ಅಂಬಿಕಾದಲ್ಲಿ ನೀಟ್ ರಿಪೀಟರ್ಸ್ ಬ್ಯಾಚ್ ತರಗತಿಗಳಿಗೆ ಚಾಲನೆ

0

ದೃಢ ವಿಶ್ವಾಸದಿಂದ ಮುನ್ನುಗ್ಗಿದಾಗ ಯಶಸ್ಸು ಖಚಿತ : ರಾಜಶ್ರೀ ಎಸ್ ನಟ್ಟೋಜ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ನೀಟ್ ಅಕಾಡೆಮಿ ವತಿಯಿಂದ ಆಯೋಜಿಸಲಾದ ನೀಟ್ ಮರುಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ದೀರ್ಘಾವಧಿ ತರಗತಿಗಳನ್ನು ಜೂ.24ರಂದು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಉದ್ಘಾಟಿಸಲಾಯಿತು.

ಬಳಿಕ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ ಅವರು, ದೃಢ ನಿಶ್ಚಯ ಮಾಡಿ ಛಲದಿಂದ ಮುನ್ನುಗ್ಗಿದಾಗ ಯಶಸ್ಸು ಖಂಡಿತ. ಆ ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರಯತ್ನಪಡಬೇಕು. ಪರಿಶ್ರಮವಿಲ್ಲದೆ ಫಲ ದೊರಕುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ನಮ್ಮ ಗುರಿಯೆಡೆಗೆ ನಿರಂತರವಾದ ನಡಿಗೆಯನ್ನು ನಾವು ನಡೆಸುತ್ತಿರಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹಾಗೂ ಜೀವಶಾಸ್ತ್ರ ಉಪನ್ಯಾಸಕಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಬಿಕಾದ ಪ್ರವೇಶ ಪರೀಕ್ಷೆಗಳ ಸಂಯೋಜಕ ಕೆ ಕಿಶೋರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು. ನೀಟ್ ರಿಪೀಟರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕಳೆದ ವರ್ಷದಿಂದ ’ನೀಟ್ ರಿಪೀಟರ್ಸ್ ಲಾಂಗ್ ಟರ್ಮ್ ಕೋಚಿಂಗ್’ ನೀಡುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದು ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ಕಳೆದ ವರ್ಷ ಈ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಪ್ರತಿಶತ ಒಂದೂವರೆ ವ್ಯಕ್ತಿಗೆ ಒಬ್ಬರಂತೆ ನೀಟ್ ಪರೀಕ್ಷೆ ತೇರ್ಗಡೆ ಹೊಂದಿರುವುದು ತರಗತಿಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯೆನಿಸಿದೆ.

LEAVE A REPLY

Please enter your comment!
Please enter your name here