ನಿಡ್ಪಳ್ಳಿ: ಪಾಣಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ ಇವರ ಅಧ್ಯಕ್ಷತೆಯಲ್ಲಿ ಜೂ.13 ರಂದು ನಡೆಯಿತು.
ಕುಡಿಯುವ ನೀರಿನ ಫಲಾನುಭವಿಗಳು ಕುಡಿಯುವ ನೀರಿನ ಬಿಲ್ ಕಟ್ಟದೇ ಇರುವುದು ಗ್ರಾಮದ ಅಭಿವೃದ್ಧಿಗೆ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲು ಬಹಳ ಸಮಸ್ಯೆಯಾಗುತ್ತಿದೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಕೆಲವು ಫಲಾನುಭವಿಗಳು ಮಾತ್ರ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸುತ್ತಿದ್ದಾರೆ. ಆದರೆ ಕೆಲವರು ಬಿಲ್ ಬಾಕಿ ಇಟ್ಟು ಕುಡಿಯುವ ನೀರು ಪಡೆಯುತ್ತಿದ್ದಾರೆ. ಬಾಕಿ ಇರುವ ಬಿಲ್ ವಸೂಲು ಮಾಡುವ ಕೆಲಸವಾಗ ಬೇಕಾಗಿದೆ. ಪ್ರತಿ ತಿಂಗಳು ನೀರಿನ ಬಿಲ್ ವಸೂಲಿ ಆಗಲೇ ಬೇಕು ಎಂದು ಸದಸ್ಯರು ಪಟ್ಟು ಹಿಡಿದರು.ಈ ಬಗ್ಗೆ ವಿಸ್ತೃತ ಚರ್ಚೆ ನಡೆದು ರೂ.2000 ಕ್ಕಿಂತ ಹೆಚ್ಚು ಬಿಲ್ ಬಾಕಿ ಇರುವ ಕುಡಿಯುವ ನೀರಿನ ಫಲಾನುಭವಿಗಳ ಸಂಪರ್ಕವನ್ನು ನಿರ್ದಾಕ್ಷಿಣ್ಯವಾಗಿ ಕಡಿತ ಗೊಳಿಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
* ಮನೆ ರಿಪೇರಿಗೆ ಪರವಾನಗಿ ಪಡೆದು ಹೊಸ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪಣೆ
ಖಾಸಗಿ ವ್ಯಕ್ತಿ ಯೋರ್ವರು ಆರ್ಲಪದವಿನಲ್ಲಿ ಮನೆ ರಿಪೇರಿಗೆಂದು ಪರವಾನಿಗೆ ಪಡೆದು ಈಗ ನೂತನ ಕಟ್ಟಡ ನಿರ್ಮಿಸುತ್ತಿರುವುದು ಪಂಚಾಯತ್ ಗಮನಕ್ಕೆ ಬಂದಿದೆ.ಆದುದರಿಂದ ಆ ಕಟ್ಟಡ ಕಾಮಗಾರಿ ಮುದುವರಿಸಲು ಪಂಚಾಯತ್ ಆಕ್ಷೇಪಣೆ ಇದೆ ಎಂದು ಪಂಚಾಯತ್ ನಿರ್ಣಯ ಕೈಗೊಂಡಿತು. ಸಭೆಯಲ್ಲಿ ಇಲಾಖೆಗಳ ಸುತ್ತೋಲೆ ಬಗ್ಗೆ ಚರ್ಚಿಸಲಾಯಿತು ಮತ್ತು ಬಂದ ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.
ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ.ಡಿ, ಸದಸ್ಯರಾದ ನಾರಾಯಣ ನಾಯಕ್, ಕೃಷ್ಣಪ್ಪ ಪೂಜಾರಿ,ಮೋಹನ ನಾಯ್ಕ, ಸುಭಾಸ್ ರೈ ಸಿ.ಎಚ್, ಅಬೂಬಕ್ಕರ್, ಸುಲೋಚನಾ, ವಿಮಲ ಉಪಸ್ಥಿತರಿದ್ದರು. ಪ್ರಭಾರ ಪಿಡಿಒ ಆಶಾ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ವಿಶ್ವನಾಥ, ಅರುಣ ಕುಮಾರ್, ಸೌಮ್ಯ, ರೂಪಶ್ರೀ ಸಹಕರಿಸಿದರು.