ದ.ಕ ಗ್ಯಾರೇಜ್ ಮಾಲಕರ ಸಂಘದ ಪುತ್ತೂರು ವಲಯದ ಮಹಾಸಭೆ

0

ಯಾಂತ್ರೀಕೃತ ಬದುಕಿನಲ್ಲಿ ಗ್ಯಾರೇಜ್ ಮಾಲಕರ ಸೇವೆ ಪ್ರಭಾವ ಬೀರಿದೆ-ಸತೀಶ್ ಜೆ.ಜೆ

ಪುತ್ತೂರು:ಪ್ರತಿಯೋರ್ವರೂ ತಮ್ಮ ನಿತ್ಯ ಜೀವನದಲ್ಲಿ ವಾಹನವನ್ನು ಬಳಸುತ್ತೇವೆ. ಆದರೆ ನಾವು ಬಳಸುವ ವಾಹನವು ಉತ್ತಮ ಗುಣಮಟ್ಟದ ಸಾಮರ್ಥ್ಯವನ್ನು ಹೊಂದಬೇಕಾದರೆ ಗ್ಯಾರೇಜ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ನಮ್ಮ ಯಾಂತ್ರೀಕೃತ ಬದುಕಿನಲ್ಲಿ ಗ್ಯಾರೇಜ್ ಮಾಲಕರು ಬಹಳಷ್ಟು ಪ್ರಭಾವ ಬೀರಿದ್ದಾರೆ ಎಂದು ಪುತ್ತೂರು ಸರ್ಕಲ್ ಇನ್‌ಪೆಕ್ಟರ್ ಸತೀಶ್ ಜೆ.ಜೆ ಹೇಳಿದರು.


ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ(ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಇದರ ಪುತ್ತೂರು ವಲಯದ ಮಹಾಸಭೆಯು ಜೂ.16 ರಂದು ಬೆಳಿಗ್ಗೆ ಮಿನಿ ವಿಧಾನಸೌಧದ ಬಳಿಯ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸನ್ಮಾನಿತರನ್ನು ಸನ್ಮಾನ ಮಾಡುವ ಮೂಲಕ ಮಾತನಾಡಿದರು. ಸಮಾಜ ಬೆಳೆಯಬೇಕಾದರೆ ಎಲ್ಲಾ ಕೈಗಳು ಜೊತೆಗೂಡಿದಾಗ ಮಾತ್ರ ಸಾಧ್ಯ. ಗ್ಯಾರೇಜ್ ಮಾಲಕರು ಸಮಾಜದಲ್ಲಿ ತಮ್ಮ ಒಗ್ಗಟ್ಟು ಪ್ರದರ್ಶನ ತೋರಿರುವುದು ಶ್ಲಾಘನೀಯ. ಗ್ಯಾರೇಜ್ ಮಾಲಕರು ಸಮಾಜದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.


ವೃತ್ತಿಬಾಂಧವರು ಗ್ರಾಹಕಸ್ನೇಹಿ ಎನಿಸಿಕೊಳ್ಳಬೇಕು-ದಿವಾಕರ್ ಎಂ:
ಮಂಗಳೂರು ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘದ ಚೇರ್‌ಮ್ಯಾನ್ ದಿವಾಕರ್ ಎಂ.ಮಾತನಾಡಿ, ವೃತ್ತಿ ಬಾಂಧವರು ತಮ್ಮ ಯಾವುದೇ ಕಾರ್ಯಕ್ರಮದಲ್ಲಿ ಸಮಯದ ಪರಿಪಾಲನೆ ಮಾಡಬೇಕು. ಗ್ರಾಹಕರಿಗೆ ತಮ್ಮ ವಾಹನವನ್ನು ಕ್ಲಪ್ತ ಸಮಯದಲ್ಲಿ ರಿಪೇರಿಗೊಳಿಸುವ ಮೂಲಕ ಸ್ಪಂದನೆ ನೀಡುತ್ತಾ ಗ್ರಾಹಕಸ್ನೇಹಿಯಾಗಬೇಕು. ಸಂಘದಲ್ಲಿ ಸದಸ್ಯತನದ ಹೆಚ್ಚಳವಾಗುವತ್ತ ಶ್ರಮಿಸಬೇಕು. ವೃತ್ತಿ ಬಾಂಧವರು ಕಷ್ಟದಲ್ಲಿದ್ದಾಗ ಕೂಡಲೇ ಸ್ಪಂದಿಸುವವರಾಗಬೇಕು ಎಂದರು.


