ನಿಮ್ಮ ಮಗನನ್ನು ಡ್ರಗ್ಸ್ ಕೇಸ್‌ನಲ್ಲಿ ಬಂಧಿಸಿದ್ದೇವೆ-ಬಿಡಿಸಲು ಹಣ ಕಳಿಸಿ ಜವುಳಿ ಉದ್ಯಮಿಗೆ ಅನಾಮಿಕ ಬೆದರಿಕೆ ಕರೆ-ಪೊಲೀಸರಿಗೆ ದೂರು

0

ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಪೋಷಕರಿಗೆ ಕರೆ ಮಾಡಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದ ಬೆನ್ನಲ್ಲೇ ಪುತ್ತೂರಿನ ಜವಳಿ ಮಳಿಗೆ ಮಾಲಕರೋರ್ವರಿಗೆ ಅಪರಿಚಿತರು ಇದೇ ರೀತಿ ಕರೆ ಮಾಡಿದ ಬೆದರಿಸಿ ಹಣಕ್ಕೆ ಬೇಡಿಕೆಯಿರಿಸಿದ್ದ ಘಟನೆ ನಡೆದಿದೆ.


ಮಂಗಳೂರು ಹಾಗೂ ಸುರತ್ಕಲ್‌ನಲ್ಲಿ ಎರಡು ದಿನಗಳ ಹಿಂದೆ ಹಲವು ವಿದ್ಯಾರ್ಥಿಗಳ ಪೋಷಕರಿಗೆ ಅಪರಿಚಿತರು, ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡು ವಾಟ್ಸಾಪ್ ಕರೆ ಮಾಡಿ ನಿಮ್ಮ ಮಗ/ಮಗಳನ್ನು ಬಂಧಿಸಿದ್ದೇವೆ ಅವರ ಬಿಡುಗಡೆಗೆ ಕೂಡಲೇ ಹಣ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಇದರ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇದೇ ಮಾದರಿಯ ಘಟನೆ ಪುತ್ತೂರಿನಲ್ಲಿಯೂ ನಡೆದಿದೆ. ಬೊಳುವಾರಿನಲ್ಲಿ ವ್ಯವಹರಿಸುತ್ತಿರುವ ಪ್ರತಿಷ್ಠಿತ ಜವುಳಿ ಮಳಿಗೆ ನ್ಯೂ ಆರ್‌ಎಚ್ ಸೆಂಟರ್ ಮಾಲಕ ಗೋಪಾಲ ಎಂ.ರವರಿಗೆ ಕರೆ ಮಾಡಿರುವ ಅನಾಮಿಕರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರಕರಣದ ಬಗ್ಗೆ ಗೋಪಾಲ ಎಂ.ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಏನಿದು ಘಟನೆ:
