ಪುತ್ತೂರು: ಪಡುವನ್ನೂರು ಗ್ರಾಮದ ಗ್ರಾಮ ಸಹಾಯಕರು ಗ್ರಾಮಸ್ಥರಿಗೆ ಸರಕಾರಿ ಸೌಲಭ್ಯ ಪಡೆಯುವಲ್ಲಿ ತೊಂದರೆ ನೀಡುತ್ತಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕ ಮೂಲಭೂತ ಸೌಲಭ್ಯಗಳಾದ 94ಸಿ, ಅಕ್ರಮ ಸಕ್ರಮ, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆಯುವಲ್ಲಿ ಗ್ರಾಮ ಸಹಾಯಕರು ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುವ ರಘು ಎಂಬವರು ಸಾರ್ವಜನಿಕರಿಗೆ ಸಂಬಂಧಪಟ್ಟಂತೆ ಸರಕಾರದಿಂದ ಮಂಜೂರಾಗರುವ ಸೌಲಭ್ಯಗಳಾದ ಮಹಿಳೆಯರ ಪಿಂಚಣಿ, ವಿಧವಾ ವೇತನ, ಜಾತಿ ಆದಾಯ, ವಾಸ್ತವ್ಯ ಸಂಬಂಧಿತ ಅರ್ಜಿಗಳು ಮತ್ತು 94C, ನಮೂನೆ 57 ಅರ್ಜಿಗಳಿಗೆ ಸಂಬಂಧಿಸಿದಂತೆ ಅನಗತ್ಯವಾಗಿ ತುಂಬಾ ಕಿರುಕುಳ ನೀಡುತ್ತಿದ್ದಾರೆ.ರಾಷ್ಟ್ರೀಯ ಪಕ್ಷವೊಂದರ ಕಟ್ಟಾಳುವಾಗಿರುವ ಇವರು ಇತರೆ ಪಕ್ಷದ ಕಾರ್ಯಕರ್ತರ ದಾಖಲೆಗಳಿಗೆ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ. ನಮೂನೆ 57 ಕ್ಕೆ ಸಂಬಂಧಿಸಿದಂತೆ ಒಂದು ಪಕ್ಷದ ಏಜಂಟನಂತೆ ವರ್ತಿಸುವ ಇವರು ಇತರರು ನೀಡಿದ ದಾಖಲೆಗಳಿಗೆ ಆಕ್ಷೇಪ ಪಡಿಸುತ್ತಿದ್ದಾರೆ. ಎಕರೆ ಗಟ್ಟಲೆ ಭೂಮಿ ಅಕ್ರಮ ಸಕ್ರಮದಲ್ಲಿ ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿರುವ ಈತನಿಂದ ಎರಡು ಗ್ರಾಮದಲ್ಲೂ ತೊಂದರೆಯಾಗುತ್ತಿದೆ. ಸರಕಾರದ ನಿಯಮಾವಳಿಗೆ ವಿರುದ್ಧವಾಗಿ ಈತ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಕೋಟ್ಯಂತರ ಬೆಲೆಬಾಳುವ ಎರಡು ಅಂತಸ್ತಿನ ಮನೆ ಹೊಂದಿದ್ದಾರೆ. ಸರಕಾರಿ ಯಂತ್ರವನ್ನು ದುರುಪಯೋಗ ಪಡಿಸುವ ಮೂಲಕ ಅಕ್ರಮ ವ್ಯವಹಾರ, ಭ್ರಷ್ಟಾಚಾರ ನಡೆಸಿ ಅಕ್ರಮ ಆಸ್ತಿ ಪಾಸ್ತಿ ಹೊಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಜನಸಾಮಾನ್ಯರ ಹಿತದೃಷ್ಟಿಯಿಂದ ತನಿಖೆ ನಡೆಸಿ ಈತನ ವಿರುದ್ದ ಕಾನೂನು ಕ್ರಮ ಕೈಗೊಂಡು ಪಡುವನ್ನೂರು ಗ್ರಾಮ ಸಹಾಯಕ ಸ್ಥಾನದಿಂದ ತೆರವೊಳಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.