ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

0

ನಮ್ಮ ಯೋಗವನ್ನು ಪಾಶ್ಚಿಮಾತ್ಯರಿಂದ ಕಲಿಯುವಂತಾಗದಿರಲಿ : ಶರಾವತಿ ರವಿನಾರಾಯಣ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ಜೂ.21ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಯೋಗ ಶಿಕ್ಷಕಿ ಶರಾವತಿ ರವಿನಾರಾಯಣ ಮಾತನಾಡಿ, ಸೌದಿ ಅರೇಬಿಯ ಸರಕಾರ ಯೋಗವನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ. ಆದರೆ ನಮ್ಮದೇ ನೆಲದ ಅತ್ಯಂತ ಪಾವಿತ್ರ್ಯವುಳ್ಳ ಈ ವಿದ್ಯೆಯನ್ನು ಕಲಿಯಲು ನಾವು ದೊಡ್ಡ ಮಟ್ಟಿನ ಒಲವು ತೋರಿಸುತ್ತಿಲ್ಲ ಎಂಬುದೇ ಬೇಸರದ ವಿಚಾರ. ಇದು ಹೀಗೆಯೇ ಮುಂದುವರೆದರೆ ಯೋಗವನ್ನು ಮುಂದೊಂದು ದಿನ ಪಾಶ್ಚತ್ಯರಿಂದ ನಾವು ದುಡ್ಡುಕೊಟ್ಟು ಕಲಿಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು. ಯೋಗದಲ್ಲಿ ಹಲವಾರು ಹಂತಗಳಿವೆ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗಗಳನ್ನು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿದ್ದರು. ಹಾಗಾಗಿ ದಿನನಿತ್ಯದ ನಮ್ಮ ಕೆಲಸ ಕಾರ್ಯಗಳನ್ನು ಶ್ರದ್ದೆ ಹಾಗೂ ನಿಷ್ಠೆಯಿಂದ ಮಾಡಿದರೆ ಅದೂ ಕೂಡ ಒಂದು ಬಗೆಯ ಯೋಗವೆನಿಸುತ್ತದೆ. ಯೋಗ ಪಿತಾಮಹ ಮಹರ್ಷಿ ಪತಂಜಲಿಯು ಜಗತ್ತಿಗೆ ನೀಡಿರುವ ಅತ್ಯಮೂಲ್ಯವಾದ ಕೊಡುಗೆಯಾದ ಯೋಗವನ್ನು ಪಾಶ್ಚತ್ಯರು ಇಂದು ಬಹಳ ಆಸಕ್ತಿಯಿಂದ ಅಭ್ಯಸಿಸುತ್ತಿದ್ದಾರೆ. ಯೋಗವೆಂದರೆ ದೇಹ, ಮನಸ್ಸು ಮತ್ತು ಉಸಿರಾಟವನ್ನು ಒಂದೇ ಕಡೆ ಸೇರಿಸುವುದು. ಮನಸ್ಸು ಮತ್ತು ಶರೀರದ ಜೋಡಣೆಯಿಂದ ನಮ್ಮ ಶಕ್ತಿಯನ್ನು ದೈವಿ ಶಕ್ತಿಯನ್ನಾಗಿ ಮಾರ್ಪಡಿಸಲು ಸಾಧ್ಯ. ಇದರಿಂದ ನಾವು ಅತ್ಯುನ್ನತ ಸಾಧನೆಗಳನ್ನು ಮಾಡಬಹುದು ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರ ಪ್ರಭು ಮಾತನಾಡಿ ಯೋಗದಿಂದ ಏಕಾಗ್ರತೆ ಹೆಚ್ಚಿ, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಉತ್ತಮಗೊಳ್ಳುತ್ತದೆ ಹಾಗೂ ನಾವು ಒತ್ತಡ ರಹಿತ ಜೀವನ ನಡೆಸಲು ಯೋಗವು ರಾಮಬಾಣ ಎಂದರು. ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿಯ ವಿದ್ಯಾರ್ಥಿನಿಯರಾದ ಪ್ರಣತಿ ಎ, ಕಾವ್ಯಲಕ್ಷ್ಮಿ, ವೈಷ್ಣವಿ, ವರ್ಷಿಣಿ, ನಂದನ ಪ್ರಾರ್ಥಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಯೋಗ ಗಾಯನ ಹಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವೈನವಿ ಸ್ವಾಗತಿಸಿ, ರಿಶಾಲಿ ವಂದನಾರ್ಪಣೆಗೈದರು. ಹಿಮ ನಾಗ್ವಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here