ಅವ್ಯವಸ್ಥೆಗಳ ಆಗರವಾಗಿದೆ ಸರ್ವೆ ಕಲ್ಪಣೆಯಲ್ಲಿರುವ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ-ಮೂಲಭೂತ ಸೌಕರ್ಯಗಳಿಲ್ಲದೇ ಕಂಗಾಲಾದ ವಿದ್ಯಾರ್ಥಿಗಳು..!

0


ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆಯಲ್ಲಿರುವ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವಸತಿ ನಿಲಯ ಅವ್ಯವಸ್ಥೆಗಳ ಆಗರವಾಗಿದೆ.ಇಲ್ಲಿ 35 ವಿದ್ಯಾರ್ಥಿಗಳಿದ್ದರೂ ಕೂಡಾ ಈ ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯಿದ್ದು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಇಲ್ಲಿನ ಹಾಸ್ಟೆಲ್ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ವಹಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಏನಿಲ್ಲ…ಏನೇನಿಲ್ಲ..!
ಇಲ್ಲಿನ ಹಾಸ್ಟೆಲ್‌ನ ಮೇಲ್ಛಾವಣಿಯ ರೀಪು ತುಂಡಾಗಿ ಹಂಚು ಬೀಳುವ ಸ್ಥಿತಿಯಲ್ಲಿದ್ದು ಮಾಡು ಸೋರುತ್ತಿದೆ. ವಸತಿ ನಿಲಯಕ್ಕೆ ಸುಣ್ಣಬಣ್ಣ ಹಚ್ಚದೆ ಹಲವು ವರ್ಷಗಳು ಕಳೆದಿದೆ. ಆವರಣ ಗೋಡೆ ಇಲ್ಲದೇ ಹಾವುಗಳ ಕಾಟವೂ ಇದೆ. ಸೋಲಾರ್ ನೀರಿನ ವ್ಯವಸ್ಥೆ ಕೆಟ್ಟು ಹೋಗಿದೆ, ಬಿಸಿ ನೀರಿಗೆ ಗೀಸರ್ ವ್ಯವಸ್ಥೆಯಿಲ್ಲ. ಇನ್ವರ್ಟರ್ ವ್ಯವಸ್ಥೆಯಿಲ್ಲ. ಆನ್ಲೈನ್ ತರಗತಿಗಳು ಇದ್ದರೂ ಟಿವಿ ವ್ಯವಸ್ಥೆ ಇಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳು ಭದ್ರತೆ ದೃಷ್ಟಿಯಲ್ಲಿ ಇರಬೇಕಾದ ಸಿಸಿ ಟಿವಿಯೂ ಇಲ್ಲ. ಕ್ರೀಡಾ ಸಾಮಗ್ರಿಗಳು ಇಲ್ಲ, ಡಸ್ಕ್ ಬೆಂಚುಗಳ ಕೊರತೆ ಇದೆ . ನೀರಿನ ಟ್ಯಾಂಕ್, ಕಿಟಕಿ ಬಾಗಿಲು ಆಗಬೇಕಿದೆ. ಫ್ಯಾನ್, ಚಪ್ಪಲ್ ಸ್ಟ್ಯಾಂಡ್, ಚಾಪೆ ಇಡುವ ಸ್ಟ್ಯಾಂಡ್ ಅಗತ್ಯ ಇದೆ, ಪೈಪ್ ಲೈನ್ ವ್ಯವಸ್ಥೆ ಆಗಬೇಕಿದೆ, ನೆಲಕ್ಕೆ ಟೈಲ್ಸ್ ಅಳವಡಿಕೆಯ ಅಗತ್ಯವೂ ಇದೆ. ಸಮಾಧಾನದ ಸಂಗತಿ ಏನೆಂದರೆ ಹಾಸ್ಟೆಲ್ ಮಕ್ಕಳ ಊಟಕ್ಕೆ ಸಮಸ್ಯೆಯಾಗಿಲ್ಲ. ಮಕ್ಕಳಲ್ಲಿ ಶಿಸ್ತು ಕೂಡಾ ಇದೆ. ರಾತ್ರಿ ಊಟಕ್ಕೆ ಮೊದಲು ಸಾಮೂಹಿಕ ಭಜನೆ ಕೂಡಾ ನಡೆಯುತ್ತಿದೆ.

