ಬಂದ ದಾರಿಯಲ್ಲೇ ಹಿಂದಿರುಗಿದ ಗಜರಾಜ-ಒಂಟಿಯಾಗಿ ಬಂದವ ಜೋಡಿಯಾಗಿ ನಡೆದ

0


‘ ಆನೆ ನಡೆದದ್ದೇ ದಾರಿ ಎಂಬಂತೆ 10 ದಿನಗಳ ಕಾಲ ಗ್ರಾಮದಲ್ಲಿ ಓಡಾಡಿದ ಆನೆಗಳು ಗ್ರಾಮಸ್ಥರ ಕಣ್ಣಿಗೆ ಅಷ್ಟೇನೂ ಬೀಳಲಿಲ್ಲ, ಆನೆಗಳು ಕಂಡ ತಕ್ಷಣ ಮೊಬೈಲ್ ಕ್ಯಾಮರದಲ್ಲಿ ಫೋಟೋ, ವಿಡಿಯೋ ಮಾಡಿ ಖುಷಿ ಪಟ್ಟಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಆನೆಗಳು ಯಾರಿಗೂ ಕೂಡ ಭಯ ಹುಟ್ಟಿಸುವ ಕೆಲಸ ಮಾಡಿಲ್ಲ ಎಂಬುದೇ ನೆಮ್ಮದಿಯ ಸುದ್ದಿಯಾಗಿದೆ.’

ಪುತ್ತೂರು: ಕಳೆದ 15 ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಗಜರಾಜ ಕೊನೆಗೂ ತಾನು ಬಂದ ದಾರಿಯಲ್ಲೇ ನಡೆದು ತನ್ನ ಮೂಲಸ್ಥಾನ ಸೇರಿಕೊಳ್ಳುತ್ತಿದ್ದಾನೆ. ಒಂಟಿಯಾಗಿ ಬಂದ ಕಾಡಾನೆ ಮರಳಿ ಹಿಂತಿರುಗುವ ವೇಳೆಗೆ ಇನ್ನೊಂದು ಕಾಡಾನೆಯನ್ನು ಕರೆದುಕೊಂಡು ಜೋಡಿಯಾಗಿ ಹೆಜ್ಜೆ ಹಾಕಿದೆ. ಜೂ.5 ರಂದು ಸವಣೂರು ಗ್ರಾಮದ ಪುಣ್ಚಪ್ಪಾಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಒಂಟಿಸಲಗ ಬಳಿಕ ತನ್ನ ಪಯಣವನ್ನು ಉಪ್ಪಿನಂಗಡಿ ಸಮೀಪದ ಕಠಾರ ಪ್ರದೇಶದ ಕಡೆಗೆ ಮಾಡಿತ್ತು. ಅಲ್ಲಿ ತನಗೊಂದು ಜೋಡಿಯನ್ನು ಮಾಡಿಕೊಂಡ ಸಲಗ ಕೊನೆಗೆ ಜೋಡಿಯಾನೆಗಳು ಜೂ.15 ರ ಸುಮಾರಿಗೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ, ಆನೆಗುಂಡಿ ರಕ್ಷಿತಾರಣ್ಯದ ಕಡೆಗೆ ಹೆಜ್ಜೆ ಹಾಕುತ್ತಿವೆ. ಅಲ್ಲಲ್ಲಿ ಒಂದಷ್ಟು ಕೃಷಿ ಹಾನಿ ಮಾಡಿತ್ತಾದ್ದರೂ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಕೃಷಿ ಹಾನಿ ಮಾಡದೇ ಇದ್ದ ಈ ಒಂಟಿ ಸಲಗಕ್ಕೆ ಇನ್ನೊಂದು ಆನೆ ಸಿಕ್ಕಿದ್ದದರೂ ಹೇಗೆ? ಈ ಆನೆ ಎಲ್ಲಿತ್ತು? ಎಲ್ಲಿಂದ ಬಂತು? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.