ಕಳೆದ ಮೂರು ದಿನಗಳ ಹಿಂದೆ ಗೋಪಾಲ ಎಂ.ರವರು ಜವುಳಿ ಮಳಿಗೆಯಲ್ಲಿರುವಾಗ ಕರೆ ಮಾಡಿದ ಅನಾಮಿಕ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿ, ಸಿಬಿಐ ಕ್ರೈಂ ಬ್ರಾಂಚ್‌ನಿಂದ ಮಾತನಾಡುತ್ತಿದ್ದೇವೆ ಎಂದು ಹೇಳಿ, ನಿಮ್ಮ ಹೆಸರು ಏನು? ಕೃಷ್ಣ ಪ್ರಣಾಮ್ ಯಾರು ಎಂದು ಕೇಳುತ್ತಾರೆ ಅದಕ್ಕೆ ಉತ್ತರಿಸಿದ ಗೋಪಾಲ್ ಎಂ.ರವರು ತಮ್ಮ ಹೆಸರು ಹಾಗೂ ಕೃಷ್ಣ ಪ್ರಣಾಮ್ ನನ್ನ ಪುತ್ತ ಎಂದು ಹೇಳುತ್ತಾರೆ. ಬಳಿಕ ಮಾತನಾಡಿದ ಅನಾಮಿಕ ನಿಮ್ಮ ಮಗನನ್ನು ಡ್ರಗ್ಸ್ ಕೇಸ್‌ನಲ್ಲಿ ಬಂಧಿಸಿದ್ದೇವೆ. ನಿಮ್ಮ ಮಗ ಮತ್ತು ಮೂವರನ್ನು ಈ ಕೇಸ್‌ನಲ್ಲಿ ಬಂಧಿಸಿ ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳುತ್ತಾನೆ. ಅದಕ್ಕೆ ಗೋಪಾಲ ಎಂ.ರವರು ನನ್ನ ಮಗ ಹಾಗೆ ಮಾಡುವವನಲ್ಲ. ಅವನಲ್ಲಿ ಒಮ್ಮ ಮಾತನಾಡಿಸಿ ಎಂದು ಹೇಳುತ್ತಾರೆ. ಅದಕ್ಕೆ ಆ ಕಡೆಯಿಂದ ಹಿಂದಿಯಲ್ಲಿ, ಪಾಪಾಸೆ ಬಾತ್ ಕರೋ ಎಂಬ ಧ್ವನಿಯೂ ಬರುತ್ತದೆ ಅಲ್ಲದೆ ಮಾರ‍್ನಾ ನಹೀ ಎಂಬ ಕೂಗು ಕೂಡ ಕೇಳಿ ಬರುತ್ತದೆ. ಬಳಿಕ ಅಪರಿಚಿತ ಕಾಂಪ್ರಮೈಸ್ ಕರೋ ಎಂದು ಹೇಳಿ ಹಣಕ್ಕೆ ಬೇಡಿಕೆ ಇಡುತ್ತಾನೆ ಅಪರಿಚಿತರು. ಇದರಿಂದ ಸಂಶಯಗೊಂಡ ಗೋಪಾಲ ಎಂ.ರವರು ‘ನೀನು ಮಾಡುವುದನ್ನು ಮಾಡು ಜೈಲಿಗೆ ಕೊಂಡುಹೋಗು’ ಎಂದು ಹೇಳುತ್ತಾರೆ. ಇಷ್ಟು ಹೇಳುವಾಗ ಕರೆ ಕಟ್ ಆಗುತ್ತದೆ. ಬಳಿಕ ಗೋಪಾಲ ಎಂ.ರವರು ಪುತ್ರನ ಬಗ್ಗೆ ವಿಚಾರಿಸಿದ್ದು ಪುತ್ರ ಯಾವುದೇ ತೊಂದರೆ ಇಲ್ಲದೆ ಇರುವುದು ಖಚಿತವಾಗಿತ್ತು. ಪ್ರಕರಣದ ಬಗ್ಗೆ ಗೋಪಾಲ ಎಂ.ರವರು ಪುತ್ತೂರು ನಗರ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.