ನಿರ್ಲಕ್ಷ್ಯಕ್ಕೆ ಒಳಗಾಗಲು ಕಾರಣವೇನು:
ಬೇರೆ ಬೇರೆ ಊರುಗಳ ವಿದ್ಯಾರ್ಥಿಗಳು ಉಳಿದುಕೊಳ್ಳುವ ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯಗಳು ಇರಬೇಕಾಗಿರುವುದು ಅತೀ ಅವಶ್ಯಕವಾಗಿದ್ದರೂ ಕೂಡಾ ಸರ್ವೆ ಕಲ್ಪಣೆ ಹಾಸ್ಟೆಲ್‌ನಲ್ಲಿ ಈ ರೀತಿ ಆಗಲು ಏನು ಕಾರಣ ಎನ್ನುವ ಪ್ರಶ್ನೆ ಕಾಡುತ್ತಿದ್ದು ಹಾಸ್ಟೆಲಿಗೆ ಸಂಬಂಧಿಸಿದ ಅಧಿಕಾರಿಗಳು ನೋಡಿಯೂ ಸುಮ್ಮನಿದ್ದಾರೆಯೇ ಅಥವಾ ಅವರು ಪ್ರಯತ್ನ ಪಟ್ಟು ಸಫಲತೆ ಕಂಡಿಲ್ಲವೇ ಅಥವಾ ಜನಪ್ರತಿನಿಧಿಗಳಿಗೆ ಈ ವಿಚಾರ ತಿಳಿಯದೇ ಹೀಗಾಯಿತೇ ಎನ್ನುವ ಪ್ರಶ್ನೆಗಳು ಎದುರಾಗಿದೆ. ಏನೇ ಆದರೂ ಹತ್ತಾರು ಸಮಸ್ಯೆಗಳಿರುವ ಕಲ್ಪಣೆಯಲ್ಲಿರುವ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟವರು ಗಮನಿಸಿ ಇಲ್ಲಿಗೆ ಬೇಕಾದ ಅವಶ್ಯಕತೆಗಳನ್ನು ತುರ್ತಾಗಿ ಪೂರೈಸಬೇಕಾದ ಅನಿವಾರ್ಯತೆಯಿದೆ.

ಶಿವನಾಥ ರೈ ಭೇಟಿ-ಸ್ಪಂದನೆ
ನಮ್ಮ ಊರಿನ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವಸತಿ ನಿಲಯದ ಮಕ್ಕಳೊಂದಿಗೆ ಸಂವಾದ ಮಾಡಬೇಕೆಂಬ ಉದ್ದೇಶದಿಂದ ಅಲ್ಲಿಗೆ ಭೇಟಿ ನೀಡಿದಾಗ ಅವರ ಮುಂದೆ ಮಕ್ಕಳು ತಮ್ಮ ಅಹವಾಲುಗಳನ್ನು ಮುಂದಿಟ್ಟರು. 1994ರಲ್ಲಿ ಅಂದಿನ ಶಾಸಕರಾದ ವಿನಯ ಕುಮಾರ್ ಸೊರಕೆ ಅವರ ಮುತುವರ್ಜಿಯಲ್ಲಿ ಈ ವಿದ್ಯಾರ್ಥಿ ನಿಲಯ ಆರಂಭಗೊಂಡಿದ್ದು ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳ ಸ್ಥಳೀಯ ತಾಲೂಕಿನ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಈ ವಿದ್ಯಾರ್ಥಿ ನಿಲಯಕ್ಕೆ 30 ವರ್ಷ ಆದರೂ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಇಲಾಖಾ ಅಧಿಕಾರಿಗಳು ಶಾಸಕರಿಗೆ ಅಥವಾ ಮೇಲಾಧಿಕಾರಿಗಳಿಗೆ ಯಾಕೆ ತಿಳಿಸಿಲ್ಲ?, ಬಡವರ ಮಕ್ಕಳು ಎಂಬ ತಾತ್ಸಾರವೇ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಬೇಕು ಎಂದು ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕರು, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆಗಿರುವ ಶಿವನಾಥ ರೈ ಮೇಗಿನಗುತ್ತು ತಿಳಿಸಿದ್ದಾರೆ. ಈಗಾಗಲೇ ನಾನು 2 ದಿನ ಹಾಸ್ಟೇಲ್‌ಗೆ ಭೇಟಿ ನೀಡಿ ಶಾಸಕರಿಗೆ ಇದರ ಮಾಹಿತಿಯನ್ನು ನೀಡಿದ್ದೇನೆ. ಇಲ್ಲಿಗೆ ಬೇಕಾದ ಅವಶ್ಯಕತೆಗಳನ್ನು ಅಧಿಕಾರಿಗಳು ಬೇಡಿಕೆ ಸಲ್ಲಿಸಲಿ ಎಂಬ ಮಾಹಿತಿ ನೀಡಿದ್ದಾರೆ. ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶಾಸಕರಲ್ಲಿ ಇಲ್ಲಿಯ ಬೇಡಿಕೆಗಳನ್ನು ಪ್ರಸ್ತಾಪಿಸಿ ಮನವಿ ಸಲ್ಲಿಸುವ ಅವಶ್ಯಕತೆ ಇದೆ. ನಾನು ಹಾಸ್ಟೆಲ್‌ಗೆ ಭೇಟಿ ನೀಡಿದ ಬಳಿಕ ಇದೀಗ ಗೀಸರ್ ವ್ಯವಸ್ಥೆ, ಟಿವಿ, ಇನ್ವರ್ಟರ್ ಬ್ಯಾಟರಿ ವ್ಯವಸ್ಥೆಯನ್ನು ಮಾಡಲಾಗಿದೆ. ಮಳೆಯಿಂದಾಗಿ ಸೋರುತ್ತಿದ್ದ ಛಾವಣಿಗೆ ಟರ್ಪಾಲು ಹೊದಿಸಲಾಗಿದೆ ಎಂದು ಅವರು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಕ್ಷಣವೇ ಸರ್ವೆ ಕಲ್ಪಣೆ ಹಾಗೂ ಇತರ ಕಡೆಗಳಲ್ಲಿರುವ ಎಲ್ಲ ಹಾಸ್ಟೆಲ್‌ಗಳ ದುರಸ್ತಿಯನ್ನು ಶೀಘ್ರದಲ್ಲೇ ಮಾಡಬೇಕು ಹಾಗೂ ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here