24.50 ಎಕ್ರೆ ಜಾಗ ಮಂಜೂರಾದರೂ ಆರಂಭವಾಗದ ಕಟ್ಟಡ ಕಾಮಗಾರಿ – ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಣೆ
ನೆಲ್ಯಾಡಿ: ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜು ಆರಂಭಗೊಂಡು ಆರು ವರ್ಷವಾದರೂ ಸರಕಾರದಿಂದ ಇನ್ನೂ ಅನುಮತಿ ದೊರೆತಿಲ್ಲ. ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿ ಮಂಗಳೂರು ವಿವಿಗೆ 24.50 ಎಕ್ರೆ ಜಾಗ ಮಂಜೂರುಗೊಂಡಿದ್ದರೂ ಕಟ್ಟಡ ನಿರ್ಮಾಣ ಕೆಲಸ ಇನ್ನೂ ಆರಂಭಗೊಂಡಿಲ್ಲ. ಕಳೆದ ಆರು ವರ್ಷಗಳಿಂದಲೂ ಕಾಲೇಜು ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ.
ಗ್ರಾಮೀಣ ಪ್ರದೇಶವಾದ ನೆಲ್ಯಾಡಿಗೆ ಸರಕಾರಿ ಪದವಿ ಕಾಲೇಜು ಬೇಕೆಂದು ಇಲ್ಲಿನ ಶಿಕ್ಷಣ ಪ್ರೇಮಿಗಳೆಲ್ಲರೂ ಒಟ್ಟು ಸೇರಿಕೊಂಡು ಕಾಲೇಜು ಅನುಷ್ಠಾನ ಸಮಿತಿ ರಚಿಸಿಕೊಂಡು ಕಾಲೇಜು ಸ್ಥಾಪನೆಗೆ ಪ್ರಯತ್ನ ಆರಂಭಿಸಿದ್ದರು. ಅನುಷ್ಠಾನ ಸಮಿತಿ ಅಧ್ಯಕ್ಷೆಯಾಗಿ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಹಾಗೂ ಕಾರ್ಯದರ್ಶಿಯಾಗಿ ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ಶಿವಪ್ರಸಾದ್ ಬೀದಿಮಜಲು ಅವರನ್ನು ನೇಮಕ ಮಾಡಲಾಗಿತ್ತು. ಅವರ ನೇತೃತ್ವದಲ್ಲಿ ನೆಲ್ಯಾಡಿಯ ಪ್ರಮುಖ ನಾಯಕರನ್ನು ಸೇರಿಸಿಕೊಂಡು ನೆಲ್ಯಾಡಿಯಲ್ಲಿ ಘಟಕ ಕಾಲೇಜು ಆರಂಭಿಸುವಂತೆ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಕಾಲೇಜು ಆರಂಭಕ್ಕೆ ಪೂರಕವಾಗಿ ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿ 24.50 ಎಕ್ರೆ ಜಾಗವನ್ನೂ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಮಂಜೂರುಗೊಳಿಸಲಾಗಿತ್ತು. ಅನುಷ್ಠಾನ ಸಮಿತಿಯವರ ಶ್ರಮ ಹಾಗೂ ಹೋರಾಟದ ಫಲವಾಗಿ, ವಿಜಯಕುಮಾರ್ ಸೊರಕೆ ಅವರು ಸಿಂಡಿಕೇಟ್ ಸದಸ್ಯರಾಗಿದ್ದ ಹಾಗೂ ಎಸ್.ಎಲ್.ಭೈರಪ್ಪ ಅವರು ಉಪ ಕುಲಪತಿಯಾಗಿದ್ದ ಸಂದರ್ಭದಲ್ಲಿ ಮಂಗಳೂರು ವಿವಿಯ ಘಟಕ ಕಾಲೇಜು ನೆಲ್ಯಾಡಿಯಲ್ಲಿ ಆರಂಭಕ್ಕೆ ವಿವಿಯಿಂದ ಅನುಮತಿ ನೀಡಲಾಗಿತ್ತು. 2018ರ ಆಗಸ್ಟ್ ತಿಂಗಳಿನಲ್ಲಿ ಬಿ.ಎ.,ಹಾಗೂ ಬಿ.ಕಾಂ.ತರಗತಿಗಳು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲಿ ಆರಂಭಗೊಂಡಿತು. ಆರಂಭದಲ್ಲಿ ಇಲ್ಲಿ 30 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದರು. 2018-19 ಹಾಗೂ 2019-20ನೇ ಶೈಕ್ಷಣಿಕ ಸಾಲಿನ ತರಗತಿಗಳು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿಯೇ ನಡೆಯಿತು.
