ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಸಾಧಕರಿಗೆ ಸನ್ಮಾನ, ಪುಸ್ತಕ ವಿತರಣೆ

0

ವಿಟ್ಲ: ಇದೊಂದು ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಈ ಭಜನಾ ಮಂದಿರದಿಂದ ಆಗಲಿ. ದಾನಗಳಲ್ಲಿ ಶ್ರೇಷ್ಟವಾದುದು ವಿದ್ಯಾದಾನ. ಉತ್ತಮ ವಿದ್ಯೆ ನೀಡಿದಾಗ ಮಕ್ಕಳು ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯ. ಮಕ್ಕಳ ಶಿಕ್ಷಣಕ್ಕಾಗಿ ಸ್ಪಂಧಿಸುತ್ತಿರುವ ದಿವಾಕರ ದಾಸ್ ನೇರ್ಲಾಜೆಯವರ ಗುಣ ಅಭಿನಂದನೀಯ ಎಂದು ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ.ಸುರೇಶ್ ಪುತ್ತೂರಾಯರವರು ಹೇಳಿದರು.

ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂಡಳಿಯ ಆಶ್ರಯದಲ್ಲಿ ಎಸ್.ಎಲ್.ವಿ.ಬುಕ್ಸ್ ಇಂಡಿಯಾ ಪ್ರೈ.ಲಿ.ಮೈಸೂರು ಇದರ ಸಹಯೋಗದಲ್ಲಿ ಮಂದಿರದ ಸಭಾಂಗಣದಲ್ಲಿ ನಡೆದ ಸಾಧಕರಿಗೆ ಸನ್ಮಾನ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.

ಆದರೆ ಸರಕಾರಗಳು ಶಿಕ್ಷಣ ಹಾಗೂ ಆರೋಗ್ಯದ ವಿಚಾರದಲ್ಲಿ ಇನ್ನಷ್ಟು ಸ್ಪಂಧಿಸಬೇಕಾದ ಅನಿವಾರ್ಯತೆ ಇದೆ. ಮಕ್ಕಳು ಎಷ್ಟು ಕಲಿಯುತ್ತಾರೋ ಅಲ್ಲಿಯವರೆಗೆ ಅವರಿಗೆ ಉಚಿತ ಶಿಕ್ಷಣ ನೀಡುವ ಕೆಲಸವಾಗಬೇಕು. ಅದರ ಜೊತೆಗೆ ಉಚಿತ ಆರೋಗ್ಯವನ್ನು ನೀಡುವ ಕೆಲಸವನ್ನು ಮಾಡಬೇಕಿದೆ. ಹಲವಾರು ವಿದ್ಯಾರ್ಥಿಗಳು ಬಡತನದಿಂದಾಗಿ ಅರ್ದದಲ್ಲಿ ಶಿಕ್ಷಣವನ್ನು ನಿಲ್ಲಿಸುವ ಪ್ರಮೇಯಗಳು ಬರುತ್ತಿದೆ. ಅದೇ ರೀತಿ ಆರೋಗ್ಯದ ವಿಚಾರದಲ್ಲಿ ಕೆಲವೊಂದು ಅನಾರೋಗ್ಯಗಳಿಗೆ ತುತ್ತಾಗುವ ಬಡವರ್ಗದ ಮಂದಿ ಉನ್ನತ ಮಟ್ಟದ ಚಿಕಿತ್ಸೆ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಇವೆಲ್ಲವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರಗಳು ಮುಂದಾಗಬೇಕಿದೆ ಎಂದರು.

ಪ್ರಮುಖರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಭಜನಾ ಮಂದಿರ ಹಿಂದೂ ಸಮಾಜದ ಏಳಿಗೆಗೆ ಪ್ರಮುಖ ಪಾತ್ರ ವಹಿಸಬೇಕೆನ್ನುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಉತ್ತಮ ಕಾರ್ಯಮಾಡುವಾಗ ಸಹಕಾರ ಮಾಡುವ ಮನಸ್ಸು ನಮ್ಮದಾಗಬೇಕು. ಮಂದಿರವು ಮುಂದಿನ ದಿನಗಳಲ್ಲಿಯೂ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲಿದೆ‌. ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು.

