ತಾಲೂಕು ಮಟ್ಟದ ವನಮಹೋತ್ಸವ ಕಾರ್ಯಕ್ರಮ

0

ಗಿಡ ನೆಟ್ಟು ಬೆಳೆಸಿದಾಗ ಪರಿಸರ ಪ್ರೀತಿ ಬೆಳೆಯುತ್ತದೆ- ಶಾಸಕ ಅಶೋಕ್‌ ರೈ

ಪುತ್ತೂರು: ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಹಣ್ಣು ಬಿಡುವಂತಹ ಒಂದೊಂದು ಗಿಡ ನೆಡಬೇಕು. ನೀವು ದೊಡ್ಡವರಾದಾಗ ಅದು ನಾನು ನೆಟ್ಟ ಗಿಡ ಎಂದು ಸಂತೋಷಪಟ್ಟುಕೊಳ್ಳಿ. ಗಿಡದ ಬಗ್ಗೆ ಓದುವ ಕೆಲಸ ಮಾಡಿ. ನಾವು ಮಾತ್ರ ಹಣ್ಣು ತಿನ್ನುವುದಲ್ಲ, ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಅದರಲ್ಲಿ ಹಕ್ಕಿದೆ ಎಂದು ಅರಿತುಕೊಳ್ಳಿ. ಮರದಿಂದ ಬಿದ್ದ ಹಣ್ಣು ನಮಗೆ, ಮರದಲ್ಲಿದ್ದ ಹಣ್ಣು ಪಕ್ಷಿಗಳಿಗೆ ಎಂದು ಅರಿತುಕೊಂಡಾಗ ನಮ್ಮಲ್ಲಿ ಪ್ರಕೃತಿ ಪ್ರೇಮ, ಪರಿಸರ ಪ್ರೇಮ ಬೆಳೆಯುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪಾಠ ಮಾಡಿದರು.


ಅರಣ್ಯ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಲೂಕಿನ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಹಾರಾಡಿ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಜೂ.24ರಂದು ನಡೆದ ತಾಲೂಕು ಮಟ್ಟದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವನಮಹೋತ್ಸವದಂದು ಕೇವಲ ಗಿಡ ನೆಟ್ಟರೆ ಉಪಯೋಗವಿಲ್ಲ, ಗಿಡ ನೆಟ್ಟು ಬೆಳೆಸುವ ಕೆಲಸ ಆಗಬೇಕು. ಆಗ ನಮಗೆ ಪರಿಸರದ ಮೇಲೆ ಪ್ರೀತಿ ಬೆಳೆಯುತ್ತದೆ. ಮರ ಕಡಿಯುವುದನ್ನು ಕಡಿಮೆ ಮಾಡಬೇಕು. ಬೆಳೆಸುವ ಕೆಲಸ ಆಗಬೇಕು ಎಂದ ಅವರು ಪರಿಸರ ನಮಗೆ ತುಂಬಾ ಕೊಟ್ಟಿದೆ. ಕಾಲಕಾಲಕ್ಕೆ ಪ್ರಕೃತಿದತ್ತವಾಗಿ ಸಿಗುವ ಹಣ್ಣುಗಳನ್ನು ತಿನ್ನಿ ಆರೋಗ್ಯವಂತರಾಗಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಶಾಸಕರು ಗಿಡ ಬೆಳೆಸುವುದು, ಅದರ ಪೋಷಣೆ ಹಾಗೂ ಉಪಯೋಗದ ಕುರಿತು ಪಾಠ ಮಾಡಿದರು.


1.50 ಲಕ್ಷ ಗಿಡ ನಾಟಿ:
ಸಹಾಯಕ ಅರಣ್ಯ ಸಂರಕ್ಷಣಾಽಕಾರಿ ಸುಬ್ಬಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಅರಣ್ಯ ಇಲಾಖೆಯಿಂದ ವನಮಹೋತ್ಸವ ಆಚರಣೆ ನಡೆಯುತ್ತದೆ. ಇದು ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಇಲಾಖೆಯ ವತಿಯಿಂದ ಸುಮಾರು 1.50 ಲಕ್ಷ ಗಿಡಗಳನ್ನು ಅರಣ್ಯ ಮತ್ತು ಸರಕಾರಿ ಸ್ಥಳದಲ್ಲಿ ನೆಡುತ್ತಿದ್ದೇವೆ. ಇದಕ್ಕಾಗಿ ನಮಗೆ ಶಾಸಕರು ತುಂಬಾ ಸಹಕಾರ ನೀಡಿದ್ದಾರೆ. ನಮಗೆ ಗೊತ್ತಿರದ ಸೂಕ್ಷ್ಮ ವಿಚಾರವನ್ನು ಅವರು ನಮಗೆ ತಿಳಿಸಿದ್ದಾರೆ. ಅವರ ನಿರ್ದೇಶನದಂತೆ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಬದಿಯಲ್ಲಿ 50 ಕಾಟು ಮಾವಿನ ಹಣ್ಣುಗಳ ಗಿಡಗಳನ್ನು ಈಗಾಗಲೇ ನೆಡಲಾಗಿದೆ. ಬೇಸಿಗೆಯಲ್ಲಿ ಅದಕ್ಕೆ ನೀರು ಹಾಕಲು ಸಹ ಅವರ ಮತ್ತು ಜನರ ಸಹಕಾರ ಸಿಕ್ಕಿದೆ. ಹಾಗಾಗಿ ಎಲ್ಲಾ ಗಿಡಗಳು ಬದುಕಿವೆ ಎಂದು ಹೇಳಿದರು.