ಕೃಷ್ಣಸೌರಭ ಕಾಂಪ್ಲೆಕ್ಸ್ಗೆ ಸ್ಥಳಾಂತರ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಕೊಠಡಿಗಳ ಕೊರತೆ ಹಿನ್ನೆಲೆಯಲ್ಲಿ ನೆಲ್ಯಾಡಿ ಗಾಂಧಿಮೈದಾನದ ಪಕ್ಕದಲ್ಲಿರುವ ಕೃಷ್ಣ ಸೌರಭ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಂಡಿತು. ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಗತಿ ನಡೆಯುತ್ತಿದೆ. 2022-23ನೇ ಶೈಕ್ಷಣಿಕ ಸಾಲಿನಿಂದ ಬಿಬಿಎ ತರಗತಿಗಳೂ ನಡೆಯುತ್ತಿದ್ದು ಈಗ ಬಿ.ಎ., ಬಿ.ಕಾಂ.,ಹಾಗೂ ಬಿಬಿಎಯಲ್ಲಿ ಒಟ್ಟು 97 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಠ್ಯದ ಜೊತೆಗೆ ಎಲ್ಲಾ ರೀತಿಯ ಪಠ್ಯೇತರ ಚಟುವಟಿಕೆಗಳಿಗೂ ಇಲ್ಲಿ ಒತ್ತು ನೀಡಲಾಗಿದ್ದು ಎಲ್ಲಾ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದಾರೆ. ನೆಲ್ಯಾಡಿ ಘಟಕ ಕಾಲೇಜಿಗೆ ಸರಕಾರದಿಂದ ಅನುಮತಿ ದೊರೆಯದೇ ಇರುವುದರಿಂದ ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಸಿಬ್ಬಂದಿವರ್ಗ: ನೆಲ್ಯಾಡಿ ಘಟಕ ಕಾಲೇಜಿಗೆ ಖಾಯಂ ಪ್ರಾಂಶುಪಾಲರ ನೇಮಕವಾಗಿದ್ದು ವಾರಕ್ಕೊಮ್ಮೆ ನೆಲ್ಯಾಡಿ ಘಟಕ ಕಾಲೇಜಿನಲ್ಲಿರುತ್ತಾರೆ. ಡಾ.ಸೀತಾರಾಮ ಅವರು ಸಹ ಸಂಯೋಜಕರಾಗಿದ್ದು ಕಾಲೇಜಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಒಟ್ಟು 16 ಉಪನ್ಯಾಸಕರು, ಮೂವರು ಬೋಧಕೇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
24.50 ಎಕ್ರೆ ಜಾಗ ಮಂಜೂರು: ಮಂಗಳೂರು ವಿವಿ ಘಟಕ ಕಾಲೇಜಿನ ಅನುಷ್ಠಾನ ಸಮಿತಿಯ ಪ್ರಯತ್ನದ ಫಲವಾಗಿ ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿನ ಸರ್ವೆ ನಂಬ್ರ 186ರಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ 24.50 ಎಕ್ರೆ ಜಾಗ ಮಂಜೂರುಗೊಂಡಿದೆ. ಮಂಗಳೂರು ವಿಶ್ವ ವಿದ್ಯಾನಿಲಯದ ಹೆಸರಿನಲ್ಲಿ ಆರ್‌ಟಿಸಿಯೂ ಆಗಿದೆ. ಆದರೆ ಅನುದಾನದ ಕೊರತೆಯಿಂದಾಗಿ ಇಲ್ಲಿ ಕಟ್ಟಡ ನಿರ್ಮಾಣ ಕೆಲಸ ಪೆಂಡಿಂಗ್ ಆಗಿದೆ ಎಂದು ತಿಳಿದುಬಂದಿದೆ.
