ಅನಾಥರಾಗಿದ್ದ ಕೆಯ್ಯೂರು ಅಂಕತ್ತಡ್ಕ ನಿವಾಸಿ ತಿಮ್ಮಪ್ಪ ನಾಯ್ಕ ಆಶ್ರಮದಲ್ಲಿ ನಿಧನ – ಮನೆಯಲ್ಲೇ ಆಸರೆ ನೀಡಿ ಉಪಚರಿಸಿದ್ದ ಮುಸ್ಲಿಂ ಕುಟುಂಬ

0

*ಮೃತದೇಹ ಕೊಂಡೊಯ್ಯುವ ವಿಚಾರದಲ್ಲೂ ಕೈಜೋಡಿಸಿ ಮಾನವೀಯತೆ ಮೆರೆದ ಹಸೀನಾ ಬೇಗಂ

ಯೂಸುಫ್ ರೆಂಜಲಾಡಿ

ಪುತ್ತೂರು: ಅನಾರೋಗ್ಯ ಬಾಧಿಸಿ ನೋಡಿಕೊಳ್ಳಲು ಯಾರೂ ಇಲ್ಲದ ವ್ಯಕ್ತಿಯೊಬ್ಬರನ್ನು ಮುಸ್ಲಿಂ ಕುಟುಂಬವೊಂದು ಉಪಚರಿಸಿ ಆಸ್ಪತ್ರೆ ಹಾಗೂ ಆಶ್ರಮಕ್ಕೆ ದಾಖಲಿಸಿದ ಹಾಗೂ ಅವರ ನಿಧನದ ಬಳಿಕ ಅಂತ್ಯ ಸಂಸ್ಕಾರ ಕಾರ್ಯಕ್ಕೂ ನೆರವಾದ ಘಟನೆ ಜೂ.23ರಂದು ನಡೆದಿದೆ.

ಕೆಯ್ಯೂರು ಗ್ರಾ.ಪಂ ವ್ಯಾಪ್ತಿಯ ಅಂಕತ್ತಡ್ಕ ಕಜೆ ನಿವಾಸಿ ತಿಮ್ಮಪ್ಪ ನಾಯ್ಕ ಎಂಬವರು ಸ್ಥಳೀಯ ಸರಕಾರಿ ಜಾಗದಲ್ಲಿ ಸಣ್ಣ ಜೋಪಡಿಯೊಂದರಲ್ಲಿ ವಾಸವಾಗಿದ್ದು ಅವರ ಪತ್ನಿ ಅನೇಕ ವರ್ಷಗಳ ಹಿಂದೆಯೇ ಅವರಿಂದ ದೂರವಾಗಿದ್ದರು. ತಿಮ್ಮಪ್ಪ ನಾಯ್ಕ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರೂ ತಂದೆಯಿಂದ ದೂರವಾಗಿದ್ದರು. ಹೀಗಾಗಿ ತಿಮ್ಮಪ್ಪ ನಾಯ್ಕ ಒಬ್ಬರೇ ಜೋಪಡಿಯಲ್ಲಿ ವಾಸವಾಗಿದ್ದರು. ತಿಮ್ಮಪ್ಪ ನಾಯ್ಕ(56 ವ.) ಅವರು ಕೆಲವು ತಿಂಗಳ ಹಿಂದೆ ಅಂಕತ್ತಡ್ಕದ ಸಯ್ಯದ್ ಇಬ್ರಾಹಿಂ ಮನೆಗೆ ಬಂದಿದ್ದು, ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಅಲ್ಲೇ ಉಳಿದುಕೊಳ್ಳಲು ಮಾನವೀಯತೆ ನೆಲೆಯಲ್ಲಿ ಮನೆಯವರು ವ್ಯವಸ್ಥೆ ಮಾಡಿಕೊಟ್ಟಿದ್ದರು. ತಿಮ್ಮಪ್ಪ ನಾಯ್ಕರು ಮನೆಯ ಸಿಟೌಟ್‌ನಲ್ಲಿ ರಾತ್ರಿ ಮಲಗುತ್ತಿದ್ದರು. ಒಂದು ತಿಂಗಳು ಮನೆಯಲ್ಲಿದ್ದ ತಿಮ್ಮಪ್ಪ ನಾಯ್ಕ ಅವರಿಗೆ ಅನಾರೋಗ್ಯ ಹೆಚ್ಚಾದಾಗ ಸಯ್ಯದ್ ಇಬ್ರಾಹಿಂ ಅವರ ಸಹೋದರಿ ಅಂಕತ್ತಡ್ಕ ಅಂಗನವಾಡಿ ಕೇಂದ್ರದ ಸಹಾಯಕಿಯಾಗಿರುವ ಹಸೀನಾ ಬೇಗಂ ಅವರು ಗೆಳತಿ ಆಯಿಶಾರನ್ನು ಸೇರಿಸಿಕೊಂಡು ತಿಮ್ಮಪ್ಪ ನಾಯ್ಕ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಎ.25ರಂದು ದಾಖಲು ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ತಿಮ್ಮಪ್ಪ ನಾಯ್ಕರ ದಾಖಲೆ ಮತ್ತಿತರ ತಾಂತ್ರಿಕ ಕಾರಣದಿಂದ ಅಲ್ಲಿ ದಾಖಲು ಮಾಡಿಕೊಂಡಿರಲಿಲ್ಲ, ಹಾಗಾಗಿ ಅವರನ್ನು ವಾಪಸ್ ಮನೆಗೆ ಕರೆದುಕೊಂಡು ಬರಲಾಗಿತ್ತು ಎಂದು ಹಸೀನಾ ಬೇಗಂ ತಿಳಿಸಿದ್ದಾರೆ.

