ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಲಂಚ, ಭ್ರಷ್ಟಾಚಾರದ ವಿರುದ್ಧ ಕೈಗೊಂಡ ಕ್ರಮಗಳನ್ನೂ ಮೀರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸಂಸದ ಕ್ಯಾ|ಬ್ರಿಜೇಶ್ ಚೌಟ, ಶಾಸಕ ಪ್ರತಾಪ್ ಸಿಂಹ ನೇತೃತ್ವದ ತಂಡದಿಂದ ಲಂಚ, ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಣೆ ಘೋಷಣೆ

0

ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ಲಂಚ, ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ನಡೆಯುತ್ತಿದ್ದಾಗ ಅಂದು ಪುತ್ತೂರಿನಿಂದ ಶಾಸಕ ಚುನಾವಣೆಗೆ ಸ್ಪರ್ಧಿಯಾಗಲು ಬಯಸಿದ್ದ ಅಶೋಕ್ ಕುಮಾರ್ ರೈಯವರು ತಾನು ಶಾಸಕನಾಗಿ ಆರಿಸಿ ಬಂದರೆ ಪುತ್ತೂರನ್ನು ಲಂಚ, ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡುವುದಾಗಿಯೂ ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವಂತೆ ಮಾಡುವುದಾಗಿ ಘೋಷಿಸಿದ್ದರು. ಅದು ಅವರ ಚುನಾವಣಾ ಆಯ್ಕೆಗೆ ಪರಿಣಾಮಕಾರಿಯಾಗಿ ಸಹಾಯ ಮಾಡಿದೆ.
ಶಾಸಕರಾಗಿ ಆಯ್ಕೆಯಾದ ಮೇಲೆ ಅಶೋಕ್ ಕುಮಾರ್ ರೈಯವರು ತಾನು ನೀಡಿದ ಭರವಸೆಯನ್ನು ಮರೆಯದೆ ತಮ್ಮ ಘೋಷಣೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವಂತೆ ಮಾಡಿದ್ದಾರೆ. ಯಾವುದೇ ಇಲಾಖೆಯಲ್ಲಿ ಲಂಚದ ಹಣಕ್ಕೆ ಬೇಡಿಕೆ ಇಟ್ಟರೆ ಅದಕ್ಕಾಗಿ ಕೆಲಸ ಮಾಡದೆ ಇದ್ದರೆ ಕೂಡಲೇ ತನಗೆ ತಿಳಿಸುವಂತೆ ಜನರಿಗೆ ಕರೆ ಕೊಟ್ಟಿದ್ದಾರೆ. ಲಂಚ, ಭ್ರಷ್ಟಾಚಾರವನ್ನು ಸಹಿಸುವುದಿಲ್ಲವೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅದು ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿದೆ. ಪುತ್ತೂರಿನ ಇಲಾಖೆಗಳಲ್ಲಿ ಶೇ. 90ರಷ್ಟು ಲಂಚ, ಭ್ರಷ್ಟಾಚಾರ ಕಡಿಮೆಯಾಗಿದೆ ಎಂಬ ಅಭಿಪ್ರಾಯ ಜನರಲ್ಲಿದೆ.


ಆದರೆ ಬೆಳ್ತಂಗಡಿಯಲ್ಲಿ ಲಂಚ, ಭ್ರಷ್ಟಾಚಾರ ಮೊದಲಿಗಿಂತ 10 ಪಟ್ಟು ಜಾಸ್ತಿಯಾಗಿದೆಯೆಂದು ಶಾಸಕ ಹರೀಶ್ ಪೂಂಜರು ಬೆಳ್ತಂಗಡಿಯಲ್ಲಿ ಮೇ.20ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ಹೇಳಿದ್ದಾರೆ. (ಆ ಪ್ರತಿಭಟನಾ ಸಭೆಯ ಭಾಷಣದ ವೀಡಿಯೋವನ್ನು ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.) ಆ ಭಾಷಣದ ಸಂಕ್ಷಿಪ್ತ ವಿವರವನ್ನು ಈ ಕೆಳಗೆ ನೀಡಿದ್ದೇವೆ.