ಸಚಿವರು, ಕುಲಾಧಿಪತಿಗೆ ಪತ್ರ
ನೆಲ್ಯಾಡಿ ಸೇರಿದಂತೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಡುವ ನಾಲ್ಕು ಘಟಕ ಕಾಲೇಜುಗಳು ಕಾರ್ಯ ನಿರ್ವಹಿಸಲು ಕಳೆದ ನಾಲ್ಕು ವರ್ಷಗಳಿಂದ ಸರಕಾರದಿಂದ ಅನುಮತಿ ದೊರಕಿಲ್ಲ. ಜತೆಗೆ ಆರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿರುವುದರಿಂದ ಅವುಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೂ ಪತ್ರದ ಮೂಲಕ ತಿಳಿಸಲಾಗಿದೆ ಎಂದು ಮಂಗಳೂರು ವಿವಿ ಉಪ ಕುಲಪತಿ ಡಾ|ಪಿ.ಎಲ್.ಧರ್ಮ ತಿಳಿಸಿದ್ದಾರೆ.ಕಳೆದ ಆರೇಳು ವರ್ಷಗಳಿಂದೀಚೆಗೆ ಬನ್ನಡ್ಕ ಹಾಗೂ ನೆಲ್ಯಾಡಿಯ ಕಾಲೇಜುಗಳು, ಮಂಗಳೂರು ವಿಶ್ವವಿದ್ಯಾನಿಲಯದ ಆವರಣದ ಘಟಕ ಕಾಲೇಜು, ಸಂಧ್ಯಾ ಕಾಲೇಜುಗಳು ಕಳೆದ ಏಳೆಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಅವುಗಳ ಸ್ಟಾಚ್ಯೂಟ್‌ಗೆ ಸರಕಾರದಿಂದ ಅನುಮತಿ ದೊರಕಿಲ್ಲ. ಅನುಮತಿಗಾಗಿ 2014ರ ಏಪ್ರಿಲ್ 15ರಂದು ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆಯಲಾಗಿದೆ ಎಂದು ಡಾ|ಪಿ.ಎಲ್.ಧರ್ಮ ಅವರು ತಿಳಿಸಿದರು.
ಮುಚ್ಚುವ ಮಾತೆತ್ತಿಲ್ಲವಾದರೂ ಅನುಮತಿಯೇ ಇಲ್ಲದೆ ನಡೆಸುವುದು ಅಸಾಧ್ಯ: ಘಟಕ ಕಾಲೇಜು ಮುಚ್ಚುವ ಬಗ್ಗೆ ಎಲ್ಲಿಯೂ ವಿವಿ ಮಾತೆತ್ತಿಲ್ಲ. ಆದರೆ ಸರಕಾರದಿಂದ ಅನುಮತಿಯೇ ಇಲ್ಲದೆ ಈ ಕಾಲೇಜುಗಳನ್ನು ನಡೆಸುವುದು ಅಸಾಧ್ಯ. ಈ ಹಿಂದೆ ಅನುಮತಿಯ ಭರವಸೆಯೊಂದಿಗೆ ಆರಂಭಿಸಿ ನಡೆಸಲಾಗುತ್ತಿತ್ತಾದರೂ ಮುಂದೆ ನಡೆಸುವುದು ಸಾಧ್ಯವಿಲ್ಲ ಎನ್ನುವ ನಿಟ್ಟಿನಲ್ಲಿ ಈ ಬಾರಿ ದಾಖಲಾತಿ ಆರಂಭದ ಬಗ್ಗೆ ವಿವಿ ಪ್ರಸ್ತಾವನೆ ಹೊರಡಿಸಿತ್ತು ಎಂದು ಡಾ|ಧರ್ಮ ಅವರು ಸ್ಪಷ್ಟನೆ ನೀಡಿದ್ದಾರೆ. ಸಿಬ್ಬಂದಿಗೆ ಮೂರ‍್ನಾಲ್ಕು ತಿಂಗಳಿಗೊಮ್ಮೆ ವೇತನ: ಮಂಗಳೂರು ವಿಶ್ವವಿದ್ಯಾನಿಲಯವು ತನ್ನ ಆಂತರಿಕ ಸಂಪತ್ತಿನ ಕ್ರೋಢೀಕರಣ ಶಕ್ತಿಯನ್ನು ಕಳೆದುಕೊಂಡಿದೆ.ಆಳ್ವಾಸ್, ಪುತ್ತೂರಿನ ವಿವೇಕಾನಂದ, ಫಿಲೋಮಿನಾ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗಿರುವುದರಿಂದ ಅವುಗಳಿಂದ ಬರುತ್ತಿದ್ದ ಶುಲ್ಕವೂ ಸಿಗುತ್ತಿಲ್ಲ.ಕೊರೋನಾ ಬಳಿಕ ಸರಕಾರದಿಂದ ಅನುದಾನವೂ ಬರುತ್ತಿಲ್ಲ.