ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ತಾ|ದೈ.ಶಿ.ಶಿಕ್ಷಕರ ಸಂಘದಿಂದ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ “ಸಾಧನಾಭಿವಂದನಾ ಗೌರವಾರ್ಪಣೆ”

0

ಮಕ್ಕಳನ್ನು ಶಿಸ್ತುಬದ್ಧವಾಗಿ ಬೆಳೆಸುವ ಕಾರ್ಯ ದೈಹಿಕ ಶಿಕ್ಷಕರಲ್ಲಿದೆ-ಲೋಕೇಶ್ ಎಸ್.ಆರ್.

ಪುತ್ತೂರು: 2023-24ನೇ ಸಾಲಿನ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ದರ್ಬೆ ಲಿಟ್ಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಧನಾಭಿವಂದನಾ ಮತ್ತು ಗೌರವಾರ್ಪಣಾ ಕಾರ್ಯಕ್ರಮ ನಡೆಯಿತು.


ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಳೆದ ಬಾರಿ ರಾಜ್ಯಮಟ್ಟದ ಕ್ರೀಡಾಕೂಟ ಪುತ್ತೂರಿನಲ್ಲಿ ಚೆನ್ನಾಗಿ ಮೂಡಿಬಂದಿದೆ. ಓದಿಗೆ ಪೂರಕವಾಗಿ ದೈಹಿಕ ಶಿಕ್ಷಣ ಎಷ್ಟು ಪೂರಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಸನ್ಮಾನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಒಂದು ಪ್ರೋತ್ಸಾಹ ಹಾಗೂ ಸ್ಪೂರ್ತಿಯಾಗಿದೆ ಎಂದರು. ಹಿಂದಿನ ಕಾಲದಲ್ಲಿ ಪೋಷಕರು ಮಕ್ಕಳನ್ನು ಒಳಗಡೆ ಕೂರಿಸಿ ಬೆಳೆಸಲಿಲ್ಲ. ಇಂದಿನ ಮಕ್ಕಳಿಗೆ ಸೀಸನಲ್ ಆಟಗಳು ಗೊತ್ತಿಲ್ಲ. ಪ್ರಕೃತಿಯ ಜತೆಗೆ ಬೆರೆತು ಆಟ ಆಡುವುದಿಲ್ಲ. ಶಾಲೆಯಲ್ಲಿ ಪೋಷಕ ಭರಿತ ಆಹಾರ ಸೇರಿದಂತೆ ಎಲ್ಲಾ ಸೌಲಭ್ಯಗಳು ಮಕ್ಕಳಿಗೆ ಸಿಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳನ್ನು ಕ್ರೀಡಾ ಸ್ಪರ್ಧೆಗಳಿಗೆ ಪೂರಕವಾಗಿ ಬೆಳೆಸುವುದು ಪೋಷಕರಿಗೆ ಇಂದು ಸವಾಲಾಗಿದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕರು ಶಿಸ್ತನ್ನು ಕಲಿಸುವವರು. ಇಡೀ ಶಾಲೆಯಲ್ಲಿ ವಿದ್ಯಾರ್ಥಿಗಳು ಹೆದರುವುದು ದೈಹಿಕ ಶಿಕ್ಷಕರಿಗೆ ಮಾತ್ರ. ಮಕ್ಕಳನ್ನು ಶಿಸ್ತುಬದ್ಧವಾಗಿ ಬೆಳೆಸುವ ಕಾರ್ಯ ದೈಹಿಕ ಶಿಕ್ಷಕರಲ್ಲಿದೆ. ಶಿಕ್ಷಕರು ಉತ್ಸಾಹದಿಂದ ಕೆಲಸ ಮಾಡಿದ ಶಾಲೆ ಒಳ್ಳೆಯ ಹೆಸರನ್ನು ಕೂಡ ಪಡೆಯುತ್ತಿದೆ. ಅಲ್ಲದೆ ಶಾಲೆ ಕೂಡ ಸದೃಢವಾಗಿ ಬೆಳೆಯುತ್ತದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕರು ತಮ್ಮ ಕಾರ್ಯಕ್ರಮಗಳಲ್ಲಿ ಡ್ರೆಸ್ ಕೋಡ್ ಪಾಲಿಸಬೇಕು ಎಂದು ಹೇಳಿದ ಅವರು ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.


ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಅವರ ಕಾರ್ಯದ ಒತ್ತಡದಿಂದ ಶಾಸಕರು ಭಾಗಿಯಾಗಲಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಪುತ್ತೂರು ದಾಖಲೆಯನ್ನು ಪಡೆದಿದೆ. ಸಾಧನೆಯು ಹಂತ ಹಂತವಾಗಿ ಏರಿ ಈ ಬಾರಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಯಿತು. ವಿಶೇಷ ಎಂದರೆ ರಾಜ್ಯಮಟ್ಟದ ಕ್ರೀಡಾಕೂಟ ಅದ್ದೂರಿಯಾಗಿ ಪುತ್ತೂರಿನಲ್ಲಿ ನಡೆದಿದೆ. ಅಲ್ಲದೆ ಕ್ರೀಡಾ ಸಾಧನೆಯಲ್ಲಿ ಪುತ್ತೂರಿಗೆ ಬೆಳ್ಳಿಪದಕ, ಚಿನ್ನದ ಪದಕ ಲಭಿಸಿದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ. ಎಲ್ಲಾ ಶಿಕ್ಷಕರು ಸೇರುವ ಮೂಲಕ ಸಂಘಟನೆ ಬಲಪಡೆದಿದೆ. ವಲಯ ಮಟ್ಟ, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆ ಬೆಳೆಯಲಿ ಎಂದು ಹೇಳಿ ಶುಭಹಾರೈಸಿದರು.


ಲಿಟ್ಲ್ ಫ್ಲವರ್ ಶಾಲೆಯ ಸಂಚಾಲಕಿ ಪ್ರಶಾಂತಿ ಭಗಿನಿ ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಶ್ರಮ ಮುಖ್ಯ. ಗೆಲುವಿಗೆ ಇಲಾಖೆಯ, ಶಿಕ್ಷಕರ, ಪೋಷಕರ ತ್ಯಾಗ ಇದೆ. ಗೆಲುವಿಗೆ ಆತ್ಮವಿಶ್ವಾಸ ಮುಖ್ಯ. ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಒಂದು ಅನನ್ಯವಾದುದು ಎಂದರು. ವಿದ್ಯಾರ್ಥಿಗಳ ಸಾಧನೆಗೆ ಮಳೆ ಗಾಳಿ ಬಿಸಿಲು ಎನ್ನದೆ ದೈಹಿಕ ಶಿಕ್ಷಣ ಶಿಕ್ಷಕರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದ ಅವರು ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ಮಾತನಾಡಿ ಶಿಕ್ಷಣದ ಜತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನತೆಯಲ್ಲಿ ದೈಹಿಕ ಶಿಕ್ಷಣವೂ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸುವವರು, ವಿದ್ಯಾರ್ಥಿಗಳ ಆರೋಗ್ಯವನ್ನು ನೋಡಿಕೊಳ್ಳುವವರು ದೈಹಿಕ ಶಿಕ್ಷಣ ಶಿಕ್ಷಕರು. ದೈಹಿಕ ಶಿಕ್ಷಕರು ಕಾರ್ಯಾಂಗ ಇದ್ದ ಹಾಗೆ, ಕ್ರೀಡೆಯಲ್ಲಿ ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದವರೆಗೆ ವಿದ್ಯಾರ್ಥಿಗಳನ್ನು ಬೆಳೆಸುತ್ತಾರೆ ಇದು ಹೆಮ್ಮೆಯ ವಿಷಯ ಎಂದು ಹೇಳಿದರು. ನಿಂತಿಕಲ್ಲು ಶ್ರೀದೇವಿ ಅಗ್ರಿಟೆಕ್ ಮಾಲಕ ತಿಮ್ಮಪ್ಪ ರೈ ಮಾತನಾಡಿ ನನ್ನ ಒಳಗಿನ ಕಣ್ಣು ಈ ಸಮಾರಂಭದಿಂದ ತೆರೆದುಕೊಂಡಿತು. ಇಂತಹ ಸಾಧಕ ವಿದ್ಯಾರ್ಥಿಗಳ ಮೂಲಕ ದೈಹಿಕ ಶಿಕ್ಷಣ ಶಿಕ್ಷಕರ ಶ್ರಮ, ಮಹತ್ವ ತಿಳಿಯುತ್ತದೆ ಎಂದರು. ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಜಯರಾಮಗೌಡ ಮತ್ತು ಸೀತಾರಾಮ ಗೌಡ ಮಾತನಾಡಿ ಶುಭಹಾರೈಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನವೀನ್ ವೇಗಸ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಬೆಟ್ಟಂಪಾಡಿ ಗೋಕುಲ್ ಕನ್‌ಸ್ಟ್ರಕ್ಷನ್ ಮಾಲಕ ನವೀನ್ ತಲೆಪ್ಪಾಡಿ, ಲಿಟ್ಲ್ ಫ್ಲವರ್ ಶಾಲೆಯ ಮುಖ್ಯಗುರು ವೆನಿಶಾ ಬಿ.ಎಸ್., ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ಸಹದೇವ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಡುಮಲೆ, ಗ್ರೇಡ್-೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕರುಣಾಕರ್ ಮಣಿಯಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಭಾಷ್‌ಚಂದ್ರ ಬೋಸ್ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಕರ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಹೂ ನೀಡಿ ಗೌರವಿಸಲಾಯಿತು.

