ಪುತ್ತೂರು: ಪ್ರತಿಷ್ಠಿತ ಬಂಟರ ಸಂಘ ರಿ, ಪುತ್ತೂರು ತಾಲೂಕು ಇದರ ನೂತನ ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿಯಾಗಿ ಸಂತೋಷ್ ಶೆಟ್ಟಿ ಆಕಾಂಕ್ಷ ನೆಹರುನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಘಕ್ಕೆ ಮೂರು ಹೋಬಳಿಗಳ 22 ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ
ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಜಿ ಹಾಗೂ ಮೂರು ಹೋಬಳಿಗಳ 22 ನಿರ್ದೇಶಕರ ಸ್ಥಾನಗಳಿಗೆ ಜೂ.22ರಂದು ಚುನಾವಣೆ ನಿಗದಿಯಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಕಾವು ಹೇಮನಾಥ ಶೆಟ್ಟಿಯವರು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು.ಉಳಿದಂತೆ ಪ್ರಧಾನ ಕರ‍್ಯದರ್ಶಿ ಸ್ಥಾನಕ್ಕೆ ಎರಡು ಹಾಗೂ ಕೋಶಾಧಿಕಾರಿ ಸ್ಥಾನಕ್ಕೆ 4 ಹಾಗೂ ಪುತ್ತೂರು, ಕಡಬ, ಉಪ್ಪಿನಂಗಡಿ ಹೋಬಳಿಯ ಒಟ್ಟು 22 ನಿರ್ದೇಶಕರುಗಳ ಸ್ಥಾನಕ್ಕೆ 39 ಮಂದಿ ನಾಮಪತ್ರ ಸಲ್ಲಿಸಿದ್ದರು.ನಾಮಪತ್ರಗಳ ಹಿಂಪಡೆಯಲು ಜೂ.17ರಂದು ಕೊನೆಯ ದಿನವಾಗಿತ್ತು.ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಸ್ಥಾನಕ್ಕೆ ತಲಾ ಒಂದೊಂದೇ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದು ಅವಿರೋಧ ಆಯ್ಕೆ ನಡೆದಿದೆ.22 ನಿರ್ದೇಶಕ ಸ್ಥಾನಗಳಿಗೂ 22 ಮಂದಿ ಮಾತ್ರವೇ ಕಣದಲ್ಲಿ ಉಳಿದು ಇತರರು ನಾಮಪತ್ರ ಹಿಂಪಡೆದುಕೊಂಡ ಹಿನ್ನೆಲೆಯಲ್ಲಿ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.ಹಿರಿಯ ವಕೀಲ ಅರಂತನಡ್ಕ ಬಾಲಕೃಷ್ಣ ರೈ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಸಂಘದ ನೂತನ ಅಧ್ಯಕ್ಷರಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕರ‍್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿ ಸ್ಥಾನಕ್ಕೆ ಅಶ್ಮಿ ಕಂಫರ್ಟ್ನ ಸಂತೋಷ್ ಶೆಟ್ಟಿ ಆಕಾಂಕ್ಷ ನೆಹರೂನಗರ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ.