ಬಂದ ದಾರಿಯಲ್ಲೇ ಹಿಂತಿರುಗಿದ ಗಜರಾಜ..!
ಆನೆಗುಂಡಿ, ಪರಪ್ಪೆ ರಕ್ಷಿತಾರಣ್ಯದಿಂದ ಬಂದಿದೆ ಎನ್ನಲಾದ ಒಂಟಿ ಸಲಗವು ಕಳೆದ ಕೆಲವು ತಿಂಗಳುಗಳ ಹಿಂದೆ ಕೊಳ್ತಿಗೆ ಗ್ರಾಮದಲ್ಲಿ ಗದ್ದಲ ಎಬ್ಬಿಸಿತ್ತು. ಆ ಬಳಿಕ ಆನೆ ನಾಪತ್ತೆಯಾಗಿತ್ತು. ಕೆಲವು ತಿಂಗಳ ಬಳಿಕ ಜೂ.5 ರಂದು ಏಕಾಏಕಿ ಸವಣೂರು ಗ್ರಾಮದ ಪುಣ್ಚಪ್ಪಾಡಿ ಪ್ರದೇಶದಲ್ಲಿ ದಿಢೀರ್ ಪ್ರತ್ಯಕ್ಷಗೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.ಕುಮಾರಮಂಗಲ, ಪುಣ್ಚಪ್ಪಾಡಿ ಪ್ರದೇಶದಿಂದ ಮಾಡಾವು ಗೌರಿ ಹೊಳೆ ದಾಟಿಕೊಂಡು ತೆಗ್ಗು, ಎರಬೈಲು ಪ್ರದೇಶಕ್ಕೆ ಕಾಲಿಟ್ಟಿತ್ತು. ಅಲ್ಲಿಂದ ಮತ್ತೆ ಹೊಳೆ ದಾಟಿಕೊಂಡ ಕಾಡಾನೆ ಪುಣ್ಚಪ್ಪಾಡಿ ಪ್ರದೇಶಕ್ಕೆ ಮತ್ತೆ ಹೆಜ್ಜೆ ಹಾಕಿತ್ತು. ಅಲ್ಲಿಂದ ನರಿಮೊಗರು ಗ್ರಾಮದ ವೀರಮಂಗಲ, ಶಾಂತಿಗೋಡು ಗ್ರಾಮದ ಹಲವು ಕಡೆಗಳಲ್ಲಿ ಹೆಜ್ಜೆ ಹಾಕಿದ ಗಜರಾಜ ಬಳಿಕ ಉಪ್ಪಿನಂಗಡಿ ಭಾಗದ ಕಠಾರ ಕಾಡು ಪ್ರದೇಶದಲ್ಲಿ ಗದ್ದಲ ಎಬ್ಬಿಸಿತ್ತು.