ನಿವೃತ್ತಿಗೊಂಡ ದೈಹಿಕ ಶಿ.ಶಿಕ್ಷಕರಿಗೆ ಸನ್ಮಾನ:
2023-24ನೇ ಸಾಲಿನಲ್ಲಿ ನಿವೃತ್ತಿಗೊಂಡ ವಿವಿಧ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹೀರೆಬಂಡಾಡಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ, ಬಿಳಿಯೂರುಕಟ್ಟೆ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಮುಖ್ಯಗುರು ಜಯರಾಮ ಶೆಟ್ಟಿ ಮತ್ತು ಆಲಂತಡ್ಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯವರು ನಿವೃತ್ತಿಗೊಂಡಿದ್ದು ಇವರನ್ನು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ, ದೈಹಿಕ ಪರಿವೀಕ್ಷಣಾಧಿಕಾರಿಗಳಿಗೆ ಸನ್ಮಾನ:
ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಗಳಿಗೆ ನಿರಂತರ ಪ್ರೋತ್ಸಾಹ ನೀಡಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರನ್ನು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಪ್ರಾಸ್ತಾವಿಕ ಮಾತನಾಡಿದರು. ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ರೈ ಗಿಳಿಯಾಲು ಸ್ವಾಗತಿಸಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೋಶಾಧಿಕಾರಿ ಸುಧೀರ್ ರೈ ವಂದಿಸಿದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಕಜೆ, ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಕೃಷ್ಣಪ್ರಸಾದ್ ಬೆಟ್ಟಂಪಾಡಿ, ಚಂದ್ರಕಲಾ, ಶ್ರೀಲತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರಮಟ್ಟದ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ “ಸಾಧನಾಭಿವಂದನಾ”
2023-24ನೇ ಸಾಲಿನ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 14ರ ವಯೋಮಾನದ ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪಡದಕ ಪಡೆದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೀರ್ತಿ ಬಿ.ಎಂ. ಮತ್ತು 14ರ ವಯೋಮಾನದ ಕಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕೊಂಬೆಟ್ಟು ಜೂನಿಯರ್ ಕಾಲೇಜಿನ ಶಶಾಂಕ್‌ರವರನ್ನು ಪೋಷಕರ, ಶಿಕ್ಷಕರ ಸಹಿತ ಸನ್ಮಾನಿಸಲಾಯಿತು.

2023-24ನೇ ಸಾಲಿನಲ್ಲಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಪೋಷಕರ ಸಹಿತ ಸನ್ಮಾನಿಸಲಾಯಿತು. ವಿವಿಧ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ 25 ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here