ಬೂಡಿಯಾರ್ ಪುರುಷೋತ್ತಮ ರೈಯವರಿಂದ ಇಡ್ಯೊಟ್ಟು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

0

ಸರಕಾರಿ ಶಾಲೆಯಲ್ಲಿ 1ನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆಯೂ ಪ್ರಾರಂಭವಾಗಬೇಕು-ಬೂಡಿಯಾರ್

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡವರ ಮಕ್ಕಳು ಕಲಿಯುತ್ತಿದ್ದು ಉತ್ತಮ ವಿದ್ಯಾಭ್ಯಾಸ ದೊರೆಯುತ್ತಿದೆ, ಸರಕಾರಿ ಶಾಲೆಯಲ್ಲಿ ಕಲಿತ ಅದೆಷ್ಟೋ ಮಂದಿ ದೊಡ್ಡ ಮಟ್ಟದ ಸಾಧನೆ ಮಾಡಿದವರಿದ್ದಾರೆ, ಹಾಗಾಗಿ ಸರಕಾರಿ ಶಾಲೆಗಳ ಬಗ್ಗೆ ಯಾರೂ ನಿರ್ಲಕ್ಷ್ಯ ಭಾವನೆ ಹೊಂದಬಾರದು, ಸರಕಾರ ಖಾಸಗಿ ಶಾಲೆಗಳಿಗೆ ಅವಕಾಶ ಕೊಡುವ ಬದಲು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಆರ್ಯಾಪು ಗ್ರಾ.ಪಂ ಸದಸ್ಯ, ಉದ್ಯಮಿ ಬೂಡಿಯಾರು ಪುರುಷೋತ್ತಮ ರೈ ಹೇಳಿದರು.


ಪ್ರತೀ ವರ್ಷ ಇಡ್ಯೊಟ್ಟು ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸುತ್ತಿರುವ ಬೂಡಿಯಾರ್ ಪುರುಷೋತ್ತಮ ರೈಯವರು ಈ ಬಾರಿ ತನ್ನ ಸಹೋದರ ದಿ.ಮಾಧವ ರೈಯವರ 50ನೇ ಪುಣ್ಯ ಸ್ಮರಣೆ ಸ್ಮರಣಾರ್ಥ ಶಾಲೆಯಲ್ಲಿ ಜೂ.25ರಂದು ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಸರಕಾರಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಇಂಗ್ಲೀಷ್ ತರಗತಿ ಆರಂಭಗೊಳ್ಳಬೇಕು, ಕಾಲದ ಬೇಡಿಕೆಗೆ ಅನುಸಾರವಾಗಿ ಇಂಗ್ಲೀಷ್ ಕಲಿಕೆಗೂ ಮಹತ್ವ ಕೊಡಬೇಕು. ಬಡ ಮಕ್ಕಳೂ ಇಂಗ್ಲೀಷ್‌ನಲ್ಲಿ ಮಾತನಾಡುವಂತಾಗಬೇಕು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.


ನಾನು ಶ್ರೀಮಂತನೇನಲ್ಲ. ಇಲ್ಲಿ ಕಲಿಯುವ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಪುಸ್ತಕ ವಿತರಣೆ ಮಾಡಿದ್ದೇನೆ. ನಾನು ದುಡಿದ ಒಂದಂಶವನ್ನು ಸಮಾಜಕ್ಕೆ ನೀಡುತ್ತಿದ್ದೇನೆ. ಸಮಾಜದಲ್ಲಿರುವ ಅನುಕೂಲಸ್ಥರು ಬಡವರಿಗೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.

ಆರ್ಯಾಪು ಗ್ರಾ.ಪಂ ಸದಸ್ಯೆ ರಕ್ಷಿತಾ ಮಾತನಾಡಿ ಬೂಡಿಯಾರ್ ಪುರುಷೋತ್ತಮ ರೈಯವರು ಬಡವರ ಪರವಾಗಿ ಕಾಳಜಿ ಹೊಂದಿದ್ದು ಇವರ ಆದರ್ಶ ನಡೆ ಇತರರಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ಸಮಾಜದಲ್ಲಿ ಸಾಕಷ್ಟು ಮಂದಿ ಶ್ರೀಮಂತರಿದ್ದರೂ ಎಲ್ಲರಿಗೂ ದಾನ ಮಾಡುವ ಯೋಗಭಾಗ್ಯವಿರುವುದಿಲ್ಲ, ಬೂಡಿಯಾರ್ ಪುರುಷೋತ್ತಮ ರೈಯವರು ತಮ್ಮ ಹೃದಯ ಶ್ರೀಮಂತಿಕೆ ಮೂಲಕ ಬಡವರ ಕಣ್ಣೀರೊರೆಸುತ್ತಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅದ್ರಾಮ ಮಾತನಾಡಿ ಬೂಡಿಯಾರ್ ಪುರುಷೋತ್ತಮ ರೈ ಅವರು ಪ್ರತೀ ವರ್ಷ ನಮ್ಮ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸುತ್ತಿದ್ದು ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಸ್ವಾಗತಿಸಿದ ಇಡ್ಯೊಟ್ಟು ಶಾಲಾ ಮುಖ್ಯ ಶಿಕ್ಷಕಿ ಪ್ರೇಮಾ ಮಾತನಾಡಿ ನಮ್ಮ ಶಾಲೆಯ ಮಕ್ಕಳಿಗೆ ಪ್ರತೀ ವರ್ಷ ಪುಸ್ತಕ ವಿತಸರಿತ್ತಿರುವ ಬೂಡಿಯಾರ್ ಪುರುಷೋತ್ತಮ ರೈಯವರು ಕೊರೋನಾ ಸಂದರ್ಭದಲ್ಲೂ ಬಡವರಿಗೆ ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ಇವರ ಮಾನವೀಯ ನಡೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.ವೇದಿಕೆಯಲ್ಲಿ ಆರ್ಯಾಪು ಗ್ರಾ.ಪಂ ಸದಸ್ಯೆ ರೇವತಿ ಉಪಸ್ಥಿತರಿದ್ದರು.
ದಾನಿ ಬೂಡಿಯಾರ್ ಪುರುಷೋತ್ತಮ ರೈ ಹಾಗೂ ಪತ್ರಕರ್ತ ಯೂಸುಫ್ ರೆಂಜಲಾಡಿ ಅವರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಿಕ್ಷಕಿ ಆಶಾ ವಂದಿಸಿದರು. ಶಿಕ್ಷಕ ದೇವಪ್ಪ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಂಧ್ಯಾ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುರೇಶ್ ಇಡಬೆಟ್ಟು, ಎಸ್.ಡಿ.ಎಂ.ಸಿ ಸದಸ್ಯರಾದ ಕುಸುಮಾ, ಸುಂದರಿ, ಲಕ್ಷ್ಮಣ, ಕುಶಾಲ, ಪೋಷಕರಾದ ಹರಿಣಾಕ್ಷಿ, ಶ್ರೀಪತಿ ಹೆಬ್ಬಾರ್, ಅಬೀಬಾ, ಕೈರುನ್ನಿಸಾ, ಇಬ್ರಾಹಿಂ ಅಮ್ಮುಂಜ, ಗೋಪಾಲ ಅಮ್ಮುಂಜ, ಸುಂದರಿ ಅಮ್ಮುಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here