ಒಂಟಿ ಸಲಗಕ್ಕೆ ಸಿಕ್ಕಿದ ಜೊತೆಗಾರ…!
ಉಪ್ಪಿನಂಗಡಿ ಪ್ರದೇಶದ ಕಠಾರ ಕಾಡು ಪ್ರದೇಶದಲ್ಲಿ ಸುತ್ತುತ್ತಿದ್ದ ಒಂಟಿಸಲಗಕ್ಕೆ ಇನ್ನೊಂದು ಆನೆ ಜೊತೆಯಾಯಿತು. ಆ ಆನೆ ಎಲ್ಲಿಂದ ಬಂತೋ ಯಾರಿಗೂ ಗೊತ್ತಿಲ್ಲ! ಅಂತೂ ತನಗೆ ಜೊತೆಗಾರನೊಬ್ಬ ಸಿಕ್ಕಿದ ಖುಷಿಯಲ್ಲಿ ಒಂಟಿಸಲಗ ಜೊತೆಗಾರರನ್ನು ಕರೆದುಕೊಂಡು ತಾನು ಬಂದ ದಾರಿಯಲ್ಲೇ ಹೆಜ್ಜೆ ಹಾಕ ತೊಡಗಿದ. ಶಾಂತಿಗೋಡು, ವೀರಮಂಗಲ, ಸೊರಕೆ, ನೇರೋಳ್ತಡ್ಕ, ಎರಬೈಲು, ತೆಗ್ಗು,ಸಣಂಗಳ ಇತ್ಯಾದಿ ಪ್ರದೇಶಗಳ ಮೂಲಕ ಅಂಕತ್ತಡ್ಕ,ಕೊಳ್ತಿಗೆ, ಪೆರ್ಲಂಪಾಡಿ ಮೂಲಕ ಬೀರ್ಣಕಜೆ ಪ್ರದೇಶಕ್ಕೆ ಬಂದ ಆನೆಗಳು ಅಲ್ಲಿಂದ ಕೊಳ್ತಿಗೆ ಗ್ರಾಮದ ಆನೆಗುಂಡಿ ರಕ್ಷಿತಾರಣ್ಯಕ್ಕೆ ಸೇರಲಿವೆ ಎಂದು ಅರಣ್ಯ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತೂ ತಾನು ಎಲ್ಲಿಂದ ಬಂದೆನೋ ಮತ್ತೆ ಅದೇ ಜಾಗಕ್ಕೆ ಒಂಟಿಸಲಗ ಸೇರುತ್ತಿದೆ. ಸೇರುವ ಹೊತ್ತಿಗೆ ತನಗೊಬ್ಬ ಜೊತೆಗಾರರನ್ನು ಕರೆದುಕೊಂಡು ಬಂದದ್ದು ಮಾತ್ರ ವಿಶೇಷವಾಗಿದೆ.


ಪಟಾಕಿಯ ಶಬ್ದಕ್ಕೆ ಕ್ಯಾರೇ ಅನ್ನದ ಆನೆಗಳು..?
ಬಹುಷಹ ಈ ಆನೆಗಳಿಗೆ ಪಟಾಕಿಯ ಶಬ್ದ ಕೇಳಿ ಕೇಳಿ ಬೇಸತ್ತು ಹೋಗಿದೆಯೋ ಎನ್ನುವಷ್ಟರ ಮಟ್ಟಿಗೆ ಆನೆಗಳು ಪಟಾಕಿಯ ಶಬ್ದಕ್ಕೆ ಕ್ಯಾರೇ ಮಾಡುತ್ತಿರಲಿಲ್ಲ. ಆನೆಗಳನ್ನು ಓಡಿಸಲು ಮುಖ್ಯವಾಗಿ ಬಳಸುವುದು ಗರ್ನಲ್, ಕದಿನೋ ಇತ್ಯಾದಿ ಪಟಾಕಿಗಳನ್ನು. ಇಲ್ಲಿಯೂ ಕೂಡ ಆನೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡು ಪಟಾಕಿಗಳನ್ನು ಸಿಡಿಸಿ ಅವುಗಳನ್ನು ಬೆನ್ನಟ್ಟಲಾಗಿದೆ.