ಉಜಿರೆ ಬೆಳಾಲು ಎಸ್.ಡಿ.ಎಂ ಹೈಸ್ಕೂಲ್ ನ ಉಪನ್ಯಾಸಕರಾದ ರಾಮಕೃಷ್ಣ ಭಟ್ ರವರು ಉಪನ್ಯಾಸ ನೀಡಿ ಮಕ್ಕಳ ಸಾಧನೆಯನ್ನು ಕಣ್ಣು ತುಂಬಿಕೊಳ್ಳುವ ಸುಂದರ ಸಂಭ್ರಮವಿದು. ಮಾತು ಅತ್ಯಂತ ಮೌಲ್ಯಯುತವಾದುದು. ಮಾತಿನ ಪ್ರೇರಣೆ ಯಶಸ್ಸಿನ ರಹದಾರಿ. ಅಡ್ಡಿ ಆತಂಕವನ್ನು ಮೆಟ್ಟಿ ನಿಲ್ಲುವ ಜಾಣ್ಮೆ ನಿಮ್ಮದಾಗಲಿ. ನಮ್ಮ ಪರಂಪರೆ ನಮ್ಮನ್ನು ಕಾಪಾಡುತ್ತದೆ. ನಾವು ಮಾಡಿದ ಉತ್ತಮ‌ಕಾರ್ಯಗಳು ನಮ್ಮನ್ನು ರಕ್ಷಿಸುತ್ತದೆ ಎಂದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆರವರು ಅತಿಥಿಗಳೊಂದಿಗೆ ಸೇರಿಕೊಂಡು ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು.ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿಯ ಅಧ್ಯಕ್ಷರಾದ ಜಗದೀಶ ಪೂಜಾರಿ ಅಳಕೆಮಜಲುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಿತಿ ಅಧ್ಯಕ್ಷರಾದ ಸುಗಂಧಿನಿ ಪೆಲತ್ತಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ/ ಸಾಧಕರಿಗೆ ಸನ್ಮಾನ:
ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಇಡ್ಕಿದು ಗ್ರಾ.ಪಂ. ಉಪಾಧ್ಯಕ್ಷರಾದ ಪದ್ಮನಾಭ ಕೊಡಂಚರೆಪಾಲು,ದ್ವಿತೀಯ ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ ಏಳನೇ ಸ್ಥಾನ ಪಡೆದ ಅಭಿರಾಮ್ ಕೆ.ಪಿ‌. ರವರ ಪರವಾಗಿ ಅವರ ತಂದೆಯವರಾದ ಪ್ರಕಾಶ್ ಕೆ.ಎಸ್. ಉರಿಮಜಲು, ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಉರಿಮಜಲು ನಿವಾಸಿ ಧನ್ವಿ, ಕುಳ ಗ್ರಾಮದ ಕಾರ್ಯಾಡಿ ನಿವಾಸಿ ವೈಭವಿ ಎಸ್.ಪಿ.ರವರನ್ನು ಸನ್ಮಾನಿಸಲಾಯಿತು.

ಉದಯ ಕುಲಾಲ್ ಪುಂಡಿಕಾಯಿ, ಸನ್ಮಾನ ಪತ್ರ ವಾಚಿಸಿದರು. ದೀಪಿಕಾ, ಪ್ರಕೃತಿ ಪ್ರಾರ್ಥಿಸಿದರು. ಸುಧೀರ್ ನಾಯ್ಕ್ ಕೆಮನಾಜೆ ಸ್ವಾಗತಿಸಿದರು. ಕೃಷ್ಣಕಿಶೋರ್ ಕಾರ್ಯಕ್ರಮ ನಿರೂಪಿಸಿದರು.ಸಂಜೀವ ಗೌಡ ಪೆಲತ್ತಿಂಜ ವಂದಿಸಿದರು.

ಅಶಕ್ತ ವಿದ್ಯಾರ್ಥಿಗಳಿಗೆ ನಿರಂತರ ಸಹಕಾರ
ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿಯಾಗಲೆಂದು ಇಂದು ಭಜನಾ ಮಂದಿರದ ಮುಖಾಂತರ ಸ್ಥಳೀಯ ಮಕ್ಕಳಿಗೆ ಪುಸ್ತಕ ವಿತರಣೆ ಮಾಡುವ ಕೆಲಸವನ್ನು ಮಾಡಲಾಗಿದೆ. ಯಾವೊಬ್ಬ ವಿದ್ಯಾರ್ಥಿಯು ಬಡತನದಿಂದಾಗಿ ಶಿಕ್ಷಣವನ್ನು ಅರ್ದಕ್ಕೆ ನಿಲ್ಲಿಸುವಂತಾಗಬಾರದು. ಅಂತಹ ವಿದ್ಯಾರ್ಥಿಗಳನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಹಲವಾರು ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರವನ್ನು ನೀಡಲಾಗುತ್ತಿದೆ. ಸಮಾಜದಿಂದ ಸಮಾಜಕ್ಕೆ ಎನ್ನುವ ಪರಿಕಲ್ಪನೆಯಲ್ಲಿ ನಾವು ಮಾಡುತ್ತಿರುವ ಉದ್ಯಮದಲ್ಲಿ ಬಂದ ಲಾಭದ ಒಂದಂಶವನ್ನು ಸಮಾಜದ ಏಳಿಗೆಗೆ ನೀಡುವ ಕೆಲಸವನ್ನು ಕಳೆದ ಹಲವಾರು ವರುಷಗಳಿಂದ ಮಾಡುತ್ತಾ ಬರಲಾಗುತ್ತಿದೆ.
ದಿವಾಕರ ದಾಸ್ ನೇರ್ಲಾಜೆ
ಆಡಳಿತ ನಿರ್ದೇಶಕರು
ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈ.ಲಿ.

LEAVE A REPLY

Please enter your comment!
Please enter your name here