ಮೇ20ರಂದು ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪೂಂಜರ ಭಾಷಣ
ಇದು ನನ್ನದೇ ಲೂಟಿ ರಾಜ್ಯ, ಅಕ್ರಮದಲ್ಲಿ ಎಷ್ಟು ಹಣ ಬೇಕಾದರೂ ತೆಗೆದುಕೊಳ್ಳಬಹುದು ಎಂದಿದ್ದಾರೆ ತಹಸೀಲ್ದಾರ್ :
ಬೆಳ್ತಂಗಡಿ ತಾಲೂಕಿನ ತಹಸೀಲ್ದಾರ್‌ಗೆ ನನ್ನ ಪ್ರಶ್ನೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ನನ್ನ ಇಬ್ಬರು ಗೆಳೆಯರಲ್ಲಿ ಅವರು ಹೇಳಿದ್ದರಂತೆ. ಸರ್, ಬಿಜೆಪಿ ಸರಕಾರ ಇರುವಾಗ ಕುತ್ತಿಗೆ ಹಿಡಿದಂತೆ ಆಗುತ್ತಿತ್ತು. ಒಂದು ರೂಪಾಯಿಯೂ ಆಗುತ್ತಿರಲಿಲ್ಲ. ಈಗ ಕಾಂಗ್ರೆಸ್ ಬಂದ ನಂತರ ಇದು ನನ್ನದೇ ರಾಜ್ಯ, ಲೂಟಿ ರಾಜ್ಯ ಆಗಿಬಿಟ್ಟಿದೆ. ನನಗೆ ಎಷ್ಟು ಬೇಕಾದರೂ 94ಸಿ, ಅಕ್ರಮ-ಸಕ್ರಮದಲ್ಲಿ ತೆಗೆದುಕೊಳ್ಳಬಹುದು. ಎಷ್ಟು ಬೇಕಾದರೂ ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆಯಲ್ಲಿ ತೆಗೆದುಕೊಳ್ಳಬಹುದು ಎಂದು ಹೇಳಿದ್ದಕ್ಕೆ ಪ್ರಮೋದ್ ಮೇಲೆ ಕೇಸು ಮಾಡಿದ ಸಾಕ್ಷಿ.


ಪ್ರಮೋದ್ ಹಫ್ತಾ ಕೊಡಲಿಲ್ಲವೆಂದು ಕೇಸ್ ಮಾಡಿದ್ದಾರೆ. ಪ್ರಮೋದ್ ಅಕ್ರಮ ಮಾಡಿದ್ದು ತಪ್ಪು ಎಂದು ನಾನು ಒಪ್ಪಿಕೊಳ್ಳುತ್ತೇನೆ -ಪೂಂಜ:
ಪ್ರಮೋದ್ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದು ತಪ್ಪೇ. ನಾನೂ ಒಪ್ಪಿಕೊಳ್ಳುತ್ತೇನೆ. ಪ್ರಮೋದ್ ಹಫ್ತಾ ಕೊಡಲಿಲ್ಲವೆಂದು ಅವರ ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ್ದಾರೆ ಈ ತಹಸೀಲ್ದಾರ್. ತಹಸೀಲ್ದಾರ್‌ರೇ, ಸುಬ್ರಪುರ್ ಮಠ್‌ರೇ, ಕಾಂಗ್ರೆಸ್‌ನ ಯಾವ ಮಗನೂ ಇಲ್ಲಿ ಅಕ್ರಮ ಗಣಿಗಾರಿಕೆ, ಮರಳುಗಾರಿಕೆ ನಡೆಸುತ್ತಿಲ್ಲವೇ? ಸುಬ್ರಪುರ್ ಮಠ್‌ರೇ, ನಿಮ್ಮಲ್ಲಿರುವುದು ಅಂಬೇಡ್ಕರ್‌ರ ಸಂವಿಧಾನ ಕೊಟ್ಟಿರುವ ಖಾಕಿ ಹೌದಾಗಿದ್ದರೆ ನಾಳೆಯಿಂದ ಕಾಂಗ್ರೆಸ್ -ಬಿಜೆಪಿ ಎಂದು ನೋಡದೆ ನ್ಯಾಯಯುತವಾಗಿ ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಮಾಫಿಯಾಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ನೀವು ಹಾಕಿರುವುದು ಫೇಕ್ ಖಾಕಿ, ಡೋಂಗಿ ಖಾಕಿ ಎಂದು ಹೇಳುತ್ತೇನೆ. ನೀವು ಕಾಂಗ್ರೆಸ್ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಹೇಳುತ್ತೇನೆ.