ದೊಡ್ಡ ಮಟ್ಟದ ಕೃಷಿ ಹಾನಿ ಮಾಡದ ಆನೆಗಳು
ಆನೆಗಳು ದಾಳಿ ಮಾಡಿದರೆ ಕೃಷಿ ಸಂಪೂರ್ಣ ನಾಶವಾದಂತೆ ಎಂಬ ಮಾತಿದೆ. ಆದರೆ ಇಲ್ಲಿ ಆನೆಗಳು ಅಂತಹ ದೊಡ್ಡ ಮಟ್ಟದ ಕೃಷಿ ಹಾನಿ ಮಾಡಿಲ್ಲ ಎನ್ನಲಾಗಿದೆ. ಕೆಲವೊಂದು ಕಡೆಗಳಲ್ಲಿ ಒಂದಷ್ಟು ಕೃಷಿ ಹಾನಿ ಮಾಡಿದ್ದು ಬಿಟ್ಟರೆ ಅಂತಹ ದೊಡ್ಡ ಹಾನಿಯಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೆಲವು ಮಂದಿ ಹೇಳುವ ಪ್ರಕಾರ ಇದೊಂದು ಅತ್ಯಂತ ಸಾಧು ಆನೆಯಾಗಿದೆ ಎನ್ನಲಾಗಿದೆ. 10 ದಿನಗಳ ಕಾಲ ಗ್ರಾಮದಲ್ಲಿ ಓಡಾಡಿದ್ದರೂ ಯಾರಿಗೂ ಯಾವುದೇ ರೀತಿಯ ಭಯ ಹುಟ್ಟಿಸುವಂತಹ ತೊಂದರೆಯನ್ನು ಕೊಟ್ಟಿಲ್ಲ ಎನ್ನಲಾಗಿದೆ.

ಜೂ.05-15 ಗಜ ಹೆಜ್ಜೆ ಗುರುತು
ಬರೋಬ್ಬರಿ 10 ದಿನಗಳ ಕಾಲ ಗಜರಾಜ ಪುತ್ತೂರು ತಾಲೂಕಿನಲ್ಲಿ ಓಡಾಡಿದ್ದಾನೆ.ಜೂ.5 ಕ್ಕೆ ಪುಣ್ಚಪ್ಪಾಡಿ ಪ್ರದೇಶದಲ್ಲಿ ಕಾಣಿಸಿಕೊಂಡು ಒಂಟಿಸಲಗ ಅಲ್ಲಿಂದ ತೆಗ್ಗು, ಎರಬೈಲು, ಓಲೆಮುಂಡೋವು ಪ್ರದೇಶಕ್ಕೆ ಬಂದಿತ್ತು.ಅಲ್ಲಿಂದ ಮತ್ತೆ ಪುಣ್ಚಪ್ಪಾಡಿ ಪ್ರದೇಶಕ್ಕೆ ಹೆಜ್ಜೆ ಹಾಕಿತ್ತು. ಅಲ್ಲಿಂದ ವೀರಮಂಗಲ, ಶಾಂತಿಗೋಡು, ಉಪ್ಪಿನಂಗಡಿ ಭಾಗದ ಬೆಳ್ಳಿಪ್ಪಾಡಿ, ಕಠಾರ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಒಂದು ಪ್ರದೇಶದಲ್ಲಿ ಒಂದೇ ಹಗಲು ತಂಗುತ್ತಿದ್ದ ಆನೆ ರಾತ್ರಿ ವೇಳೆ ಗ್ರಾಮದಿಂದ ಗ್ರಾಮಕ್ಕೆ ಹೆಜ್ಜೆ ಹಾಕುತ್ತಿತ್ತು.


ಅರಣ್ಯ ಇಲಾಖೆಯವರ ಬೆವರಿಳಿಸಿದ ಕಾಡಾನೆಗಳು
ನಾಡಿಗೆ ಬಂದ ಕಾಡಾನೆಗಳನ್ನು ಮತ್ತೆ ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಶ್ರಮ ಶ್ಲಾಘನೀಯ. ಪ್ರತಿ ದಿನವೂ ಆನೆಗಳು ಯಾವ ಭಾಗಕ್ಕೆ ತೆರಳುತ್ತವೆ ಎಂಬುದನ್ನು ಗಮನಿಸುತ್ತಿದ್ದ ಅಧಿಕಾರಿಗಳು ಹಗಲು ರಾತ್ರಿ ಬೆವರಿಳಿಸಿಕೊಂಡು ಕಾಡುಮೇಡು ಸುತ್ತಿ ಅದನ್ನು ಬಂದ ದಾರಿಯಲ್ಲೇ ಮತ್ತೆ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ ಹಾಗೂ ತಂಡದ ಕಾರ್ಯಾಚರಣೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here