ಪ್ರತಿ ವಲಯದಲ್ಲೂ ಸಂಘದ ಸಮುದಾಯ ಭವನ ನಿರ್ಮಿಸಬೇಕು-ಪುಂಡಲೀಕ ಸುವರ್ಣ:
ಮಂಗಳೂರು ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘದ ಮಾಜಿ ಚೇರ್‌ಮ್ಯಾನ್ ಜಿ.ಪುಂಡಲೀಕ ಸುವರ್ಣ ಮಾತನಾಡಿ, ಪ್ರತಿ ವಲಯದಲ್ಲೂ ಸಂಘದ ಸಮುದಾಯ ಭವನ ನಿರ್ಮಿಸಬೇಕು ಇದಕ್ಕಾಗಿ ನಾವು ಸರಕಾರದ ಗಮನಹರಿಸಬೇಕು. ಪ್ರಯತ್ನ ನಮ್ಮದು, ಫಲ ದೇವರದ್ದು ಎಂಬಂತೆ ಒಟ್ಟಾಗಿ ಕೆಲಸ ಮಾಡುವಂತಾಗಬೇಕು ಎಂದರು.


ಸಂಘಟನೆಯಲ್ಲಿ ಬಡವ-ಬಲ್ಲಿದ ಏನಿಲ್ಲ, ಇಲ್ಲಿ ಎಲ್ಲರೂ ಸಮಾನರು-ಪುರುಷೋತ್ತಮ ಕೆ:
ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘದ ಕಾರ್ಯದರ್ಶಿ ಪುರುಷೋತ್ತಮ ಕೆ.ಮಾತನಾಡಿ, ಸಂಘಟನೆಯ ಸಂಬಂಧ ಗಟ್ಟಿಯಾಗಬೇಕಾದರೆ ಅಲ್ಲಿ ಸದಸ್ಯರ ಒಗ್ಗಟ್ಟು ಮುಖ್ಯ. ಮರ ಬೆಳೆಯಬೇಕಾದರೆ ಅದರ ಬೇರು ಸದೃಢವಿರಬೇಕು. ಅದೇ ರೀತಿ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ವೃತ್ತಿಬಾಂಧವರು ಉತ್ತಮವಾಗಿ ಪೋಷಿಸಿಕೊಂಡು ಹೋದಾಗ ಯಶಸ್ವಿಯಾಗುವುದು. ಸಂಘಟನೆಯಲ್ಲಿ ಬಡವ-ಬಲ್ಲಿದ ಏನಿಲ್ಲ, ಇಲ್ಲಿ ಎಲ್ಲರೂ ಸಮಾನರು. ಸದಸ್ಯರಲ್ಲಿ ಇಚ್ಛಾಶಕ್ತಿ, ಕಾರ್ಯ ಶಕ್ತಿ, ಜನಶಕ್ತಿ ಮೇಳೈಸಿದಾಗ ಸಂಘಟನೆಯು ಯಶಸ್ವಿ ಹಾದಿಯಲ್ಲಿ ಸಾಗಬಲ್ಲುದು ಎಂದರು.


ವೃತ್ತಿಬಾಂಧವರು ಒಗ್ಗಟ್ಟಾಗಿ ಸಂಘವನ್ನು ಮೇಲೆತ್ತಬೇಕು-ಕಿಶೋರ್ ಕೇಶವ:
ಮಂಗಳೂರು ವಲಯ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಕಿಶೋರ್ ಕೇಶವ ಮಾತನಾಡಿ, ವೃತ್ತಿ ಬಾಂಧವರು ಎಲ್ಲರೂ ಒಗ್ಗಟ್ಟಾಗಿ ಒಟ್ಟು ಸೇರಿಕೊಂಡು ಸಂಘವನ್ನು ಮೇಲೆತ್ತಬೇಕು. ಆ ಮೂಲಕ ಪ್ರತಿಯೋರ್ವರೂ ಸಂಘದ ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.


