ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಮುಚ್ಚಳ ನಾಪತ್ತೆ, ವಿರೂಪಗೊಂಡ ಶಾಲಾ ಗೋಡೆ
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯ ವಠಾರದಲ್ಲಿರುವ ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್‌ನಿಂದ ನಡೆಯುತ್ತಿರುವ ವಿದ್ಯಾಜ್ಯೋತಿ ಎಲ್.ಕೆ.ಜಿ. ಮತ್ತು ಯುಕೆಜಿ ಕಟ್ಟಡದ ಮೇಲಿನ ನೀರಿನ ಟ್ಯಾಂಕ್‌ನ ಮುಚ್ಚಳ ತಪ್ಪಿಸಿ, ಗೋಡೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ ಘಟನೆ ಜೂ.10ರಂದು ಬೆಳಕಿಗೆ ಬಂದಿದೆ.
ಪ್ರತಿ ಬಾರಿ ನೆಲ್ಲಿಕಟ್ಟೆ ಶಾಲೆಯ ಪರಿಸರದಲ್ಲಿ ಕಿಡಿಗೇಡಿಗಳಿಂದ ಹಲವು ಕುಕೃತ್ಯಗಳು ನಡೆಯುತ್ತಿವೆ. ಇತ್ತೀಚೆಗಷ್ಟೆ ಶಾಲೆಯ ವಠಾರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಸಿ ಕ್ಯಾಮರ ಕಳವಾಗಿತ್ತು. ಬಳಿಕ ಅಲ್ಲಿ ಬಾಗಿಲು ಒಡೆದು ಆರೋಗ್ಯ ಕೇಂದ್ರದ ಪರಿಕರಗಳಿಗೆ ಹಾನಿ ಮಾಡಲಾಗಿತ್ತು. ಅಲ್ಲೇ ಪಕ್ಕದಲ್ಲಿರುವ ಶಾಲೆಯ ನೀರಿನ ಪೈಪ್‌ನ್ನು ತುಂಡರಿಸಲಾಗಿತ್ತು. ಶಾಲೆಯ ಹಂಚುಗಳಿಗೆ ಹಾನಿ ಮಾಡಲಾಗಿತ್ತು. ಹೀಗೆ ಹಲವು ಬಾರಿ ಶಾಲೆ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಕಿಡಿಗೇಡಿಗಳು ಹಾನಿ ಮಾಡಿ ವಿಕೃತಿ ಮೆರೆಯುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಇಲ್ಲಿನ ತನಕ ಯಾವುದೇ ಕಿಡಿಗಳು ಪತ್ತೆಯಾಗಿಲ್ಲ. ಇದೀಗ ಶಾಲೆಯ ಎಲ್.ಕೆ.ಜಿ ಮತ್ತು ಯುಕೆಜಿ ಶಾಲಾ ಕಟ್ಟಡದ ಕುಡಿಯುವ ನೀರಿನ ಟ್ಯಾಂಕ್ ಮುಚ್ಚಳವನ್ನು ಬೇರೆಲ್ಲೋ ಬಿಸಾಡಿದ್ದಾರೆ. ಶಾಲೆಯ ಗೋಡೆಯನ್ನು ವಿರೂಪಗೊಳಿಸಿದ್ದಾರೆ. ಟ್ಯಾಂಕ್ ಮುಚ್ಚಳ ತೆರೆದಿರುವುದರಿಂದ ನೀರಿಗೆ ಏನಾದರೂ ಬೆರೆಸಿರಬಹುದೆಂಬ ಆತಂಕ ಶಾಲೆಯಲ್ಲಿ ಹುಟ್ಟಿದೆ. ಘಟನೆ ಕುರಿತು ಸಂಬಂಧಿಸಿದವರು ಕಿಡಿಗೇಡಿಗಳನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಶಾಲೆಯ ಹಿತೈಷಿಗಳು ಆಗ್ರಹಿಸಿದ್ದಾರೆ.