ಪೇಟೆಯೊಳಗಿನ ಪಟಾಕಿ ಅಂಗಡಿಯ ಪರವಾನಿಗೆ ನವೀಕರಣ-ಪಿಡಿಒ ಏಕಾಏಕಿ ನಿರ್ಧಾರಕ್ಕೆ ಸದಸ್ಯರ ಆಕ್ರೋಶ-ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಪರವಾನಿಗೆ ರದ್ಧತಿಗೆ ನಿರ್ಣಯ

0

ಉಪ್ಪಿನಂಗಡಿ: ಪೇಟೆಯೊಳಗಡೆ ಪಟಾಕಿ ಅಂಗಡಿಗಳಿಗೆ ಪರವಾನಿಗೆ ನೀಡಬಾರದು ಎಂಬ ನಿಯಮವಿದ್ದರೂ, ಅದನ್ನು ಧಿಕ್ಕರಿಸಿ, ಆಡಳಿತ ಮಂಡಳಿಯ ಗಮನಕ್ಕೂ ತಾರದೇ, ಗ್ರಾ.ಪಂ. ಪಿಡಿಒ ಅವರು ಪೇಟೆಯೊಳಗಿನ ಪಟಾಕಿ ಅಂಗಡಿಯೊಂದರ ಪರವಾನಿಗೆ ನವೀಕರಿಸಿದ ವಿಷಯವಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಅದನ್ನು ರದ್ದು ಪಡಿಸುವಂತೆ ಆಗ್ರಹಿಸಿದ ಘಟನೆ ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.


ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು, ಜನನಿಬಿಢತೆ ಹೊಂದಿರುವ ಪ್ರದೇಶವಾದ ಪೇಟೆಯೊಳಗೆ ಪಟಾಕಿ ಅಂಗಡಿಗಳಿಗೆ ಪರವಾನಿಗೆ ನೀಡಬಾರದು. ಪಟಾಕಿ ಅಂಗಡಿಗಳನ್ನು ಪೇಟೆಯ ಹೊರವಲಯದಲ್ಲಿ ತೆರೆಯಬೇಕು ಎಂಬ ನಿಯಮವಿದೆ. ಆದರೆ ಅದನ್ನೆಲ್ಲಾ ಗಾಳಿಗೆ ತೂರಿ ಇಲ್ಲಿ ಪೇಟೆಯೊಳಗಿರುವ ಪಟಾಕಿ ಅಂಗಡಿಯೊಂದರ ಪರವಾನಿಗೆಯನ್ನು ಆಡಳಿತ ಮಂಡಳಿಯ ಗಮನಕ್ಕೂ ತಾರದೇ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯವರು ನವೀಕರಿಸಿದ್ದಾರೆ. ಇಲ್ಲಿನ ಪಟಾಕಿ ಅಂಗಡಿಯ ಸುತ್ತಮುತ್ತಲೂ ವಾಣಿಜ್ಯ ಮಳಿಗೆಗಳಿದ್ದು, ಇದು ಜನ ನಿಭಿಡತೆ ಹೊಂದಿರುವ ಪ್ರದೇಶವಾಗಿದೆ. ನಾಳೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸದಸ್ಯರು ಪಿಡಿಒ ವಿರುದ್ಧ ಆಕ್ರೋಶ ಹೊರಹಾಕಿದರು. ಆಗ ಪಿಡಿಒ ಅವರು ಇದು ಶಾಸಕರ ಸೂಚನೆಯ ಮೇರೆಗೆ ನೀಡಲಾಗಿದೆ ಎಂದಾಗ, ಹಾಗಾದರೆ ಪಂಚಾಯತ್‌ನಲ್ಲಿ ಆಡಳಿತ ಮಂಡಳಿಗೆ ಬೆಲೆ ಇಲ್ಲವೆ ಎಂದು ಸದಸ್ಯರು ಮರು ಪ್ರಶ್ನಿಸಿದರು. ಇದರ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ಸದಸ್ಯರ ಒಕ್ಕೊರಲ ಆಗ್ರಹ ಕೇಳಿ ಬಂದಾಗ, ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.


ಸದಸ್ಯ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗುತ್ತಿಲ್ಲ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ತ್ಯಾಜ್ಯ ನಿರ್ವಹಣೆ ಗುತ್ತಿಗೆಗೆ ಟೆಂಡರ್ ಕರೆಯಿರಿ ಎಂದು ಸಲಹೆ ನೀಡಿದರು. ಇದಕ್ಕೆ ಇತರ ಸದಸ್ಯರು ಒಪ್ಪಿಗೆ ಸೂಚಿಸಿದರು.


