ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಪಾರಂಪರಿಕ ದಿನಾಚರಣೆ

0

ಮಕ್ಕಳು ಹೆತ್ತವರ ಕಣ್ಣೀರಿಗೆ ಕಾರಣರಾಗಬಾರದು : ಸುರೇಶ ಶೆಟ್ಟಿ


ಪುತ್ತೂರು: ಪಾರಂಪರಿಕ ದಿನಾಚರಣೆ ಕೇವಲ ಒಂದು ದಿನದ ಪ್ರೇರಣೆಯಾಗದೆ, ನಿತ್ಯ ಜೀವನದಲ್ಲಿ ನಮ್ಮ ಬದುಕಿನ ಮೇಲೆ ಪ್ರಭಾವ ಬೀರುವ ಆಚರಣೆ ಎನಿಸಬೇಕು. ನಮ್ಮ ಜೀವನಪದ್ಧತಿ, ಆಚಾರ ವಿಚಾರಗಳು ಸಂಸ್ಕಾರದ ನೆಲೆಯಲ್ಲಿ ಬೆಳೆದು ಬಂದಾಗ ನಮ್ಮ ವ್ಯಕ್ತಿತ್ವ ಬೆಳಗುವುದಕ್ಕೆ ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸರೇಶ ಶೆಟ್ಟಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾದ ಪಾರಂಪರಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಭಾಗವಹಿಸಿ ಗುರುವಾರ ಮಾತನಾಡಿದರು.
ಮಕ್ಕಳ ಸಾರ್ಥಕತೆ ಹೆತ್ತವರನ್ನು ಸಂತೋಷವಾಗಿ ಇಡುವುದರಲ್ಲಿ ಅಡಗಿದೆ. ನಮ್ಮ ಹೆತ್ತವರು ಎಂದೂ ನಮ್ಮ ಕಾರಣಕ್ಕಾಗಿ ಕಣ್ಣೀರು ಹಾಕುವಂತಹ ಸಂದರ್ಭವನ್ನು ಸೃಷ್ಟಿಸಬಾರದು ಎಂದರಲ್ಲದೆ ಹಸಿದವನಿಗೆ ಆಹಾರ ನೀಡುವುದು, ಅನಾರೋಗ್ಯದವರನ್ನು ಪಾಲನೆ ಮಾಡುವುದು ಶ್ರೇಷ್ಟವಾದ ಪುಣ್ಯ ಕಾರ್ಯವೆನಿಸುತ್ತದೆ. ಬದುಕಿನುದ್ದಕ್ಕೂ ಇಂತಹ ಆದರ್ಶಗಳನ್ನು ಪಾಲಿಸುತ್ತಾ ಸಾಗಬೇಕು ಎಂದು ಕರೆ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಪಾರಂಪರಿಕ ದಿನವನ್ನು ಆಚರಿಸುವುದರ ಹಿಂದೆ ನಾವು ಹೇಗಿರಬೇಕೆಂಬ ಸಂದೇಶವನ್ನು ನೀಡುವ ಉದ್ದೇಶ ಅಡಗಿದೆ. ಎದೆಯೆತ್ತರಕ್ಕೆ ಬೆಳೆದು ನಿಂತ ಮಕ್ಕಳು ಸೀರೆಯಲ್ಲಿ, ಪಂಚೆಯಲ್ಲಿ ಹೊರಟು ನಿಂತಾದ ಹೆತ್ತವರಿಗಾಗಬಹುದಾದ ಸಂಭ್ರಮ ಅನೂಹ್ಯವಾದದ್ದು. ಭಾರತೀಯ ಉಡುಗೆ ತೊಡುಗೆಗಳು ನಮ್ಮ ಸೌಂದರ್ಯಕ್ಕೆ ಪೂರಕವಾದದ್ದೇ ಆಗಿವೆ ಎಂದರು.


ಇಂದು ಮೈಯನ್ನು ತೆರೆದಿಡುವ ವಸ್ತ್ರಗಳಿಗೆ ನಾವು ಮಾರುಹೋಗುತ್ತಿದ್ದೇವೆ. ನಮ್ಮದಲ್ಲದ ವಿಕೃತಿಗಳನ್ನು ಅಪ್ಪಿಕೊಳ್ಳುತ್ತಿದ್ದೇವೆ. ಇದು ನಮ್ಮ ವ್ಯಕ್ತಿತ್ವವನ್ನು ಹಾಳುಗೆಡವುತ್ತಿದೆ. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುವಲ್ಲಿ ಉಡುಗೆ ತೊಡುಗೆಗಳ ಪಾತ್ರವೂ ಇದೆ. ಯಾರೋ ಒಬ್ಬಾಕೆಯ ಅಶ್ಲೀಲಕರವಾದ ಬಟ್ಟೆ ಮತ್ಯಾರೋ ಮುಗ್ಧೆಯೊಬ್ಬಳ ಮೇಲಿನ ದೌರ್ಜನ್ಯಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಮರೆಯಬಾರದು. ನಮ್ಮ ಸ್ವಾತಂತ್ರ್ಯ ಎಂಬುದು ಚೌಕಟ್ಟಿನೊಳಗೆಯೇ ಇದ್ದಾಗ ವ್ಯಕ್ತಿತ್ವ ಅರಳುತ್ತದೆ. ಗಂಡುಮಕ್ಕಳು ಮತ್ತು ಹೆಣ್ಣು ಮಕ್ಕಳು ಇಬ್ಬರೂ ತಮ್ಮ ಜನ್ಮದ ಸಾರ್ಥಕತೆಯ ನೆಲೆಯಲ್ಲಿ ವ್ಯವಹರಿಸಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಆನಂದೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಯೋಗ ಶಿಕ್ಷಕಿ ಶರಾವತಿ ರವಿನಾರಾಯಣ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಚೈತನ್ಯಾ ಸಿ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಿಯಾಲ್ ಆಳ್ವಾ ಸ್ವಾಗತಿಸಿ, ಅಧ್ಯಕ್ಷ ನವನೀತ್ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here