ದ.ಕ ದಲ್ಲಿ ಭಾರಿ ಮಳೆ: ತುಂಬಿ ಹರಿಯುತ್ತಿರುವ ಕುಮಾರಧಾರಾ ನದಿ – ಪುತ್ತೂರಿನಲ್ಲಿ ಕುಸಿದ ಧರೆ, ತಂದೆಯಿಂದಲೇ ಮಕ್ಕಳ ರಕ್ಷಣೆ

0

ಮಂಗಳೂರು/ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕುಮಾರಪರ್ವತದ ಪ್ರದೇಶಗಳಲ್ಲಿ ಬುಧವಾರ ರಾತ್ರಿಯಿಂದ ನಿರಂತರವಾಗಿ ಭಾರಿ ಮಳೆಯಾಗಿದ್ದು ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಇಲ್ಲಿನ ಸ್ನಾನಘಟ್ಟ ಮುಳುಗಡೆಯಾಗಿದ್ದು ಕುಮಾರಧಾರಾ ಕಿಂಡಿ ಅಣೆಕಟ್ಟು ಸಂಪೂರ್ಣ ಜಲಾವೃತವಾಗಿದೆ. ನದಿಗಿಳಿಯದಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದ್ದು, ನದಿ ತೀರದಲ್ಲಿ ಕುಕ್ಕೆ‌ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕುಮಾರಧಾರಾ ನದಿಯ ಉಪನದಿ ದರ್ಪಣತೀರ್ಥ ಕೂಡ ಮೈತುಂಬಿ ಹರಿಯುತ್ತಿದೆ.

ಪುತ್ತೂರು ಬನ್ನೂರು ಜೈನರಗುರಿ ಎಂಬಲ್ಲಿ ಭಾರಿ ಮಳೆಯಿಂದಾಗಿ ಮಜೀದ್ ಎಂಬುವರ ಮನೆ ಮೇಲೆ ಧರೆ ಕುಸಿದು, ಗುರುವಾರ ನಸುಕಿನಲ್ಲಿ ಗೋಡೆ ನೆಲಕ್ಕುರುಳಿದೆ. ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ತಂದೆಯೇ ರಕ್ಷಣೆ ಮಾಡಿದ್ದಾರೆ. ಮಜೀದ್ ತಮ್ಮ ಇಬ್ಬರು ಮಕ್ಕಳ ಜೊತೆ ಮನೆಯ ಕೊಠಡಿಯಲ್ಲಿ ಮಲಗಿದ್ದರು. ಅವರು ನಿದ್ದೆಯಲ್ಲಿದ್ದಾಗ ಮನೆ ಪಕ್ಕದ ಧರೆಯೊಂದು ಸಡಿಲಗೊಂಡು ಮನೆ ಮೇಲೆ ಬಿದ್ದಿತ್ತು. ಇದರಿಂದ ಮನೆಯ ಗೋಡೆ ನೆಲಸಮವಾಗಿತ್ತು. ಕೊಠಡಿ ಮೇಲೆ ಬಿದ್ದ ಮಣ್ಣು ಬಿದ್ದ ತಕ್ಷಣ ಎಚ್ಚೆತ್ತ ಮಜೀದ್‌, ಇಬ್ಬರು ಮಕ್ಕಳನ್ನು ಪಾರು ಮಾಡಿದ್ದಾರೆ. ನಗರಸಭೆ ಸಿಬ್ಬಂದಿ ಮತ್ತು ಸ್ಥಳೀಯರು ಕುಸಿದ ಮಣ್ಣು ಹಾಗೂ ಗೋಡೆಯನ್ನು ತೆರವುಗೊಳಿಸಿದರು. ಸ್ಥಳೀಯ ನಿವಾಸಿ ಗಣೇಶ್ ಆಚಾರ್ಯ ಸಹಿತ ಹಲವಾರು ಮಂದಿ ಮಣ್ಣು ತೆರವು ಕಾರ್ಯದಲ್ಲಿ ಸಹಕರಿಸಿದ್ದರು. ಘಟನಾ ಸ್ಥಳಕ್ಕೆ ನಗರಸಭಾ ಸದಸ್ಯೆ ಪಾತಿಮಾತ್ ಜೋರಾ, ಪಿ.ಜಿ. ಜಗನ್ನಿವಾಸ ರಾವ್, ಪೌರಾಯುಕ್ತ ಮಧು ಎಸ್. ಮನೋಹರ್, ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆವರೆಗೆ ಭಾರಿ ಮಳೆಯಾಗಿದ್ದು ಅನೇಕ ಕಡೆ ಮಣ್ಣುಕುಸಿತ ಉಂಟಾಗಿದೆ.