ಗ್ಯಾರೇಜ್ ಮಾಲಕರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೈಯಾಡಿಸಿದ್ದು ಶ್ಲಾಘನೀಯ-ಎ.ಜನಾರ್ದನ:
ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎ.ಜನಾರ್ದನ ಮಾತನಾಡಿ, ಸಂಘದ ಹಾಗೂ ದೇವಸ್ಥಾನಕ್ಕೆ ನೀಡುವ ಹಣ ವ್ಯರ್ಥವಾಗಬಾರದು ಅದು ಸಕರಾತ್ಮಕವಾಗಿ ಬಳಕೆಯಾಗಬೇಕು. ಯಾಕೆಂದರೆ ಅದು ಎಲ್ಲರ ತ್ಯಾಗದ ಫಲವಾಗಿದೆ. ಸಂಘದ ಬೆಳವಣಿಗೆಯಲ್ಲಿ ಸದಸ್ಯರ ತ್ಯಾಗ, ಸೇವಾ ಮನೋಭಾವ ಇದ್ದಾಗ ಸಂಘ ಬೆಳೆಯುತ್ತದೆ. ಗ್ಯಾರೇಜ್ ಮಾಲಕರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗಾಗಲೇ ಕೈಯಾಡಿಸಿದ್ದು ಶ್ಲಾಘನೀಯ ಎಂದರು.


ಪುತ್ತೂರು ವಲಯವು ಎಲ್ಲರೊಂದಿಗೆ ಆತ್ಮೀಯತೆಯನ್ನು ಮೈಗೂಡಿಸಿಕೊಂಡ ವಲಯವಾಗಿದೆ-ಕೆ.ಎ ರಾಜ್‌ಗೋಪಾಲ್:
ಮಂಗಳೂರು ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘದ ಕೋಶಾಧಿಕಾರಿ ಕೆ.ಎ ರಾಜ್‌ಗೋಪಾಲ ಮಾತನಾಡಿ, ಪುತ್ತೂರು ಗ್ಯಾರೇಜ್ ವಲಯವು ಎಲ್ಲರೊಂದಿಗೆ ಆತ್ಮೀಯತೆಯನ್ನು ಮೈಗೂಡಿಸಿಕೊಂಡ ವಲಯವಾಗಿದೆ. ಜಿಲ್ಲಾ ಸಂಘದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಪುತ್ತೂರು ವಲಯದ ಸದಸ್ಯರು ಇದ್ದೇ ಇರುತ್ತಾರೆ. ನಾವೆಲ್ಲರೂ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘವನ್ನು ಬೆಳೆಸುವ ಪ್ರವೃತ್ತಿಗೆ ಮುಂದಾಗೋಣ ಎಂದರು.


ಸಮಾಜ ಸೇವೆ ನಮ್ಮ ಯೋಗ ಹಾಗೂ ಭಾಗ್ಯ-ಕಿಶೋರ್ ಕುಮಾರ್ ಬಿ:
ಅಧ್ಯಕ್ಷತೆ ವಹಿಸಿದ ಪುತ್ತೂರು ವಲಯ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಬಿ, ಹಿರಿಯರ ಪರಿಶ್ರಮದ ಫಲವಾಗಿ ಇಂದು ಸಂಘವು ಹೆಮ್ಮರವಾಗಿ ಬೆಳೆದಿದೆ. ಸಂಘಕ್ಕೆ ಸೇರಿದರೆ ಏನು ಲಾಭ ಎಂಬುದು ಮುಖ್ಯವಲ್ಲ. ಬ್ರಹ್ಮಶ್ರೀ ನಾರಾಯಣಗುರು ಹೇಳಿದಂತೆ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಿಷ್ಟರಾಗಿರಿ ಎನ್ನುವುದಕ್ಕೆ ಸಂಘಕ್ಕೆ ಸೇರಿ ಸಮಾಜಕ್ಕೆ ಸಂಘದ ಮೂಲಕ ಏನು ಕೊಡುವುದು ಎಂಬ ಮನೋಭಾವನೆಯನ್ನು ಬೆಳೆಸಿಕೊಂಡಾಗ ಸಂಘವು ನಮ್ಮನ್ನು ಎಂದಿಗೂ ಸೋಲಲು ಬಿಡುವುದಿಲ್ಲ. ಸಮಾಜ ಸೇವೆ ಎನ್ನುವುದು ನಮ್ಮ ಯೋಗ ಹಾಗೂ ಭಾಗ್ಯ ಎಂದರು.


