ಮಂಗಳೂರು: ವಿದ್ಯುತ್ ಶಾಕ್ -ರಾಮಕುಂಜ ನಿವಾಸಿ ದೇವರಾಜು ಸಹಿತ ಇಬ್ಬರ ದುರ್ಮರಣ

0
electric Shock

ರಾಮಕುಂಜ: ವಿದ್ಯುತ್ ಶಾಕ್‌ಗೆ ಒಳಗಾಗಿ ಕಡಬ ತಾಲೂಕಿನ ರಾಮಕುಂಜ ನಿವಾಸಿ ಸಹಿತ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ರೊಸೊರಿಯಾ ಎಂಬಲ್ಲಿ ನಡೆದಿದೆ. ಘಟನೆ ಜೂ.26ರಂದು ರಾತ್ರಿಯೇ ನಡೆದಿದ್ದು ಜೂ.27ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.


ರಾಮಕುಂಜ ಗ್ರಾಮದ ಇರ್ಕಿ ನಿವಾಸಿ ದಿ.ವೀರಪ್ಪ ಗೌಡ ಅವರ ಪುತ್ರ ದೇವರಾಜು (42ವ.)ಹಾಗೂ ಹಾಸನ ನಿವಾಸಿ ರಾಜು ಮೃತಪಟ್ಟವರಾಗಿದ್ದಾರೆ. ಇವರಿಬ್ಬರು ಮಂಗಳೂರಿನಲ್ಲಿ ಆಟೋ ಚಾಲಕರಾಗಿದ್ದಾರೆ. ಹಾಸನದ ಹಾಲೂರು ನಿವಾಸಿ ಅಣ್ಣೆಗೌಡ ಎಂಬವರ ಮಗ ರಾಜು ಅವರು ಜೂ.26ರಂದು ರಾತ್ರಿ ಸುಮಾರು 9.30ರ ವೇಳೆಗೆ ಆಟೋ ತೊಳೆಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿಯೊಂದು ತುಂಡಾಗಿ ಅವರ ಮೇಲೆಯೇ ಬಿದ್ದಿದೆ. ರಾಜು ಅವರು ವಿದ್ಯುತ್ ಶಾಕ್‌ಗೆ ಒಳಗಾಗಿ ಒದ್ದಾಡುತ್ತಿರುವುದನ್ನು ಗಮನಿಸಿದ ರಾಮಕುಂಜ ನಿವಾಸಿ ದೇವರಾಜು ಅವರು ರಕ್ಷಣೆಗೆ ಧಾವಿಸಿ ಬಂದಿದ್ದು ಈ ವೇಳೆ ಅವರೂ ವಿದ್ಯುತ್ ಶಾಕ್‌ಗೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜೂ.27ರಂದು ಬೆಳಿಗ್ಗೆ ಸ್ಥಳೀಯ ನಿವಾಸಿಯೊಬ್ಬರು ಬೀದಿ ದೀಪ ಆಫ್ ಮಾಡಲು ಬಂದ ವೇಳೆ ಈ ದುರ್ಘಟನೆ ಬೆಳಕಿಗೆ ಬಂದಿದೆ. ವಿದ್ಯುತ್ ತಂತಿಗಳು ತುಕ್ಕು ಹಿಡಿದಿದ್ದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ತುಂಡಾಗಿ ಬಿದ್ದಿರುವುದರಿಂದಲೇ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here