ಬಂಟ್ವಾಳ ತಾಲ್ಲೂಕಿನಾದ್ಯಂತ ಮಂಗಳವಾರ ತಡರಾತ್ರಿಯಿಂದ ಬುಧವಾರ ಮಧ್ಯಾಹ್ನ ತನಕ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮಳೆ ಹಾನಿ ಸಂಭವಿಸಿದೆ. ಗೋಳ್ತಮಜಲು ಗ್ರಾಮದ ನೆಟ್ಲ ನಿವಾಸಿ ಧನಂಜಯ ಗಟ್ಟಿ ಎಂಬವರ ಮನೆ ಮೇಲೆ ಮರ ಬಿದ್ದು ಮನೆ ಮತ್ತು ಆವರಣಗೋಡೆಗೆ ಹಾನಿಯಾಗಿದೆ. ಕೆದಿಲ ಗ್ರಾಮದ ಗಾಂಧಿನಗರ ನಿವಾಸಿ ಪೂವಕ್ಕ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಮರ್ಲೆಮಾರು ಎಂಬಲ್ಲಿ ಭತ್ತದ ಗದ್ದೆ ನೀರಿನಲ್ಲಿ ಮುಳುಗಿದೆ. ಇದೇ ಗ್ರಾಮದ ಮಾಣಿಮಜಲು ನಿವಾಸಿ ರಾಮಚಂದ್ರ ಗೌಡ ಎಂಬವರ ಮನೆ ಬದಿ ಧರೆ ಕುಸಿದಿದೆ. ಪುದು ಗ್ರಾಮದ ಕೆಸನಮೊಗರು ನಿವಾಸಿ ಬಾಬು ಸಪಲ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಗೋಡೆ ಮತ್ತು ಮಾಡಿನ ಹೆಂಚು ಹಾನಿಯಾಗಿದೆ. ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ನಿವಾಸಿ ಬ್ರಿಜಿತ್ ಡಿಕೋಸ್ತ ಎಂಬುವರ ಹಟ್ಟಿ ಕುಸಿದು ಹಾನಿಯಾಗಿದೆ. ಪುಣಚ ಗ್ರಾಮದ ಮಲ್ಲಿಕಟ್ಟೆ ನಿವಾಸಿ ಭಾಸ್ಕರ ನಲಿಕೆ ಎಂಬುವರ ಮನೆಯ ಆವರಣಗೋಡೆ ಕುಸಿದಿದೆ. ಪುರಸಭಾ ವ್ಯಾಪ್ತಿಯ ಹೊಸ್ಮಾರು ಎಂಬಲ್ಲಿ ಅಶೋಕ ಪೂಜಾರಿ ಮತ್ತು ಗಣೇಶ ಪೂಜಾರಿ ಎಂಬುವರ ಮನೆಯ ಆವರಣ ಗೋಡೆ ಕುಸಿದಿದ್ದು, ಎರಡು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಮನೆಯಲ್ಲಿದ್ದವರನ್ನು ಸ್ಥಳಾಂತರ ಮಾಡಲಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 4.8 ಮೀಟರ್ ಏರಿಕೆಯಾಗಿದ್ದು, ಕಲ್ಲಡ್ಕದಲ್ಲಿ ದಿನವಿಡೀ ವಾಹನ ದಟ್ಟಣೆ ಉಂಟಾಗಿ ಸಂಚಾರ ಅಸ್ತವಸ್ಯಸ್ತಗೊಂಡಿತು. ಮಾಣಿ ಮತ್ತು ದಾಸಕೋಡಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹೆದ್ದಾರಿ ಪಕ್ಕದಲ್ಲಿರುವ ಕೆಲವು ಮನೆಗಳು ಕುಸಿತದ ಭೀತಿ ಎದುರಿಸುತ್ತಿದೆ.

ಅಧಿಕ ತಾಪಮಾನ ಹಾಗೂ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ದೆಹಲಿಯ ವಿವಿಧ ಭಾಗಗಳಲ್ಲಿ ಇಂದು ಬೆಳಿಗ್ಗೆ ವ್ಯಾಪಕವಾಗಿ ಮಳೆಯಾಗಿದೆ. ಅಧಿಕ ತಾಪಮಾನದ ಪರಿಣಾಮ ಈ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here