ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆ

0

ನೆಲ್ಯಾಡಿ: ಗ್ರಾಮ ಪಂಚಾಯಿತಿ ನಿವೇಶನಕ್ಕೆ ಕಾದಿರಿಸಿದ್ದ ಜಾಗದ ಪಕ್ಕದಲ್ಲೇ ಖಾಲಿಯಿದ್ದ ಸರಕಾರಿ ಜಾಗವನ್ನು ನಿಯಮ ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ 94ಸಿಯಲ್ಲಿ ಮಂಜೂರಾತಿ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರ ಒತ್ತಾಯದಂತೆ ಮಂಜೂರಾತಿ ಆದೇಶ ರದ್ದುಗೊಳಿಸಿ ಸದ್ರಿ ಜಾಗವನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ತಹಶೀಲ್ದಾರ್‌ಗೆ ಬರೆಯಲು ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.


ಸಭೆ ಜೂ.14ರಂದು ಅಧ್ಯಕ್ಷ ಗಂಗಾಧರ ಪಿ.ಎನ್.ನೆಕ್ಕರಾಜೆ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಬೆದ್ರೋಡಿಯಲ್ಲಿ ಮನೆ ನಿವೇಶನಕ್ಕೆ ಕಾದಿರಿಸಿದ್ದ ಜಾಗದ ಪಕ್ಕದಲ್ಲೇ ಇದ್ದ ಖಾಲಿ ಜಾಗವನ್ನು ಅಲ್ಲಿ ಮನೆ ಇಲ್ಲದೇ ಇದ್ದರೂ ನಿಯಮ ಉಲ್ಲಂಘಿಸಿ 94ಸಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ. ಸದ್ರಿ ಜಾಗವನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡುವಂತೆ ನಾಲ್ಕೈದು ವರ್ಷಗಳ ಹಿಂದೆಯೇ ತಹಶೀಲ್ದಾರ್‌ಗೆ ಗ್ರಾ.ಪಂ.ನಿಂದ ಪತ್ರ ಬರೆಯಲಾಗಿತ್ತು. ಆದರೂ ಈ ಜಾಗ 94ಸಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಆಗಿದೆ. ಇದರಲ್ಲಿ ಮನೆಯೂ ಇಲ್ಲ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಯಿಂದ 40 ಮೀ.ದೂರದಲ್ಲಿಯೂ ಇಲ್ಲ. ನಿಯಮ ಉಲ್ಲಂಘಿಸಿ ಜಾಗ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಪತ್ರ ಬರೆಯಬೇಕೆಂದು ಆಗ್ರಹಿಸಿದ ಸದಸ್ಯರು, ಸದ್ರಿ ಜಾಗ ಮಂಜೂರಾತಿ ರದ್ದುಗೊಳಿಸಿ ಜಾಗವನ್ನು ಗ್ರಾ.ಪಂ.ಗೆ ಹಸ್ತಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಪತ್ರ ಬರೆಯಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಅನಧಿಕೃತ ಕಟ್ಟಡಗಳಿಗೆ ನೋಟಿಸ್:
ಗ್ರಾಮ ಪಂಚಾಯಿತಿಯಿಂದ ಯಾವುದೇ ಪರವಾನಿಗೆ ಪಡೆಯದೇ ಗ್ರಾ.ಪಂ.ರಸ್ತೆಗೆ ಹೊಂದಿಕೊಂಡೇ ಕೆಲವು ಕಡೆಗಳಲ್ಲಿ ಕಟ್ಟಡ ರಚನೆ ಮಾಡಲಾಗುತ್ತಿದೆ. ಇಂತವರಿಗೆ ನೋಟಿಸ್ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೇ ಪರವಾನಿಗೆ ಪಡೆಯದೇ ಹಾಗೂ ನವೀಕರಣ ಮಾಡದೇ ವ್ಯಾಪರ ಮಾಡುತ್ತಿರುವ ವರ್ತಕರಿಗೂ ನೋಟಿಸ್ ನೀಡಲು ನಿರ್ಣಯಿಸಲಾಯಿತು.

ಜಲಮರುಪೂರಣ ಕಡ್ಡಾಯಗೊಳಿಸಿ:
ಕೊಳವೆ ಬಾವಿಗೆ ನಿರಾಕ್ಷೇಪಣಾ ಪತ್ರ ನೀಡುವ ಸಂದರ್ಭದಲ್ಲಿ ಕೊಳವೆ ಬಾವಿಯ ಪಕ್ಕದಲ್ಲಿ ಜಲಮರುಪೂರಣ ಘಟಕ ಕಡ್ಡಾಯಗೊಳಿಸಬೇಕು. ಅಲ್ಲದೇ ಈ ಹಿಂದೆ ಕೊಳವೆಬಾವಿ ಕೊರೆದಿರುವವರೂ ಜಲಮರುಪೂರಣ ಘಟಕ ನಿರ್ಮಿಸುವಂತೆ ಸೂಚನೆ ನೀಡಬೇಕೆಂದು ಸದಸ್ಯ ಉಮೇಶ್ ಓಡ್ರಪಾಲು ಒತ್ತಾಯಿಸಿದರು.