ಮಂಗಳೂರು ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ವಲಯ ಗ್ಯಾರೇಜ್ ಮಾಲಕರ ಸಂಘದ ಗೌರವಾಧ್ಯಕ್ಷ ಸುರೇಶ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲಕ್ಕಿ ಕೂಪನ್ ಡ್ರಾ ನೆರವೇರಿತು. ಪುಟಾಣಿಗಳಾದ ಲಿಖಿತ್ ಹಾಗೂ ಪ್ರಾಪ್ತಿ ಪ್ರಾರ್ಥಿಸಿದರು. ಪುತ್ತೂರು ವಲಯದ ಗ್ಯಾರೇಜ್ ಮಾಲಕರ ಸಂಘದ ಮಾಜಿ ಕಾರ್ಯದರ್ಶಿ ಶರತ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕಿಶೋರ್ ಕುಮಾರ್ ವಂದಿಸಿದರು. ಜಗದೀಶ್, ನಾಗೇಶ್ ಕಬಕ, ದಿವಾಕರ್, ಜಯರಾಂ ರೈ, ಪ್ರಕಾಶ್ ರೈ, ಮೋಹನ್ ಗೌಡ, ಪದ್ಮನಾಭ, ಹರ್ಷ, ಯಶವಂತ್, ಜೀವನ್, ಮಹೇಶ್ ಕಬಕರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಡಿ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರಕಾಶ್ ರೈ ಲೆಕ್ಕಪತ್ರ ಮಂಡಿಸಿದರು. ಪುರುಷೋತ್ತಮ ಗೌಡ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ/ಗೌರವಾರ್ಪಣೆ..
ಸಂಘದ ವತಿಯಿಂದ ನಿವೃತ್ತ ಸೈನಿಕ ಬಾಬು ಪೂಜಾರಿ ಬಲ್ನಾಡು, ಸಾಯಿನೆರವು ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಕಿಶೋರ್ ಮಂಚಿ, ಹಲವಾರು ವರ್ಷಗಳ ಕಾಲ ಸೇವೆ ನೀಡುತ್ತಿರುವ ಹಿರಿಯ ವೃತ್ತಿ ಬಾಂಧವರಾದ ಮೋನಪ್ಪ ಸುವರ್ಣರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸ್ವೀಕರಿಸಿದ ನಿವೃತ್ತ ಸೈನಿಕ ಬಾಬು ಪೂಜಾರಿ ಬಲ್ನಾಡು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲೆಯ ಗ್ಯಾರೇಜ್ ಮಾಲಕರ ಸಂಘದ ಆಯಾ ವಲಯದ ಅಧ್ಯಕ್ಷರುಗಳಿಗೆ ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.

ವಿದ್ಯಾರ್ಥಿ ವೇತನ..
ಸಂಘದ ವತಿಯಿಂದ ವೃತ್ತಿ ಬಾಂಧವರಾದ ಪ್ರಕಾಶ್ ರೈರವರ ಪುತ್ರಿ ಪ್ರಣಿಲ್ ರೈ ಶರತ್ ರೈಯವರ ಪುತ್ರ ಶ್ರದ್ಧನ್ ರೈ, ಸುಜಿತ್ ರೈಯವರ ಪುತ್ರ ಸ್ವಯಂ ರೈ, ಮೋಹನ್ ಗೌಡರವರ ಪುತ್ರ ನಿಖಿತ್ ರವರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಅನಾವರಣ..
ಗ್ಯಾರೇಜ್ ಮಾಲಕರ ಸಂಘದ ಮಾಜಿ ಮಾಲಕರೂ ಆಗಿದ್ದು ಪ್ರಸ್ತುತ ಪೂವರಿ ತುಳು ಪತ್ರಿಕೆಯ ಸಂಪಾದಕರೂ ಆಗಿರುವ ವಿಜಯಕುಮಾರ್ ಹೆಬ್ಬಾರ್‌ಬೈಲುರವರ ಪೂವರಿ ಪತ್ರಿಕೆಯ ವಿಶೇಷ ಸಂಪುಟವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

LEAVE A REPLY

Please enter your comment!
Please enter your name here