ಆ ಬಳಿಕ ಕೆಲವು ದಿನದ ಬಳಿಕ ಹಸೀನಾ ಬೇಗಂ ಅವರು ಸಾಮಾಜಿಕ ಮುಂದಾಳು ಅಲ್ತಾಫ್ ಎಂಬವರ ಸಹಕಾರವನ್ನು ಪಡೆದುಕೊಂಡು ವೆನ್ಲಾಕ್‌ಗೆ ದಾಖಲು ಮಾಡಿದ್ದರು. ಒಂದು ತಿಂಗಳ ಬಳಿಕ ಹಸೀನಾ ಬೇಗಂ ಅವರ ಮುಂದಾಳತ್ವದಲ್ಲಿ ಮಂಗಳೂರು ಕೆಎಂಸಿ ಹಾಗೂ ಆ ಬಳಿಕ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ವಾರಗಳ ಬಳಿಕ ಅಲ್ಲಿಂದ ಅಂದರೆ ಜೂ.2ರಂದು ವಾಮಂಜೂರಿನಲ್ಲಿರುವ ‘ಅವೆ ಮರಿಯ’ ಆಶ್ರಮಕ್ಕೆ ದಾಖಲು ಮಾಡಲಾಯಿತು. ಈ ಎಲ್ಲಾ ಸಂದರ್ಭಗಳಲ್ಲೂ ಇತರರ ಸಹಾಯ ಪಡೆದುಕೊಂಡು ಹಸೀನಾ ಬೇಗಂ ಅವರು ಮುಂಚೂಣಿಯಲ್ಲಿದ್ದುಕೊಂಡು ಕಾರ್ಯ ನಿರ್ವಹಿಸಿದ್ದರು.

ಜೂ.23ರಂದು ಆಶ್ರಮದಿಂದ ಕರೆ ಬಂತು: ಜೂ.23ರಂದು ಬೆಳಿಗ್ಗೆ ವಾಮಂಜೂರು ಆಶ್ರಮದಿಂದ ಹಸೀನಾ ಬೇಗಂಗೆ ಕರೆ ಬಂದಿದ್ದು ತಿಮ್ಮಪ್ಪ ನಾಯ್ಕರವರು ನಿಧನ ಹೊಂದಿರುವುದಾಗಿ ಆಶ್ರಮದವರು ತಿಳಿಸಿದ್ದಾರೆ. ಈ ವೇಳೆ ಹಸೀನಾ ಬೇಗಂ ಅವರು ಸ್ಥಳೀಯವಾಗಿ ಕೆಲವರಿಗೆ ವಿಚಾರ ತಿಳಿಸಿದ್ದರಾದರೂ ಯಾರು ಕೂಡಾ ಸದ್ರಿ ವಿಚಾರದಲ್ಲಿ ನೆರವಿಗೆ ಬಂದಿರಲಿಲ್ಲ. ಬಳಿಕ ವಿಷಯವನ್ನು ಸಂಪ್ಯ ಪೊಲೀಸ್ ಠಾಣೆಗೆ ತಿಳಿಸಿದ ಅವರು ಆ ಬಳಿಕ ಗೆಳತಿ ಆಯಿಶಾ ಅವರನ್ನು ಕರೆದುಕೊಂಡು ವಾಮಂಜೂರು ಆಶ್ರಮಕ್ಕೆ ತೆರಳಿದ್ದಾರೆ.