ಸ್ವಚ್ಛತೆಗೆ ಆದ್ಯತೆ ಕೊಡಿ:
ಮನೆ ಹಾಗೂ ಇತರೇ ಕಟ್ಟಡ ಬಾಡಿಗೆ ಪಡೆದುಕೊಂಡವರು ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಕಟ್ಟಡದ ಮಾಲಕರೇ ಇಲ್ಲಿ ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ನೋಟಿಸ್ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಕಾಮಗಾರಿ ವೇಳೆ ಮಾಹಿತಿ ಕೊಡಿ:
ಬಜತ್ತೂರು ಗ್ರಾಮಕ್ಕೆ ರಸ್ತೆ ಸೇರಿ ವಿವಿಧ ಕಾಮಗಾರಿಗಳಿಗೆ ಶಾಸಕರ ಮೂಲಕ 60.25 ಲಕ್ಷ ರೂ.ಅನುದಾನ ಬಂದಿದೆ. ಕಾಮಗಾರಿ ಆರಂಭಿಸುವ ಮುನ್ನ ಆಯಾ ವಾರ್ಡ್‌ನ ಸದಸ್ಯರ ಗಮನಕ್ಕೆ ತಂದೇ ಕಾಮಗಾರಿ ನಡೆಸಬೇಕೆಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಗುತ್ತಿಗೆದಾರರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪರವಾನಿಗೆ ಪಡೆದುಕೊಳ್ಳಲಿ:
ಬೆದ್ರೋಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಲ್ಲಿ ಮಿಕ್ಸಿಂಗ್ ಘಟಕ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದುಕೊಂಡಿಲ್ಲ. ಘಟಕದವರು ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದುಕೊಂಡೇ ಕಾರ್ಯನಿರ್ವಹಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಮೇಲೂರು ಕೆರೆ ಹಸ್ತಾಂತರ ವಿಚಾರ:
ಸುಮಾರು 80 ಲಕ್ಷ ರೂ.ವೆಚ್ಚದಲ್ಲಿ ಮೇಲೂರು ಎಂಬಲ್ಲಿ ಕೆರೆ ನಿರ್ಮಾಣಗೊಂಡಿದೆ. ಇದನ್ನು ಹಸ್ತಾಂತರ ಪಡೆದುಕೊಳ್ಳುವಂತೆ ಗ್ರಾ.ಪಂ.ಗೆ ಇಲಾಖೆಯಿಂದ ಬಂದಿರುವ ನೋಟಿಸ್‌ನ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಇಲ್ಲಿ ಅಂದಾಜುಪಟ್ಟಿಯಂತೆ ಕಾಮಗಾರಿ ನಡೆದಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ಹಸ್ತಾಂತರ ಪಡೆದುಕೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಶುದ್ಧ ಕುಡಿಯುವ ನೀರಿನ ಘಟಕ ತೆರವಿಗೆ ನಿರ್ಣಯ:
ಬೆದ್ರೋಡಿಯಲ್ಲಿ ನಿಷ್ಪ್ರಯೋಜಕವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ತೆರವುಗೊಳಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಲಕ್ಷಾಂತರ ರೂ.ವೆಚ್ಚದಲ್ಲಿ ಹಲವು ವರ್ಷಗಳ ಹಿಂದೆಯೇ ಘಟಕ ನಿರ್ಮಾಣಗೊಂಡಿದ್ದರೂ ಒಮ್ಮೆಯೂ ಇದರ ಬಳಕೆಯಾಗಿರಲಿಲ್ಲ. ಇದೀಗ ಈ ಘಟಕ ತೆರೆವುಗೊಳಿಸುವ ಸಂಬಂಧ ಗ್ರಾ.ಪಂ.ಗೆ ನೋಟಿಸ್ ಬಂದಿದ್ದು ಈ ವಿಚಾರದ ಬಗ್ಗೆ ಚರ್ಚೆ ನಡೆದು ಘಟಕ ತೆರವುಗೊಳಿಸಲು ನಿರ್ಣಯಿಸಲಾಯಿತು.

ಬೀದಿದೀಪ ಟೆಂಡರ್ ಪಡೆದುಕೊಂಡವರೂ ತಕ್ಷಣ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ಉಳಿದಂತೆ ವಿವಿಧ ಅಭಿವೃದ್ಧಿ ವಿಚಾರ, ಸಾರ್ವಜನಿಕರ ಅರ್ಜಿ, ಸರಕಾರದ ಸುತ್ತೋಲೆಗಳ ಪರಿಶೀಲನೆ ನಡೆಯಿತು. ಉಪಾಧ್ಯಕ್ಷೆ ವಿಮಲ, ಸದಸ್ಯರಾದ ಮೋನಪ್ಪ ಗೌಡ, ರತ್ನ, ಪ್ರೆಸಿಲ್ಲ ಡಿ.ಸೋಜ, ನಝೀರ್ ಬೆದ್ರೋಡಿ, ಉಮೇಶ ಓಡ್ರಪಾಲು, ಸ್ಮಿತಾ, ಮಾಧವ ಪೂಜಾರಿ, ಗಂಗಾಧರ ಕೆ.ಎಸ್., ಯಶೋಧ, ಸಂತೋಷ್‌ಕುಮಾರ್, ಪ್ರೇಮಾ, ಭಾಗೀರಥಿ ಅವರು ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಪಿಡಿಒ ಚಂದ್ರಮತಿ ಅವರು ಸ್ವಾಗತಿಸಿ ಜಮಾ ಖರ್ಚು, ಸಾರ್ವಜನಿಕ ಅರ್ಜಿ, ಸರಕಾರದ ಸುತ್ತೋಲೆಯನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿಗಳಾದ ರಮೇಶ್, ಮಹಮ್ಮದ್, ಮಮತಾ, ಮೀನಾಕ್ಷಿ ಅವರು ಸಹಕರಿಸಿದರು.

LEAVE A REPLY

Please enter your comment!
Please enter your name here