮನಗರದಲ್ಲಿ ಮನೆಯೊಂದರ ಬೃಹತ್ ಆವರಣ ಗೋಡೆ ಕುಸಿದು ಬೀಳುವ ಹಂತ ತಲುಪಿದೆ. ಇದು ಕುಸಿದು ಬಿದ್ದರೆ ರಸ್ತೆಗೆ ಬೀಳಲಿದ್ದು, ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡುವ ಸಾಧ್ಯತೆಯೂ ಇದೆ.

ರಾಮನಗರದ ನಿವಾಸಿ ಯು.ಟಿ. ಜಮೀಳಾ ಎಂಬವರ ಪಟ್ಟಾ ಜಾಗ ರಸ್ತೆಯ ಬದಿ ಇದ್ದು, ಈ ರಾಜ್ಯ ಹೆದ್ದಾರಿಯು ಅಭಿವೃದ್ಧಿಯಾಗುವ ಸಂದರ್ಭ ತಮ್ಮ ಪಟ್ಟಾ ಭೂಮಿಯನ್ನು ಹೆದ್ದಾರಿಗೆಂದು ಬಿಟ್ಟಿದ್ದರು. ಅಲ್ಲಿ ಹೆದ್ದಾರಿಯ ವಿಸ್ತರಣೆ ಕೆಲಸ ನಡೆದು, ಚರಂಡಿ ಕಾಮಗಾರಿ ನಡೆಯುವಾಗ ಇವರ ಮನೆಯ ಆವರಣ ಗೋಡೆಯ ಅಡಿ ಭಾಗದಿಂದ ಹೆದ್ದಾರಿ ಕಾಮಗಾರಿ ನಡೆಸುವವರು ಮಣ್ಣು ತೆಗೆದಿದ್ದು, ಅದನ್ನು ಹಾಗೆ ಬಿಟ್ಟು ಹೋಗಲಾಗಿತ್ತು. ಈಗ ಮಳೆಗೆ ಇನ್ನಷ್ಟು ಮಣ್ಣು ಜರಿದು, ಬೃಹತಾಗಿರುವ ಇಡೀ ಆವರಣ ಗೋಡೆಯು ಕುಸಿದು ಬೀಳುವ ಅಪಾಯವುಂಟಾಗಿದೆ. ಈ ಆವರಣ ಕುಸಿದು ಬಿದ್ದರೆ ಅದು ಹೆದ್ದಾರಿಯ ಮೇಲೆಯೇ ಬೀಳುವ ಸಂಭವವಿದೆ. ಉಪ್ಪಿನಂಗಡಿಯ ಶಾಲಾ ಕಾಲೇಜುಗಳಿಗೆ ಹೋಗುವ ಈ ಭಾಗದ ಮಕ್ಕಳು ದಿನ ನಿತ್ಯ ಈ ಮಾರ್ಗದ ಮೂಲಕ ನಡೆದುಕೊಂಡು ಹೋಗುತ್ತಿದ್ದು, ಅಲ್ಲದೆ, ಪಾದಚಾರಿ, ವಾಹನಗಳ ಸಂಚಾರವೂ ಈ ಮಾರ್ಗದಲ್ಲಿದೆ. ಈ ವೇಳೆಯೇನಾದರೂ ಈ ಆವರಣಗೋಡೆ ಕುಸಿದು ಬಿದ್ದರೆ ಅಪಾಯವುಂಟಾಗುವ ಸಾಧ್ಯತೆ ಇದೆ.

ಕೃಷಿ ನಾಶ: ಇವರ ತೋಟದ್ ಬಳಿ ಹೆದ್ದಾರಿಗೆ ಅಡ್ಡಲಾಗಿ ಮೋರಿ ಅಳವಡಿಸಿ ಆ ಭಾಗದ ಎಲ್ಲಾ ನೀರನ್ನು ಇವರ ತೋಟಕ್ಕೆ ಬಿಡಲಾಗಿದ್ದು, ಇದರಿಂದಾಗಿ ಇದು ಇವರ ಕೃಷಿ ನಾಶಕ್ಕೂ ಕಾರಣವಾಗಿದೆ.