ಸದಸ್ಯ ಅಬ್ದುರ್ರಶೀದ್ ಮಾತನಾಡಿ, ಮನೆ ನಿರ್ವೆಶನ ಕೋರಿ ನಿರಾಶ್ರಿತರಿಂದ ಅರ್ಜಿ ಪಡೆಯುತ್ತಲೇ ಇದ್ದರೆ ಸಾಲದು. ಅವರಿಗೆ ನಿರ್ವೆಶನ ಒದಗಿಸುವ ಕೆಲಸವೂ ಆಗಬೇಕು. ಈ ಅರ್ಜಿ ನೀಡಿದವರಿಗೆ ನಿವೇಶನ ನೀಡಿದ ಬಳಿಕ ಮುಂದಿನ ಅರ್ಜಿಗಳನ್ನು ಸ್ವೀಕರಿಸಿ ಎಂದರು. ಆಗ ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಮಾತನಾಡಿ, ಮಠದ ಹಿರ್ತಡ್ಕ ಹಾಗೂ ಕಜೆಕ್ಕಾರ್‌ನಲ್ಲಿ ಜಾಗ ಇದೆ. ಆದರೆ ಈ ಹಿಂದೆ ಹಿರ್ತಡ್ಕದಲ್ಲಿರುವ ಜಾಗ ಮೆಸ್ಕಾಂನ ಸಬ್‌ಸ್ಟೇಶನ್‌ಗೆ ಮಂಜೂರಾಗಿತ್ತು. ಆದರೆ ಆ ಜಾಗದಲ್ಲಿ ಸಬ್ ಸ್ಟೇಶನ್ ನಿರ್ಮಿಸಲು ಸಾಧ್ಯವಿಲ್ಲವೆಂದು ಅದು ತಿರಸ್ಕೃತಗೊಂಡಿತ್ತು. ಆದರೆ ಆ ಜಾಗ ಈಗಲೂ ಮೆಸ್ಕಾಂನವರ ಹೆಸರಿನಲ್ಲಿದೆ. ಅದನ್ನು ಬಿಟ್ಟುಕೊಡಲು ಮೆಸ್ಕಾಂನವರಿಗೆ ಪತ್ರ ಬರೆದರೂ, ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದರು.


ಸದಸ್ಯ ಸುರೇಶ್ ಅತ್ರಮಜಲು ಮಾತಾನಾಡಿ, ಈಗಿನ ಉಪಾಧ್ಯಕ್ಷರು ಈ ಹಿಂದೆ ಸದಸ್ಯರಾಗಿದ್ದಾಗ ಸ್ವಚ್ಚತೆ ಬಗ್ಗೆ ಕಾಳಜಿ ಹೊಂದಿದ್ದರು. ಆದರೆ ಆಗಿದ್ದ ಆಸಕ್ತಿ ಅವರಿಗೆ ಈಗ ಇದ್ದಂತಿಲ್ಲ. ಯಾಕೆ ಈಗ ಸ್ವಚ್ಛತೆಯ ಬಗ್ಗೆ ಕಾಳಜಿಯಿಲ್ಲ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಉಪಾಧ್ಯಕ್ಷೆ ವಿದ್ಯಾಲಕ್ಷಿ ಪ್ರಭು, ನದಿಗೆ ತ್ಯಾಜ್ಯ ಎಸೆಯುವರಿಗೆ ತ್ಯಾಜ್ಯ ನೀರು ಹರಿಸುವರಿಗೆ ಹಲವು ಬಾರಿ ಎಚ್ಚರಿಕೆ ನೀಡುತ್ತಲೇ ಇದ್ದೇನೆ. ಅದರ ಸರಿಪಡಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.
ಸಭೆಯಲ್ಲಿ ಸದಸ್ಯರಾದ ಯು.ಟಿ. ತೌಸೀಫ್, ಧನಂಜಯ, ರುಕ್ಮಿಣಿ, ಶೋಭಾ, ಉಷಾ ನಾಯ್ಕ, ಜಯಂತಿ, ವಿನಾಯಕ ಪೈ, ಮೈಸಿದಿ ಇಬ್ರಾಹೀಂ, ವನಿತಾ, ಸೌಧ, ಇಬ್ರಾಹೀಂ ಕೆ., ನೆಬೀಸಾ, ಲೊಕೇಶ ಬೆತ್ತೋಡಿ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ಗೀತಾ ಶೇಖರ ವಂದಿಸಿದರು.

LEAVE A REPLY

Please enter your comment!
Please enter your name here