ಈತನ್ಮಧ್ಯೆ ವಿಚಾರ ತಿಳಿದ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅವರು ಶಶಿಧರ ಪಾಟಾಳಿ ಅವರನ್ನು ಕರೆದುಕೊಂಡು ವಾಮಂಜೂರಿಗೆ ತೆರಳಿದ್ದರು. ಅಲ್ಲಿ ಹಸೀನಾ ಬೇಗಂ, ಶರತ್ ಕುಮಾರ್ ಮೊದಲಾದವರು ಸೇರಿಕೊಂಡು ಅಲ್ಲಿನ ಕಾರ್ಯಗಳನ್ನು ಮುಗಿಸಿಕೊಂಡು ಮೃತದೇಹವನ್ನು ಪುತ್ತೂರು ರುದ್ರಭೂಮಿಗೆ ತರಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ.

ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ: ಮೃತ ತಿಮ್ಮಪ್ಪ ನಾಯ್ಕರ ಅಂತ್ಯ ಸಂಸ್ಕಾರ ಪುತ್ತೂರು ರುದ್ರ ಭೂಮಿಯಲ್ಲಿ ನೆರವೇರಿಸಲಾಯಿತು. ತಿಮ್ಮಪ್ಪ ನಾಯ್ಕ ಅವರ ಪುತ್ರ ದಿನೇಶ್ ಅವರನ್ನು ಸ್ಥಳಕ್ಕೆ ಬರುವ ವ್ಯವಸ್ಥೆಯನ್ನು ಶರತ್ ಕುಮಾರ್ ಮಾಡಾವು ಮಾಡಿದ್ದರು. ಈ ವೇಳೆ ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ದಲಿತ ಸಂಘಟನೆಗಳ ಮುಖಂಡ ರಾಜು ಹೊಸ್ಮಠ, ಶಶಿಧರ ಪಾಟಾಳಿ ಉಪಸ್ಥಿತರಿದ್ದರು.

ಖರ್ಚು-ವೆಚ್ಚ ಭರಿಸಿದವರು: ಅಂತ್ಯ ಸಂಸ್ಕಾರ ಖರ್ಚು ವೆಚ್ಚಗಳನ್ನು ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್,ಬಿಜೆಪಿ ಕೆಯ್ಯೂರು ಶಕ್ತಿ ಕೇಂದ್ರದ ಅಧ್ಯಕ ಪ್ರಕಾಶ್ ಆಳ್ವ ಇಳಂತಾಜೆ ಅವರು ಭರಿಸುವ ಮೂಲಕ ಮಾನವೀಯತೆ ಮೆರೆದರು.