ಒಂದು ವಾರದ ಗಡುವು ನೀಡುತ್ತೇನೆ, ನಂತರವೂ ಅಕ್ರಮ ಮಾಫಿಯಾಗಳು ನಡೆಯುತ್ತಿದ್ದರೆ ನಾನೇ ರೈಡ್ ಮಾಡುತ್ತೇನೆ-ಪೂಂಜ:
ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತ ಶಶಿರಾಜ್ ಶೆಟ್ಟಿ ಯ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ನನಗೆ ಒಂದು ಲಕ್ಷ ಮತ ನೀಡಿದ್ದು ಬಿಜೆಪಿ ಈ ಕ್ಷೇತ್ರದ ಮತದಾರರ ರಕ್ಷಣೆ ಮಾಡಲು. ಮುಂದೆ ನಿಂತು ಒಂದು ಗಂಟೆ ರಾತ್ರಿಗೆ ಠಾಣೆ, ತಹಶೀಲ್ದಾರ್ ಮನೆಗೆ ಹೋಗಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ. ಕಾರ್ಯಕರ್ತರಿಗೆ ಅನ್ಯಾಯವಾದಲ್ಲಿ ಜೈಲುವಾಸ ಅನುಭವಿಸಲೂ ಸಿದ್ಧ ಇರುವ ಶಾಸಕ ನಾನು. ಯಾವುದೇ ಕಾರಣಕ್ಕೂ ಬೇಲ್ ತೆಗೆದುಕೊಳ್ಳುವುದಿಲ್ಲ. ಕಾರ್ಯಕರ್ತರ ರಕ್ಷಣೆಯ ದೃಷ್ಟಿಯಿಂದ ಪ್ರಾಮಾಣಿಕವಾಗಿ ಠಾಣೆಗೆ ಹೋಗಿ ಮಾತನಾಡಿದ್ದೇನೆ. 144 ಸೆಕ್ಷನ್ ಹಾಕಿದರೂ ಭಾಜಪಾ ಕಾರ್ಯಕರ್ತರ ಪ್ರತಿಭಟನೆಯನ್ನು ನಿಲ್ಲಿಸಲು ಆಗುವುದಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಶಿರಾಜ್ ಶೆಟ್ಟಿ ಇದ್ದಾರೋ, ಇಲ್ಲವೋ ಎಂಬುದನ್ನು ಕೂಲಂಕುಷವಾಗಿ ತನಿಖೆ ಮಾಡಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡುತ್ತೇನೆ. ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಅಕ್ರಮ ಮಾಫಿಯಾಗಳ ಬಗ್ಗೆ ಬೆಳ್ತಂಗಡಿ ಪೊಲೀಸರಲ್ಲಿ ವಿಚಾರಿಸಿ, ದಾಳಿ ಮಾಡಿ. ನಿಮಗೆ ಒಂದು ವಾರದ ಗಡುವು ನೀಡುತ್ತೇನೆ. ಆ ನಂತರವೂ ಅಕ್ರಮ ಮಾಫಿಯಾಗಳು ನಡೆಯುತ್ತಿದ್ದರೆ ನಾನೇ ರೈಡ್ ಮಾಡುತ್ತೇನೆ. ಆಗ ಅದಕ್ಕೆ ಸಂಬಂಧಪಟ್ಟ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಿದರೆ ವಿಧಾನಸೌಧದವರೆಗೂ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಪರ ಅಧಿಕಾರಿಗಳಿಗೆ ಧಿಕ್ಕಾರ, ಕಾಂಗ್ರೆಸ್ ಏಜೆಂಟ್ ಬೆಳ್ತಂಗಡಿ ತಹಸೀಲ್ದಾರ್‌ಗೇ ಧಿಕ್ಕಾರ, ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ..


