ವಿದ್ಯುನ್ಮಾನ ಮತಯಂತ್ರ ಮಾದರಿ ಬಳಕೆ
ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರ್ಷಿತ್ ಎಸ್. ನಾಯ್ಕ್ , ಕಾರ್ಯದರ್ಶಿಯಾಗಿ ಸನಿಹ ಆಯ್ಕೆ
ಉಪಾಧ್ಯಕ್ಷೆಯಾಗಿ ತೃಪ್ತಿ ಎ. ಕೆ., ಜೊತೆ ಕಾರ್ಯದರ್ಶಿಯಾಗಿ ಆಶ್ಲೇಷ್ ಎಸ್. ಆರ್. ಅವಿರೋಧ ಆಯ್ಕೆ
ಕ್ರೀಡಾ ಕಾರ್ಯದರ್ಶಿಯಾಗಿ ಕೀರ್ತನ್ ಎಸ್. ಕೆ. ಹಾಗೂ ಕ್ರೀಡಾ ಜತೆ ಕಾರ್ಯದರ್ಶಿಯಾಗಿ ತ್ರಿಷಾ ಆಯ್ಕೆ
ಪುತ್ತೂರು: 2024-25 ನೇ ಶೈಕ್ಷಣಿಕ ವರ್ಷದ ಕಾಲೇಜು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳ ಆಯ್ಕೆಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಕಾಲೇಜು ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಹರ್ಷಿತ್ ಎಸ್. ನಾಯ್ಕ್, ಉಪಾಧ್ಯಕ್ಷರಾಗಿ ದ್ವಿತೀಯ ಕಲಾ ವಿಭಾಗದ ತೃಪ್ತಿ ಎ. ಕೆ., ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಸನಿಹ, ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಕಲಾ ವಿಭಾಗದ ಆಶ್ಲೇಷ್ ಎಸ್. ಆರ್. ಆಯ್ಕೆಯಾಗಿದ್ದಾರೆ. ಪ್ರಾಂಶುಪಾಲರಾದ ಮಹೇಶ್‌ನಿಟಿಲಾಪುರ ಅವರ ನಿರ್ದೇಶನದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀಧರ ಶೆಟ್ಟಿಗಾರ್‌ಅವರ ನೇತೃತ್ವದ ತಂಡ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟಿತು. ಇದೇ ಸಂದರ್ಭದಲ್ಲಿ ಕ್ರೀಡಾ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಕೀರ್ತನ್ ಎಸ್. ಕೆ. ಹಾಗೂ ಕ್ರೀಡಾ ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ತ್ರಿಷಾ ಆಯ್ಕೆಗೊಂಡರು.
ವ್ಯವಸ್ಥಿತ ಮತದಾನ ಪ್ರಕ್ರಿಯೆ
ಪ್ರಜಾಪ್ರಭುತ್ವ ವ್ಯವಸ್ಥೆಯ ಲೋಕಸಭಾ ಚುನಾವಣೆಯ ಮಾದರಿಯಲ್ಲಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಯಿತು. ಜೂನ್ 13 ರಂದು ಪ್ರಾಂಶುಪಾಲರಾದ ಮಹೇಶ್‌ನಿಟಿಲಾಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳಾದ ಶ್ರೀಧರ ಶೆಟ್ಟಿಗಾರ್ ಅವರು ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಿದರು. ಜೂನ್ 15 ರ ವರೆಗೆ ನಿಗದಿತ ನಮೂನೆಯೊಂದಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ನಾಮಪತ್ರ ಪರಿಶೀಲನೆಯ ನಂತರ ಅಭ್ಯರ್ಥಿಗಳಿಗೆ ಪ್ರಚಾರ ನಡೆಸಲು ಮಾದರಿ ನೀತಿಸಂಹಿತೆಯ ನಿಯಮಾವಳಿಗಳೊಂದಿಗೆ ಅವಕಾಶ ನೀಡಲಾಯಿತು. ಅಧಿಸೂಚನೆಯ ಪ್ರಕಟಣೆಯಂತೆ ಜೂನ್ 19 ರಂದು ವಿದ್ಯುನ್ಮಾನ ಮತಯಂತ್ರದ ಸಹಾಯದೊಂದಿಗೆ ಚುನಾವಣೆ ನಡೆದು ಕೆಲವೇ ಹೊತ್ತಿನಲ್ಲಿ ಫಲಿತಾಂಶ ಪ್ರಕಟಿಸಲಾಯಿತು.
ಇವಿಎಂ ಮಾದರಿಯಲ್ಲಿ ಮತದಾನ
ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು (ಇವಿಎಂ ಸಿಮ್ಯುಲೇಟರ್) ಬಳಸಲಾಗಿತ್ತು. ಲೋಕಸಭೆ ಮುಂತಾದ ಚುನಾವಣೆಗಳ ಮತದಾನ ಮಾಡಿದ ಅನುಭವ ವಿದ್ಯಾರ್ಥಿಗಳಿಗಾಯಿತು. ವಿದ್ಯಾರ್ಥಿ ಕ್ಷೇಮಪಾಲನಾ ತಂಡದ ಸದಸ್ಯರು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಚುನಾವಣೆಯಲ್ಲಿ ದಾಖಲೆಯ 96.5% ಮತದಾನ ದಾಖಲಾಯಿತು.
ವಿವೇಕ ಮುನ್ನುಡಿ – 2024 : ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪ್ರಮಾಣವಚನ
ವಿವೇಕ ಮುನ್ನುಡಿ – 2024 ಎಂಬ ಶೀರ್ಷಿಕೆಯೊಂದಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ 21 ಜೂನ್ 2024 ಶುಕ್ರವಾರ ಮಧ್ಯಾಹ್ನ 1.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ 2024-25 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಹರೀಶ್ ಪೂಂಜಾ ನೆರವೇರಿಸಲಿದ್ದಾರೆ. ಮಾನ್ಯ ಶಾಸಕರ ಉಪಸ್ಥಿತಿಯಲ್ಲಿ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ವಹಿಸಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಕೃಷ್ಣಪ್ರಸನ್ನ, ಕಾಲೇಜಿನ ಉಪಪ್ರಾಂಶುಪಾಲ ದೇವಿಚರಣ್ ರೈ, ಉಪನ್ಯಾಸಕ – ಉಪನ್ಯಾಸಕೇತರ ವೃಂದದವರು, ತರಗತಿ ಹಾಗೂ ವಿವಿಧ ಸಂಘಗಳ ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿರಲಿದ್ದಾರೆ.