ಹೆದ್ದಾರಿ ಅಗಲವಾಗಲಿ ಎಂಬ ಆಶಯದಿಂದ ಸುಮಾರು 20 ಸೆಂಟ್ಸ್‌ನಷ್ಟು ನಮ್ಮ ಪಟ್ಟಾ ಜಾಗವನ್ನು ನಾವು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಿಟ್ಟು ಕೊಟ್ಟಿದ್ದೇವೆ. ಆದರೆ ಹೆದ್ದಾರಿ ಕಾಮಗಾರಿ ನಡೆಸುವವರು ಈ ಭಾಗದ ಎಲ್ಲಾ ಚರಂಡಿ ನೀರನ್ನು ಮೋರಿಯ ಮೂಲಕ ನಮ್ಮ ಪಟ್ಟಾ ಜಾಗದಲ್ಲಿರುವ ತೋಟಕ್ಕೆ ಬಿಟ್ಟಿದ್ದಾರೆ. ಎಲ್ಲಾ ನೀರನ್ನು ನಮ್ಮ ತೋಟಕ್ಕೆ ಬಿಡುವ ಅಗತ್ಯ ಇರಲಿಲ್ಲ. ಬೇರೆ ಕಡೆಯೂ ಮೋರಿ ಅಳವಡಿಸಲು ಅವಕಾಶಗಳಿದ್ದರೂ, ಅವರು ಹಾಗೆ ಮಾಡದೇ ನಮ್ಮ ತೋಟಕ್ಕೆ ಹರಿಸಿದ್ದಾರೆ. ಇದರಿಂದ ನಮ್ಮ ಕೃಷಿ ನಾಶವಾಗುವಂತಾಗಿದೆ. ಚರಂಡಿ ನಿರ್ಮಿಸುವಾಗ ಕೂಡಾ ನಮ್ಮ ಮನೆಯ ಆವರಣಗೋಡೆಯ ಅಡಿ ಭಾಗದಿಂದ ಮಣ್ಣನ್ನು ತೆಗೆದಿದ್ದಾರೆ. ಇದಕ್ಕೆ ಕಾಮಗಾರಿ ನಡೆಯುವ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದಾಗ, ನಾವು ಇದನ್ನು ಸರಿ ಮಾಡಿಕೊಡುತ್ತೇವೆ ಎಂದಿದ್ದರು. ಆದರೆ ಅವರ ಕೆಲಸ ಮುಗಿದ ಕೂಡಲೇ ಅವರು ಯಾವುದನ್ನೂ ಮಾಡದೇ ಅಲ್ಲಿಂದ ಹೋಗಿದ್ದಾರೆ. ಈಗ ನಮ್ಮ ಆವರಣ ಗೋಡೆ ಕುಸಿಯುತ್ತಿದ್ದು, ಇಡೀ ಆವರಣ ಗೋಡೆಯೇ ಬೀಳುವ ಅಪಾಯದಲ್ಲಿದೆ. ಆವರಣ ಗೋಡೆ ಬಿದ್ದು ಅನಾಹುತಗಳು ಸಂಭವಿಸಿದರೆ ಇದಕ್ಕೆ ಹೊಣೆ ಯಾರು? ಚರಂಡಿ ಕಾಮಗಾರಿ ಸಂದರ್ಭ ಅವರು ಚರಂಡಿಯ ಕಾಂಕ್ರೀಟ್ ಗೋಡೆಯನ್ನು ಸ್ವಲ್ಪ ಎತ್ತರಿಸಿ ಕಟ್ಟಿದ್ದರೆ ಆವರಣ ಗೋಡೆಗೆ ಯಾವುದೇ ಅಪಾಯವುಂಟಾಗುತ್ತಿರಲಿಲ್ಲ ಎನ್ನುತ್ತಾರೆ ಯು.ಟಿ. ಜಮೀಳಾ ಅವರ ಸಹೋದರ ಯು.ಟಿ. ಮುಸ್ತಾಫ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here