ನೂತನ ನಿರ್ದೇಶಕರಾಗಿ ಆಯ್ಕೆಯಾದವರು:
ಪುತ್ತೂರು ಹೋಬಳಿ:ಸಂಜೀವ ಆಳ್ವ ಹಾರಾಡಿ(ಮೂಕಾಂಬಿಕಾ ಗ್ಯಾಸ್ ಏಜೆನ್ಸೀಸ್‌ನ ಮಾಲಕರು),ಪಿ.ಸುಧೀರ್ ಶೆಟ್ಟಿ ತೆಂಕಿಲ(ಮಾಲಕರು ವಿಘ್ನೇಶ್ವರ ಇಂಜಿನಿಯರಿAಗ್ ವರ್ಕ್ಸ್ ಪಡೀಲು),ನಿತಿನ್ ಪಕ್ಕಳ ಮರೀಲ್(ಪುತ್ತೂರು ಪ್ರಾಪರ್ಟೀಸ್),ಸತೀಶ್ ರೈ ಕಟ್ಟಾವು(ಕಟ್ಟಾವು ಇನ್ಶೂರೆನ್ಸ್ ಸೆಂಟರ್),ರವೀಂದ್ರ ಶೆಟ್ಟಿ ನುಳಿಯಾಲು,(ಮಾಜಿ ಮಂಡಲ ಉಪಪ್ರಧಾನರು, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು),ರಮೇಶ್ ರೈ ಡಿಂಬ್ರಿ(ಬಂಟರ ಸಂಘದ ಹಾಲಿ ಪ್ರಧಾನ ಕಾರ್ಯದರ್ಶಿ),ಸ್ವರ್ಣಲತಾ ಜೆ.ರೈ,ಸದಾಶಿವ ರೈ ಸೂರಂಬೈಲು(ಪಿಡಬ್ಲ್ಯೂಡಿ ಗುತ್ತಿಗೆದಾರರು),ಶಶಿಕಿರಣ್ ರೈ ನೂಜಿಬೈಲು(ಒಳಮೊಗ್ರು ಗ್ರಾ.ಪಂ.ಮಾಜಿ ಸದಸ್ಯ),ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ(ರೋಯಲ್ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷ),ಶಿವನಾಥ ರೈ ಮೇಗಿನಗುತ್ತು(ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ),ರಮೇಶ್ ಆಳ್ವ ಅಲೆಪ್ಪಾಡಿ.
ಕಡಬ ಹೋಬಳಿ: ದಯಾನಂದ ರೈ ಮನವಳಿಕೆಗುತ್ತು(ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ),ರಾಧಾಕೃಷ್ಣ ರೈ ಪರಾರಿಗುತ್ತು(ಉದ್ಯಮಿ ಆಲಂಕಾರು),ಸುಭಾಸ್ ಕುಮಾರ್ ಶೆಟ್ಟಿ ಅರುವಾರ(ಬಂಟರ ಸಂಘದ ಮಾಜಿ ನಿರ್ದೇಶಕ),ಪ್ರಕಾಶ್ ರೈ ಸಾರಕರೆ(ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ),ಇಂದುಶೇಖರ್ ಶೆಟ್ಟಿ ಕುಕ್ಕೇರಿ, ಪುಲಸ್ತ್ಯ ವಿ.ರೈ ಕುಂಟೋಡಿ ಕುಟ್ರುಪ್ಪಾಡಿ(ಮಾಜಿ ಅಧ್ಯಕ್ಷರು,ಪುತ್ತೂರು ತಾ.ಪಂ.).
ಉಪ್ಪಿನಂಗಡಿ ಹೋಬಳಿ: ಶಶಿರಾಜ್ ರೈ ನೆಕ್ಕಿಲಾಡಿ(ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ),ಜಯಾನಂದ ಬಂಟ್ರಿಯಾಲ್(ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ),ರವಿಪ್ರಸಾದ್ ಶೆಟ್ಟಿ ಬನ್ನೂರು(ಯುವ ಬಂಟರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ),ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿರವರು ಆಯ್ಕೆಯಾಗಿದ್ದಾರೆ.
ಜೂ.22ರಂದು ಅಧಿಕೃತ ಘೋಷಣೆ: ಸಂಘದ ನೂತನ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದರೂ ಜೂ.22ರಂದು ಚುನಾವಣಾಧಿಕಾರಿಯವರು ಅಧಿಕೃತ ಘೋಷಣೆ ಮಾಡಲಿದ್ದಾರೆ.