ಇದರ ಜತೆಗೆ ಈ ಘಟಕ ಕಾಲೇಜುಗಳ ನಿರ್ವಹಣೆಯೂ ಕಷ್ಟವಾಗಿ, ಉಪನ್ಯಾಸಕರು, ಸಿಬ್ಬಂದಿಗೆ ಮರ‍್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವ ಪರಿಸ್ಥಿತಿ ಎದುರಾಗಿದೆ ಎಂದರು. ದೂರ ಶಿಕ್ಷಣ ಕೇಂದ್ರ ಬಂದ್: ವಿವಿಗೆ ಆದಾಯ ನೀಡುತ್ತಿದ್ದ ದೂರ ಶಿಕ್ಷಣ ಕೇಂದ್ರವನ್ನು ಸರಕಾರದ ಆದೇಶದ ಮೇರೆಗೆ ಮುಚ್ಚಲಾಗಿದೆ.ಮಂಗಳೂರು ವಿವಿಯ ಆಂತರಿಕ ಸಂಪನ್ಮೂಲ ಕಾಲೇಜುಗಳ ಶುಲ್ಕ, ವಿವಿಧ ಸರ್ಟಿಫಿಕೇಟ್‌ಗಳಿಂದ ಬರುವ ಮೊತ್ತಕ್ಕೆ ಸೀಮಿತಗೊಂಡಿದೆ.ಯುಜಿಸಿ ಪ್ರಾಜೆಕ್ಟ್ಗಳು, ಕೈಗಾರಿಕೆಗಳಿಂದ ದೊರೆಯುತ್ತಿದ್ದ ಆದಾಯವೂ ಕಡಿಮೆ ಆಗಿದೆ.ಈ ಎಲ್ಲದರ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ ಎಂದ ಅವರು,ಈಗಾಗಲೇ ಮಂಗಳೂರು ವಿವಿ ಕ್ಯಾಂಪಸ್‌ನೊಳಗಿನ ಘಟಕ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ದಾಖಲಾತಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರ ಭರವಸೆ ಮೇರೆಗೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾಲೇಜು ಉಳಿಯಬೇಕು
ಆರು ವರ್ಷದ ಹಿಂದೆ ನೆಲ್ಯಾಡಿಯಲ್ಲಿ ಘಟಕ ಕಾಲೇಜು ಆರಂಭಿಸುವಂತೆ ಮಂಗಳೂರು ವಿವಿಗೆ ಮನವಿ ಮಾಡಲಾಗಿತ್ತು. ಅವರ ಬೇಡಿಕೆಯಂತೆ ನೆಲ್ಯಾಡಿಯಲ್ಲಿ 24.50 ಎಕ್ರೆ ಜಾಗ ಮಂಜೂರುಗೊಳಿಸಲಾಗಿದೆ. ಮಂಗಳೂರು ವಿವಿ ಹೆಸರಿನಲ್ಲಿ ಈ ಜಾಗದ ಆರ್‌ಟಿಸಿಯೂ ಆಗಿದೆ. ಆ ಬಳಿಕವೇ ವಿಜಯಕುಮಾರ್ ಸೊರಕೆ ಅವರು ಸಿಂಡಿಕೇಟ್ ಸದಸ್ಯರಾಗಿದ್ದಾಗ ಹಾಗೂ ಎಸ್.ಎಲ್.ಭೈರಪ್ಪ ಅವರು ಉಪಕುಲಪತಿ ಆಗಿದ್ದ ವೇಳೆ ನೆಲ್ಯಾಡಿಯಲ್ಲಿ ಕಾಲೇಜು ಆರಂಭಗೊಂಡಿದೆ.
ಆ ಬಳಿಕ ಬಂದ ಉಪಕುಲಪತಿಗಳಾದ ಯಡಪಡಿತ್ತಾಯ ಅವರು ಇದನ್ನು ಮುಂದುವರಿಸಿಕೊಂಡು ಹೋಗಿದ್ದರು. ಈಗಿನ ಉಪಕುಲಪತಿಗಳೂ ಕಾನೂನು ತೊಡಕು ನಿವಾರಿಸಿಕೊಂಡು ಕಾಲೇಜು ಮುಂದುವರಿಸಬೇಕು. ಇದಕ್ಕೆ ಈ ಭಾಗದ ಸಿಂಡಿಕೇಟ್ ಸದಸ್ಯರೂ ಜವಾಬ್ದಾರರು. ಕಾಲೇಜು ಮುಚ್ಚಲು ಹೋದಲ್ಲಿ ಉಗ್ರರೀತಿಯಲ್ಲಿ ಹೋರಾಟ ನಡೆಸುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಕಾಲೇಜು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಟ ನಡೆಸಲೂ ಹಿಂಜರಿಯುವುದಿಲ್ಲ.
ಉಷಾ ಅಂಚನ್ ಅಧ್ಯಕ್ಷರು,
ಮಂಗಳೂರು ವಿವಿ ಘಟಕ ಕಾಲೇಜು ನೆಲ್ಯಾಡಿ ಅನುಷ್ಠಾನ ಸಮಿತಿ