ಹಣಕ್ಕೆ ಪುನಃ ಬೇಡಿಕೆ:
ಘಟನೆ ನಡೆದ ಮೂರು ದಿನಗಳ ಬಳಿಕ ಅನಾಮಿಕರು ಮತ್ತೆ ಗೋಪಾಲ ಎಂ.ರವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟರು. ಇದರ ಬಗ್ಗೆ ತಿಳಿದಿದ್ದ ಗೋಪಾಲ ಎಂ.ರವರು ಫೋನ್ ಪೇ ನಂಬರ್ ಕಳಿಸಲು ಹೇಳಿದರು. ನಂಬರ್ ಹೇಳಿದ ಅನಾಮಿಕರು 50,೦೦೦ ರೂ. ಹಾಕುವಂತೆ ತಿಳಿಸಿದ್ದ ಅದಕ್ಕೆ ಗೋಪಾಲ ಎಂ.ರವರು ಅರ್ಧ ಗಂಟೆ ಕಳೆದು ಹಣ ಕಳಿಸುತ್ತೇನೆ ಎಂದು ಹೇಳುತ್ತಾರೆ. ಪೋನ್ ನಂಬರನ್ನು ಟ್ರೂಕಾಲರ್‌ನಲ್ಲಿ ಪರಿಶೀಲಿಸಿದಾಗ ಫಝಲ್ ಎಂಬ ಹೆಸರು ಬಂತು. ಪಾಕಿಸ್ಥಾನದ ಕೋಡ್ ಸಂಖ್ಯೆ ಆರಂಭವಾಗುವ -ನ್ ನಂಬರ್ ಅದಾಗಿತ್ತು. ಬಳಿಕ ಗೋಪಾಲ ಎಂ.ರವರು ಅನಾಮಿಕನಿಗೆ ಕರೆ ಮಾಡಿ ಬೈದಾಗ ಕರೆ ಕಟ್ ಆಗುತ್ತದೆ.
ಡಾಟಾ ಬೇಸ್ ವೆಬ್‌ಸೈಟ್‌ಗಳಿಂದ ಫೋನ್ ನಂಬರ್‌ನ್ನು ಖರೀದಿ ಮಾಡಿ ವಂಚಕರು ಇಂತಹ ಕರೆಗಳನ್ನು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹಲವಾರು ವೆಬ್‌ಸೈಟ್‌ಗಳು ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿದೆ. ಸೈಬರ್ ವಂಚಕರು ಈ ರೀತಿಯ ಡಾಟಾಬೇಸ್‌ಗಳನ್ನು ಪಡೆದು ಅವುಗಳನ್ನು ವಂಚಕರಿಗೆ ಮಾರಾಟ ಮಾಡಿರುವ ಸಾಧ್ಯತೆಯೂ ಇದೆ. ಪೋಷಕರು, ಸಾರ್ವಜನಿಕರು ಇಂತಹ ಕರೆಗಳ ಬಗ್ಗೆ ಜಾಗೃತರಾಗಿರಬೇಕಾದ ಅಗತ್ಯವಿದೆ.

ಜಾಗೃತರಾಗಿದ್ದರೆ ವಂಚಕರಿಂದ ಪಾರಾಗಬಹುದು
ನಾನು ಜವಳಿ ಮಳಿಗೆಯಲ್ಲಿರುವಾಗ ಕರೆ ಬಂದಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಕರೆ ಎಂದು ಸ್ವೀಕರಿಸಿದ್ದೆ. ಸಾರ್ವಜನಿಕರು ಇಂತಹ ಪ್ರಕರಣಗಳ ಬಗ್ಗೆ ಎಚ್ಚರವಹಿಸಬೇಕು. ಕೆಲವು ಮಕ್ಕಳು ವಯಸ್ಸಿನ ದೋಷದಿಂದ ಡ್ರಗ್ಸ್ ಹಾಗೂ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಯು ಇದೆ. ಮಕ್ಕಳ ಬಗ್ಗೆ ನಮಗೆ ಆತ್ಮವಿಶ್ವಾಸ ಬೇಕು. ಪೊಲೀಸ್ ಸ್ಟೇಷನ್‌ಗೆ ಲಿಖಿತ ದೂರು ಸಲ್ಲಿಸಿ ಮಾಹಿತಿ ನೀಡಿದ್ದೇನೆ. ಸಾರ್ವಜನಿಕರು ಎಚ್ಚರದಿಂದ ಇರಬೇಕು. ನಾವು ಜಾಗೃತರಾಗಿದ್ದರೆ ವಂಚಕರಿಂದ ಪಾರಾಗಬಹುದು.

ಗೋಪಾಲ ಎಂ.ಯು, ಮಾಲಕರು, ನ್ಯೂ ಆರ್.ಎಚ್.ಸೆಂಟರ್

LEAVE A REPLY

Please enter your comment!
Please enter your name here