ತಹಸೀಲ್ದಾರರೇ, ಅಂದು 100 ರೂ., ಇಂದು 1000 ರೂಪಾಯಿ. ಅಂದು 1000ಇದ್ದದ್ದು ಇಂದು 5000 ಸಾವಿರ ಲಂಚ ಆಗಿದೆ :
ಬೆಳ್ತಂಗಡಿ ತಾಲೂಕು ಕಚೇರಿಗೆ ಇವತ್ತು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಆಫೀಸ್ ಅಂತ ನಾಮಕರಣ ಮಾಡಿದ್ದೇವೆ. ಬಿಜೆಪಿ ಸರಕಾರ ಹೋದ ಮೇಲೆ ಈ ಕಚೇರಿಯಲ್ಲಿ ಕಾಗ್ರೆಸ್ ಏಜೆಂಟರೇ ಇರುವುದು. ಆವಾಗ ಚಹಾ ಕುಡಿಯಲು ಹಣ ಪಡೆಯುತ್ತಿದ್ದವರು ಇದ್ದರು. ಅಂದು 100 ರೂ. ಪಡೆಯುತ್ತಿದ್ದರು ಇಂದು 1000 ರೂಪಾಯಿ, ಸಾವಿರ ಇದ್ದದ್ದು 5 ಸಾವಿರ ರೂಪಾಯಿಗೆ ತಲುಪಿದೆ. ನಾನು ಇಲ್ಲಿನ ತಹಸೀಲ್ದಾರ್ ಪೃಥ್ವಿ ಸಾನಿಕಂರಲ್ಲಿ ಕೇಳುವೆ, ನೀವು ಭಾರಿ ಶಿಸ್ತಿನ, ಭಾರಿ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಅಧಿಕಾರಿ ಅಲ್ಲವೇ? ಒಮ್ಮೆ ಎಲ್ಲರೂ ತಾಲೂಕು ಕಚೇರಿಗೆ ಹೋಗಿ ನೋಡಿ. ತಾಲೂಕು ಕಚೇರಿ ಗುಡಿಸದೆ 2 ತಿಂಗಳಾಯಿತು. ವಸಂತ ಬಂಗೇರರು ಕಟ್ಟಿಸಿಕೊಟ್ಟ ನಂತರ ಜೇಡರ ಬಲೆಯನ್ನು ತೆಗೆದಿಲ್ಲ. ಶೌಚಾಲಯಕ್ಕೆ ಹೋಗಲು ಸಾಧ್ಯವಿಲ್ಲ, ಅಲ್ಲಿ ಅವ ಮೂಗು ಹಿಡಿದುಕೊಂಡೇ ಹಣ ತೆಗೆದುಕೊಂಡು ಕಿಸೆಗೆ ಹಾಕಿಕೊಳ್ಳುತ್ತಾನೆ. ತಹಸೀಲ್ದಾರ್ ಪೃಥ್ವಿ ಸಾನಿಕಂ ದುಡ್ಡು ಮಾಡಲು ಮಾತ್ರ ಬೆಳ್ತಂಗಡಿಗೆ ಬಂದದ್ದಲ್ಲ. ಇಲ್ಲಿನ ಜನರಿಗೆ ರಕ್ಷಣೆಗೋಸ್ಕರ, ಜನರ ಸಮಸ್ಯೆ ಪರಿಹಾರ ಮಾಡಲು ಬಂದಿರುವುದು. ಇಂಥದ್ದಕ್ಕೆಲ್ಲ ಜೂನ್ 4ರ ನಂತರ ಇತಿಶ್ರೀ ಹಾಕುವ ಕಾರ್ಯವನ್ನು ಕ್ಷೇತ್ರದ ಶಾಸಕನಾಗಿ ಮಾಡುತ್ತೇನೆ. ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ.


ಕಾರ್ಯಕರ್ತರನ್ನು ಮುಟ್ಟಿದರೆ ಪೊಲೀಸರ ಕಾಲರ್ ಹಿಡಿಯಲು, ಬೇಲ್ ತೆಗೆದುಕೊಳ್ಳದೆ ಜೈಲಿನಲ್ಲಿ ಕುಳಿತುಕೊಳ್ಳಲು, ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಸ್ಥಿತಿ ಮಾಡಲು ಸಿದ್ಧನಿದ್ದೇನೆ:
ಬೆಳ್ತಂಗಡಿಯ ಕಾರ್ಯಕರ್ತರನ್ನು ಮುಟ್ಟಿದರೆ, ಕಾಲರ್ ಹಿಡಿದು ಎಳೆದು ಹಾಕಲು ನಾನು ರೆಡಿ ಇದ್ದೇನೆ. ಬಿಜೆಪಿ ಕಾರ್ಯಕರ್ತರ ಪರವಾಗಿ, ಬೆಳ್ತಂಗಡಿ ತಾಲೂಕಿನ ಮತದಾರರಿಗೆ ಅನ್ಯಾಯವಾದರೆ ನಾನು ಜೈಲಿನಲ್ಲಿ ಕುಳಿತುಕೊಳ್ಳಲೂ ಸಿದ್ಧನಿದ್ದೇನೆ. ಪೊಲೀಸರ ಕಾಲರ್ ಹಿಡಿಯಲೂ ರೆಡಿ ಇದ್ದೇನೆ. ಪ್ರಾಯಶಃ ಇನ್ನು ಮುಂದೆ ಸುಬ್ರಪುರ್ ಮಠ್‌ರೇ, ಪೃಥ್ವಿ ಸಾನಿಕಂರೇ, ಬಿಜೆಪಿಯ ಕಾರ್ಯಕರ್ತರ ಮೇಲೆ ಈ ರೀತಿಯ ಸಾಹಸ ಮಾಡಲು ಹೋದರೆ ಬೆಳ್ತಂಗಡಿಯ ಬಿಜೆಪಿಯವರು ಅಂದು ಬ್ಯಾರಿಗಳು ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಯಲ್ಲಿ ಮಾಡಿದ ಸ್ಥಿತಿಯನ್ನೇ ಬೆಳ್ತಂಗಡಿಯಲ್ಲೂ ನಿರ್ಮಾಣ ಮಾಡುವ. ಅಂಥ ಕೆಲಸವನ್ನು ನಾವು ಖಂಡಿತವಾಗಿಯೂ ಮಾಡುತ್ತೇವೆ.

LEAVE A REPLY

Please enter your comment!
Please enter your name here