ಅಧ್ಯಕ್ಷ ಹೇಮನಾಥ ಶೆಟ್ಟಿಯವರ ಪರಿಚಯ: ಕಾವು ಅಂತಪ್ಪ ಶೆಟ್ಟಿ ಮತ್ತು ಬನ್ನೂರು ಗುತ್ತು ತಾರಾ ಅಂತಪ್ಪ ಶೆಟ್ಟಿ ದಂಪತಿಯ ಪುತ್ರ ಹೇಮನಾಥ ಶೆಟ್ಟಿಯವರು ಕಾಲೇಜು ದಿನಗಳಲ್ಲಿಯೇ ನಾಯಕತ್ವ ಗುಣವನ್ನು ಬೆಳೆಸಿಕೊಂಡಿದ್ದವರು.ಫಿಲೋಮಿನಾ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಎನ್‌ಎಸ್‌ಯುಐ ಪುತ್ತೂರು ತಾಲೂಕು ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.9 ವರ್ಷಗಳ ಕಾಲ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಕೆಪಿಸಿಸಿ ಸಂಯೋಜಕರಾಗಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿಯಾಗಿ ಆರು ವರ್ಷ ಸೇವೆ ಮಾಡಿದ ಪ್ರಸ್ತುತ 2ನೇ ಅವಧಿಗೆ ಮಾತೃ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸುಮಾರು 10 ವರುಷಗಳಿಂದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಸಮಿತಿ ಸದಸ್ಯರಾಗಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.ಹೇಮನಾಥ ಶೆಟ್ಟಿಯವರ ಪತ್ನಿ ಅನಿತಾ ಹೇಮನಾಥ ಶೆಟ್ಟಿಯವರು ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.ಅನಿತಾ-ಹೇಮನಾಥ ಶೆಟ್ಟಿಯವರ ಹಿರಿಯ ಮಗಳು ಡಾ.ವಾಸ್ತವಿ ಶೆಟ್ಟಿ ಎಂಬಿಬಿಎಸ್ ಮುಗಿಸಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ನಂತರ ಪುತ್ತೂರಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸಿ ಇದೀಗ ಉನ್ನತ ವಿದ್ಯಾಭ್ಯಾಸವನ್ನು ಮಾಡಲು ಪೂರ್ವ ತಯಾರಿ ಮಾಡುತ್ತಿದ್ದಾರೆ.ಎರಡನೇ ಮಗಳು ರಂಜಿತಾ ಶೆಟ್ಟಿಯವರು ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪ್ರ.ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ: ನೆಲ್ಯಾಡಿ ವಲಯ ಬಂಟರ ಸಂಘದಲ್ಲಿ ಮೂರು ಅವಧಿಯಲ್ಲಿ ಒಟ್ಟು 11 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ಈ ಹಿಂದೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಕೋಶಾಧಿಕಾರಿಯಾಗಿರುವ ಇವರು ಹಾಲಿ ನಿರ್ದೇಶಕರಾಗಿದ್ದಾರೆ.ಆಲಂಕಾರು ಲಯನ್ಸ್ ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿ,ಗೃಹಿಣಿಯಾಗಿರುವ ಪತ್ನಿ ಗೀತಾನಿತ್ಯಾನಂದ ಶೆಟ್ಟಿ, ಮಕ್ಕಳು ಹವೀಸ್ ಶೆಟ್ಟಿ ಮತ್ತು ಹಿಮಾನಿ ಶೆಟ್ಟಿಯವರೊಂದಿಗೆ ಇವರು ನೆಲ್ಯಾಡಿಯಲ್ಲಿ ವಾಸ್ತವ್ಯವಿದ್ದಾರೆ.