ಗ್ರಾ.ಪಂ. ಅಧ್ಯಕ್ಷರ ಸಾಥ್
ತಿಮ್ಮಪ್ಪ ನಾಯ್ಕ ಮೃತಪಟ್ಟ ವಿಷಯ ತಿಳಿದ ಬಳಿಕ ಹಸೀನಾ ಬೇಗಂ ಅಂಕತ್ತಡ್ಕ ಹಾಗೂ ಅವರ ಗೆಳತಿ ಆಯಿಶಾ ಅವರು ವಾಮಂಜೂರಿಗೆ ತೆರಳಿದ್ದರು. ಆ ಬಳಿಕ ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅವರಿಗೆ ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿದ್ದ ತಿಮ್ಮಪ್ಪ ನಾಯ್ಕರ ನಿಧನದ ವಿಚಾರವು ಪೊಲೀಸರ ಮೂಲಕ ತಿಳಿಯಿತು. ಕೂಡಲೇ ಶರತ್ ಕುಮಾರ್ ಅವರು ಶಶಿಧರ್ ಪಾಟಾಳಿ ಅವರನ್ನು ಕರೆದುಕೊಂಡು ಕಾರಲ್ಲಿ ವಾಮಂಜೂರಿಗೆ ಹೋಗಿದ್ದು ಅಲ್ಲಿನ ಕಾರ್ಯಗಳಿಗೆ ಸಹಕಾರ ನೀಡಿದ್ದರು. ಹಸೀನಾ ಬೇಗಂ ಅವರೂ ಅಲ್ಲಿದ್ದುಕೊಂಡು ಸಹಕಾರ ನೀಡಿದರು. ಗ್ರಾ.ಪಂ ಅಧ್ಯಕ್ಷನ ನೆಲೆಯಲ್ಲಿ ಮೃತದೇಹ ತರುವ ಹಾಗೂ ಅಂತ್ಯ ಸಂಸ್ಕಾರ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡಿದ ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅವರ ಮಾನವೀಯತೆ ಮೆಚ್ಚುಗೆಗೆ ಪಾತ್ರವಾಯಿತು. ಒಟ್ಟಾರೆಯಾಗಿ ಮಾನವೀಯ ಕಳಕಳಿಯಿಂದ ತಿಮ್ಮಪ್ಪ ನಾಯ್ಕರ ಅಂತ್ಯ ಕ್ರಿಯೆ ಸುಸೂತ್ರವಾಗಿ ನೆರವೇರಿತು.

ಸೌಹಾರ್ದತೆಯ ಸಂದೇಶ-ಅಶೋಕ್ ರೈ
ಜಾತಿ ಧರ್ಮದ ಹೆಸರಲ್ಲಿ ಪರಸ್ಪರ ಕಚ್ಚಾಟ ನಡೆಸುವವರು ಹಸೀನಾ ಬೇಗಂ ಎನ್ನುವ ಈ ಮಹಿಳೆಯನ್ನು ನೋಡಿ ಕಲಿಯಲು ಸಾಕಷ್ಟಿದೆ. ಇವರು ಮಾಡಿರುವ ಕಾರ್ಯ ಇಡೀ ರಾಜ್ಯಕ್ಕೆ ಮಾದರಿ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅನಾರೋಗ್ಯ ಬಾಽತ ಒಬ್ಬ ಹಿಂದೂ ವ್ಯಕ್ತಿಯನ್ನು ಅವರ ಮನೆಯವರು ಆರೈಕೆ ಮಾಡಿ, ಊಟೋಪಚಾರ ನೀಡಿದ್ದಲ್ಲದೇ ಆಸ್ಪತ್ರೆಗೆ ದಾಖಲಿಸಿರುವುದು ಮತ್ತು ಬಳಿಕ ಆಶ್ರಮದಲ್ಲಿ ಮೃತಪಟ್ಟಾಗ ಅಲ್ಲಿಗೆ ಹೋಗಿ ಮೃತದೇಹವನ್ನು ತರಲು ನೆರವಾಗುವುದು, ಅಂತ್ಯ ಸಂಸ್ಕಾರದವರೆಗೂ ಸಹಕಾರ ನೀಡುವುದೆಂದರೆ ಅದು ಸಣ್ಣ ವಿಷಯವಲ್ಲ. ಇದು ಸೌಹಾರ್ದತೆಯ ಪ್ರತೀಕವಾಗಿದೆ. ಹೀಗೇ ಎಲ್ಲರ ಮನಸ್ಥಿತಿಯೂ ಇದ್ದರೆ ನಾಗರಿಕ ಸಮಾಜ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಮಾನವೀಯತೆ ಶಾಶ್ವತ
ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿದ್ದ ತಿಮ್ಮಪ್ಪ ನಾಯ್ಕ ಎಂಬವರು ವಾಮಂಜೂರು ಆಶ್ರಮದಲ್ಲಿ ಮೃತಪಟ್ಟ ವಿಚಾರ ಪೊಲೀಸರು ನನ್ನ ಗಮನಕ್ಕೆ ತಂದಿದ್ದು ಬಳಿಕ ನಾನು ಅಲ್ಲಿಗೆ ಹೋಗಿದ್ದು ಮುಂದಿನ ಕಾರ್ಯಗಳನ್ನು ಮಾಡಲು ಮತ್ತು ಮೃತದೇಹವನ್ನು ಪುತ್ತೂರಿಗೆ ತರಲು ಮತ್ತು ಅಂತ್ಯ ಸಂಸ್ಕಾರ ನೆರವೇರಿಸಲು ಸಂಪೂರ್ಣ ಸಹಕಾರ ನೀಡಿದ್ದೇನೆ. ಅಂಕತ್ತಡ್ಕದ ಹಸೀನಾ ಬೇಗಂ ಹಾಗೂ ಇತರರು ಈ ವಿಚಾರದಲ್ಲಿ ಬಹಳ ಮುತುವರ್ಜಿ ವಹಿಸಿದ್ದು ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಕೆಲವು ಸಹೃದಯಿಗಳು ಅಂತ್ಯ ಸಂಸ್ಕಾರದ ವೆಚ್ಚ ಭರಿಸಲು ನನ್ನೊಂದಿಗೆ ಸಹಕಾರ ನೀಡಿದ್ದಾರೆ. ಹುಟ್ಟು ಮತ್ತು ಸಾವು ಎಲ್ಲರಿಗೂ ಇದೆ. ಅದರೆಡೆಯಲ್ಲಿ ನಾವು ಮಾಡುವ ಮಾನವೀಯ ಕಾರ್ಯ ಮಾತ್ರ ನಮಗೆ ಶಾಶ್ವತ.
-ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾ.ಪಂ

