ಫಿಲೋಮಿನಾ ಪ.ಪೂ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

0

ಪುತ್ತೂರು:  ಉತ್ತಮ ನಾಯಕನಿಗೆ  ಬಲವಾದ ಆತ್ಮ ವಿಶ್ವಾಸ ಇರಬೇಕು. ಆತ್ಮವಿಶ್ವಾಸದ ಕೊರತೆಯಿರುವ ವ್ಯಕ್ತಿ ಎಂದಿಗೂ ಉತ್ತಮ ನಾಯಕನಾಗಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ತನ್ನನ್ನು ಇತರರು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಆತ್ಮವಿಶ್ವಾಸವನ್ನು ಹೊಂದಿರಬೇಕು. ನಾಯಕನು ತನ್ನ ನಿರ್ಧಾರಗಳು ಮತ್ತು ಕಾರ್ಯಗಳಲ್ಲಿ ವಿಶ್ವಾಸ ಹೊಂದಿರಬೇಕು ಎಂದು ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ಫಾ. ಲಾರೆನ್ಸ್ ಮಸ್ಕರೇನಸ್ ಹೇಳಿದರು. ಅವರು ಜೂ .15 ರಂದು ನಡೆದ  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ನಾಯಕ ಖಂಡಿತವಾಗಿಯೂ ಇತರರಿಗೆ ಸ್ಫೂರ್ತಿ ನೀಡಬೇಕು. ಒಬ್ಬ ನಾಯಕ ತನ್ನ ಅನುಯಾಯಿಗಳಿಗೆ ಮಾದರಿಯಾಗಿರಬೇಕು. ಅಲ್ಲದೆ ಸಾಧ್ಯವಾದಾಗಲೆಲ್ಲಾ ಅವನು ಅವರನ್ನು ಪ್ರೇರೇಪಿಸಬೇಕು.  ಕಷ್ಟಕರ ಸಂದರ್ಭಗಳಲ್ಲಿ ನಾಯಕನು ಭರವಸೆಯನ್ನು ಕಳೆದುಕೊಳ್ಳಬಾರದು ಎಂದು  ಹೇಳಿದರು.

  ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರಿನ ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ  ಕಾರ್ಯದರ್ಶಿ ಡಾ. ಪ್ರವೀಣ್ ಲಿಯೋ ಲಸ್ರದೋ ಮಾತನಾಡಿ  ಇರುವ ಸಂಪತ್ತು, ಬುದ್ಧಿವಂತಿಕೆ, ಸಾಮರ್ಥ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತಹ ಕೌಶಲವನ್ನು ರೂಢಿಸಿಕೊಳ್ಳಬೇಕು. ನಮ್ಮ ಯಶಸ್ಸಿನ ಗುಟ್ಟು ಪರಿಶ್ರಮದಲ್ಲಿ ಅಡಗಿದೆ. ನಮ್ಮ ಬದುಕಿನ ಶಿಲ್ಪಿ ನಾವೇ ಆಗಬೇಕು. ಆ ಮೂಲಕ ಸುಂದರವಾಗಿ ಬದುಕನ್ನು ವಿನ್ಯಾಸಗೊಳಿಸಿ ಸ್ವಾವಲಂಬಿಗಳಾಗಬಹುದು.   ಗುರಿ ಸಾಧನೆಗೆ ನಮ್ಮದೇ ದಾರಿ ಕಂಡುಕೊಳ್ಳಬೇಕು. ಆದರೂ ಸಾಧಕರ ಯಶೋಗಾಥೆಗಳಿಂದ ಪ್ರೇರಣೆ ದೊರಕುತ್ತದೆ, ಮನೋಬಲ ಹೆಚ್ಚುತ್ತದೆ. ಸಮಸ್ಯೆ, ಸಂಕಷ್ಟಗಳನ್ನು ಎದುರಿಸಿದ ಬಗೆ, ಪ್ರವಾಹದ ವಿರುದ್ಧ ಈಜುವ ಛಾತಿ, ಆತ್ಮಸ್ಥೈರ್ಯದ ಕಥೆಗಳು ನಮಗೆ ಜೀವ ತುಂಬಿ ಜೀವನದ ಯಶಸ್ಸಿಗೆ ಸ್ಫೂರ್ತಿಯಾಗುತ್ತವೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಡಾ. ಪ್ರವೀಣ್ ಲಿಯೋ ಲಸ್ರದೋ  ಹೂಗುಚ್ಛ ನೀಡಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಕಿತಾ ಎಲ್.ಡಿ, ಕಾರ್ಯದರ್ಶಿ ಧ್ರುವ ಜೆ ಭಂಡಾರಿ,  ಜೊತೆ ಕಾರ್ಯದರ್ಶಿ ಸೃದ್ಧನ್ ಆಳ್ವ ಕೆ    ಸಹಿತ ತರಗತಿವಾರು ಪ್ರತಿನಿಧಿಗಳು, ವಿವಿಧ ಸಂಘಗಳ ಪದಾಧಿಕಾರಿಗಳಿಗೆ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಪ್ರಮಾಣವಚನವನ್ನು ಬೋಧಿಸಿದರು.

 ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ.ಕೋಸ್ಟ,  ಹಿರಿಯ ವಿದ್ಯಾರ್ಥಿ ಸಂಘದ ಪ್ರತಿಮಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು,ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

 ಪ್ರದರ್ಶನ  ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಕಿತಾ ಎಲ್.ಡಿ ಸ್ವಾಗತಿಸಿ, ಕಾರ್ಯದರ್ಶಿ  ಧ್ರುವ ಜೆ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಸೃದ್ಧನ್  ಆಳ್ವ ಕೆ ವಂದಿಸಿ, ವಿದ್ಯಾರ್ಥಿನಿ ಸಕೀನಾ ಐಮನ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here