ವಿದ್ಯಾರ್ಥಿಗಳಿಗೆ ಗಿಡ ವಿತರಣೆ:
ವನಮಹೋತ್ಸವದ ಅಂಗವಾಗಿ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಮಾಡಲಾಯಿತು. ಶಾಲೆಯ 850 ವಿದ್ಯಾರ್ಥಿಗಳ ಪೈಕಿ ಕೃಷಿಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಗಿಡ ವಿತರಣೆ ನಡೆಯಿತು.


ಡೆಸ್ಕ್, ಬೆಂಚು ಹಸ್ತಾಂತರ:
ಉಪವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಂದ ಹಾರಾಡಿ ಶಾಲೆಗೆ 5 ಡೆಸ್ಕ್ ಮತ್ತು 5 ಬೆಂಚ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಶಾಸಕರು ಡೆಸ್ಕ್ ಮತ್ತು ಬೆಂಚನ್ನು ಶಾಲೆಗೆ ಹಸ್ತಾಂತರಿಸಿರು. ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಎಸ್‌ಡಿಎಂಸಿ ಅಧ್ಯಕ್ಷೆ ಸುಲೋಚನಿ ಬನ್ನೂರು, ಪ್ರೊಬೆಷನರಿ ಅರಣ್ಯಾಧಿಕಾರಿ ಲತಾ ಜಿ ಭಟ್, ಎಸ್‌ಡಿಎಂಸಿ ಉಪಾಧ್ಯಕ್ಷ ಇಸ್ಮಾಯಿಲ್ ಬೊಳುವಾರು ಮತ್ತು ಸದಸ್ಯರು, ರೈ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಗುರು ಕೆ ಕೆ ಮಾಸ್ತರ್ ಸ್ವಾಗತಿಸಿ, ಉಪವಲಯ ಅರಣ್ಯ ಅಧಿಕಾರಿ ಕಿರಣ್ ಬಿ.ಎಮ್ ವಂದಿಸಿದರು. ಧನ್ಯಕುಮಾರಿ ನಿರೂಪಿಸಿದರು.

ಪುತ್ತೂರು-ಉಪ್ಪಿನಂಗಡಿ ಮಾದರಿ ರಸ್ತೆ
ಪುತ್ತೂರು-ಉಪ್ಪಿನಂಗಡಿ ರಸ್ತೆ ಬದಿಯಲ್ಲಿ ಹಣ್ಣು ನೀಡುವ ಮತ್ತು ಹೂವು ಬಿಡುವ ಗಿಡಗಳನ್ನು ನೆಡುವ ಯೋಜನೆ ಹಾಕಿದ್ದೇನೆ. ಕಾಗದದ ಹೂವಿನ ಗಿಡವನ್ನು ಆಂಧ್ರಪ್ರದೇಶದಿಂದ ತರಿಸಲಿದ್ದೇವೆ. ಮಾವು ಸಹಿತ ಇತರ ಹಣ್ಣಿನ ಗಿಡಗಳನ್ನು ಅರಣ್ಯ ಇಲಾಖೆಯಿಂದ ನೆಡಲು ಸೂಚನೆ ನೀಡಿದ್ದೇನೆ. ಕೇವಲ ಗಿಡ ನೆಡದೆ ಅದರ ಆರೈಕೆಯನ್ನು ಮಾಡಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ಕೂಡಾ ಬೇಕಾಗಿದೆ. ಒಟ್ಟಿನಲ್ಲಿ ಪುತ್ತೂರು-ಉಪ್ಪಿನಂಗಡಿ ರಸ್ತೆ ಮಾದರಿ ರಸ್ತೆಯಾಗಲಿದೆ.
-ಅಶೋಕ್ ಕುಮಾರ್ ರೈ, ಶಾಸಕರು

ಹಾರಾಡಿ ಶಾಲೆಗೆ ಹೆಚ್ಚಿನ ಅನುದಾನ
ಶಾಲೆಯಲ್ಲಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಇರಬಾರದು. ಶಾಲೆಯಲ್ಲಿ ರಾಜಕೀಯವಿದ್ದರೆ ಶಾಲೆ ಕೆಡುತ್ತದೆ. ಇಲ್ಲಿನ ಎಸ್‌ಡಿಎಂಸಿಯವರ ಮನವಿಯಂತೆ ಈ ಶಾಲೆಗೆ ರೂ.1 ಕೋಟಿ ಅನುದಾನ ನೀಡಲಾಗಿದೆ. ಅತ್ಯಂತ ಹೆಚ್ಚಿನ ಅನುದಾನ ಹಾರಾಡಿ ಶಾಲೆಗೆ ನೀಡಿದ್ದೇನೆ
ಅಶೋಕ್ ಕುಮಾರ್ ರೈ

LEAVE A REPLY

Please enter your comment!
Please enter your name here