ಜಾತಿ ಧರ್ಮ ಮುಖ್ಯವಲ್ಲ, ಮನುಷ್ಯತ್ವ ಮುಖ್ಯ
ಮಾನವೀಯ ದೃಷ್ಟಿಯಿಂದ ತಿಮ್ಮಪ್ಪ ನಾಯ್ಕರಿಗೆ ಈ ಹಿಂದೆ ನಮ್ಮಿಂದಾಗುವ ಸಹಾಯ ಸಹಕಾರ ನೀಡಿದ್ದೆವು. ಊಟೋಪಚಾರ ನೀಡಿದ್ದೆವು. ಆಸ್ಪತ್ರೆಗೆ ಮತ್ತು ಆ ಬಳಿಕ ಆಶ್ರಮಕ್ಕೆ ನಾವೇ ದಾಖಲು ಮಾಡಿದ್ದೆವು. ಅವರು ಮೃತಪಟ್ಟ ವಿಷಯ ನನಗೆ ಕರೆ ಬಂದಾಗ ತಕ್ಷಣ ವಾಮಂಜೂರು ಆಶ್ರಮಕ್ಕೆ ತೆರಳಿ ನಮ್ಮಿಂದಾಗುವ ಸಹಕಾರ ನೀಡಿದ್ದು ಮೃತದೇಹ ಪುತ್ತೂರಿಗೆ ತರಲು ನೆರವು ನೀಡಿದ್ದೇನೆ. ನನ್ನ ಜೊತೆ ಗೆಳತಿ ಆಯಿಶಾ ಎಂಬವವರು ಪೂರ್ಣ ಸಹಕಾರ ನೀಡಿದ್ದಾರೆ. ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಅವರೂ ವಾಮಂಜೂರಿಗೆ ಬಂದಿದ್ದು ಬಳಿಕದ ಕಾರ್ಯಗಳಲ್ಲಿ ತುಂಬಾ ಸಹಕಾರ ನೀಡಿದ್ದಾರೆ. ಜಾತಿ, ಧರ್ಮ ಯಾವುದಾದರೇನು ಮನುಷ್ಯರೆಲ್ಲರೂ ಒಂದೇ, ಮನುಷ್ಯತ್ವ ಮುಖ್ಯ ಎನ್ನುವ ನಮ್ಮ ಧರ್ಮದ ಸಂದೇಶವನ್ನು ಪಾಲಿಸಿದ್ದೇನೆ.
-ಹಸೀನಾ ಬೇಗಂ, ಅಂಕತ್ತಡ್ಕ

LEAVE A REPLY

Please enter your comment!
Please enter your name here