ಕೋಶಾಧಿಕಾರಿ ಸಂತೋಷ್ ಶೆಟ್ಟಿ: ನೂತನ ಕೋಶಾಧಿಕಾರಿ ಸಂತೋಷ್ ಶೆಟ್ಟಿಯವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ಉದ್ಯಮಿಯೂ ಆಗಿದ್ದಾರೆ. ಬಲ್ನಾಡು ಸಾಜ ನಾರಾಯಣ ಶೆಟ್ಟಿ ಮತ್ತು ಕೊರಂಬಡ್ಕ ಶ್ರೀಮತಿ ಸುಶೀಲ ಎನ್ ಶೆಟ್ಟಿಯವರ ಪ್ರಥಮ ಪುತ್ರನಾಗಿರುವ ಇವರು ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ 1988ರಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪೂರೈಸಿದ ನಂತರ ಸ್ವಂತ ಉದ್ಯೋಗ ಕೈಗೊಂಡು ಸಿವಿಲ್ ಕನ್‌ಸ್ಟ್ರಕ್ಷನ್ ಸಂಸ್ಥೆ ಅಭಿಜ್ಞಾ ಕನ್‌ಸ್ಟ್ರಕ್ಷನ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.ಪ್ರಕೃತ ಬೈಪಾಸ್‌ನಲ್ಲಿರುವ ಆಶ್ಮಿ ಕಂಫರ್ಟ್ ಇದರ ಆಡಳಿತ ಪಾಲುದಾರರು.2006ರಲ್ಲಿ ರೋಟರಿ ಸೇರಿ ಕ್ಲಬ್ ಲೆವೆಲ್, ಸಹಾಯಕ ಗವರ್ನರ್ ಇತ್ಯಾದಿ ವಲಯ ಮಟ್ಟದಲ್ಲಿ ,ಜಿಲ್ಲಾ ಕಾರ್ಯದರ್ಶಿ ಸಹಿತ ಜಿಲ್ಲಾ ಮಟ್ಟದಲ್ಲಿ ವಿವಿಧ ಸಂಘಟನಾ ಹುದ್ದೆಗಳ ನಿರ್ವಹಣೆ.ಎರಡು ಹೊಸ ಕ್ಲಬ್‌ಗಳ ಸ್ಥಾಪನೆ, ಸುಮಾರು 125ಕ್ಕಿಂತ ಹೆಚ್ಚು ಜನರನ್ನು ರೋಟರಿಗೆ ಸೇರ್ಪಡೆಗೊಳಿಸಿದ್ದರು.ಕಲ್ಲೇಗ ಕಲ್ಕುಡ ದೈವಸ್ಥಾನದ ಆಡಳಿತ ಸಮಿತಿ ಸದಸ್ಯನಾಗಿ 2 ಅವಧಿಗೆ ಕಾರ್ಯನಿರ್ವಹಣೆ ಮಾಡಿರುವ ಇವರು ಪುತ್ತೂರು ವಾಣಿಜ್ಯ ಮತ್ತು ವರ್ತಕ ಸಂಘದ ಉಪಾಧ್ಯಕ್ಷರಾಗಿ, ಪುತ್ತೂರು ಬಂಟರ ಸಂಘದ ಕಾರ್ಯಕಾರಿ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಿದ್ದರು.2021ರಿಂದ ಇಂಡಿಯನ್ ರೆಡ್ ಕ್ರಾಸ್ ಪುತ್ತೂರು ಘಟಕದ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 50ಕ್ಕೂ ಹೆಚ್ಚು ಬಾರಿ ಇವರು ರಕ್ತದಾನ ಮಾಡಿ ಇವರು ಮಾನವೀಯ ಕಾರ್ಯ ಮಾಡಿ ಗುರುತಿಸಿಕೊಂಡಿದ್ದಾರೆ.ಪತ್ನಿ ಶ್ರೀಮತಿ ಅಮಿತಾ ಶೆಟ್ಟಿ, ಮಗ ಆರ್ಕಿಟೆಕ್ಟ್ ಅಭಿಜ್ಞಾ ಪ್ರಹಾಸ್ ಶೆಟ್ಟಿಯವರೊಂದಿಗೆ ಪ್ರಕೃತ ನೆಹರು ನಗರದ ಗಣೇಶ್ ಭಾಗ್‌ನ ¾ಆಕಾಂಕ್ಷ¿ದಲ್ಲಿ ಇವರು ವಾಸವಿದ್ದಾರೆ.