ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕ್ರೀಡಾ ಸಾಧನೆಗೆ ಮತ್ತೊಂದು ಗರಿ

0

ವಿಭಾಗ ಮಟ್ಟದ ಅಂತರ್ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಹಲವು ಪದಕಗಳನ್ನು ಬಾಚಿದ ಕಾನೂನು ವಿದ್ಯಾರ್ಥಿಗಳು

ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿ ಗಮನ ಸೆಳೆದಿದೆ. ಬುಧವಾರದಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಗಳ ಮಂಗಳೂರು ವಿಭಾಗದ ಅಂತರ್ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟವನ್ನು ಶಿವಮೊಗ್ಗದ ಸಿಬಿಆರ್ ಕಾನೂನು ಮಹಾವಿದ್ಯಾಲಯ ಇಲ್ಲಿ ನಡೆಸಲಾಯಿತು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕ್ರೀಡಾಪಟುಗಳು ಅನೇಕ ಪದಕಗಳನ್ನು ಪಡೆದುಕೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡುವ ಜೊತೆಗೆ, ಮುಂದೆ ನಡೆಯಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯಗಳ ಅಂತರ ವಿಭಾಗ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ತೃತೀಯ ಬಿ.ಎ.ಎಲ್‌.ಎಲ್.ಬಿ.ಯ ವಿಜಯ್ ಶ್ರೀಹರಿ 5,000 ಮತ್ತು 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಚತುರ್ಥ ಬಿ.ಎ.ಎಲ್.ಎಲ್.ಬಿ.ಯ ವಿದ್ಯಾರ್ಥಿನಿ ಪ್ರಜ್ಞಾ 1500 ಮತ್ತು 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಪ್ರಥಮ ಬಿ.ಎ.ಎಲ್.ಎಲ್‌.ಬಿ.ಯ ಪ್ರಣಮ್ಯ ಪಕಳ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರೇ, ಪ್ರಥಮ ಬಿ.ಎ.ಎಲ್‌.ಎಲ್.ಬಿ.ಯ ಆಕೃತಿ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಬಿ.ಎ.ಎಲ್‌.ಎಲ್.ಬಿ.ಯ ಸಿಂಚನಾ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರೆ, ತೃತೀಯ ಬಿ.ಎ.ಎಲ್.ಎಲ್.ಬಿ.ಯ ವೃಂದಾ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ಪ್ರಜ್ಞಾ, ಪ್ರಣಮ್ಯ ಪಕ್ಕಳ, ಆಕೃತಿ ಹಾಗೂ ವೃಂದಾ ಇವರುಗಳು 4 X 400 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಕುಮಾರ್ ಎಂ.ಕೆ. ಈ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಇನ್ನಷ್ಟು ಬಲ ತುಂಬಿದೆ.

LEAVE A REPLY

Please enter your comment!
Please enter your name here