ಮಂಗಳೂರು/ಕಾಸರಗೋಡು: ಕಾಸರಗೋಡಿನಿಂದ ಕುಟ್ಟಿಕೋಳ್ ಪಳ್ಳಂಜಿ ಪಾಂಡಿ ಅರಣ್ಯ ಪ್ರದೇಶದ ಮುಳುಗು ಸೇತುವೆ ಭಾರೀ ಮಳೆಯಿಂದಾಗಿ ಮುಳುಗಡೆಯಾಗಿದ್ದು ಸೇತುವೆ ಮೇಲೆ ಸಂಚರಿಸುತ್ತಿದ್ದ ಕಾರೊಂದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕಾರಿನಲ್ಲಿದ್ದ ಇಬ್ಬರು ಪವಾಡ ಸದೃಶ್ಯವಾಗಿ ಅಪಾಯದಿಂದ ಪಾರಾಗಿದ್ದು ಕಾರು ನೀರಿನಲ್ಲಿ ಕೊಚ್ಚಿ ಹೋಗಿದೆ.
ಅಂಬಲತ್ತರ ನಿವಾಸಿಗಳಾದ ಅಬ್ದುಲ್ ರಶೀದ್ ಮತ್ತು ತಸ್ರೀಫ್ ಕಾರ್ಯ ನಿಮಿತ್ತ ಪಾರಪಳ್ಳಿಯಿಂದ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆದೂರು ಪಳ್ಳಂಜಿ ಪಾಂಡಿ ರಸ್ತೆಯ ಮುಳುಗು ಸೇತುವೆ ಭಾರೀ ಮಳೆಯಿಂದಾಗಿ ಮುಳುಗಡೆಯಾಗಿದ್ದು ಸೇತುವೆಯ ಮೇಲಿನಿಂದ ನೀರು ಹರಿಯುತ್ತಿತ್ತು ಎನ್ನಲಾಗಿದೆ. ರಭಸದಿಂದ ಹರಿಯುತ್ತಿದ್ದ ನೀರಿನಿಂದಾಗಿ ಕಾರು ಹೊಳೆಯಲ್ಲಿ ಕೊಚ್ಚಿ ಹೋಗಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಅದು ಹೇಗೋ ಕಾರಿನಿಂದ ಹೊರ ಬಂದು ಮರದ ಕೊಂಬೆ ಹಿಡಿದು ಜೀವ ಉಳಿಸಿಕೊಂಡಿದ್ದಾರೆ. ಕಣ್ಣ ಮುಂದೆಯೇ ಕ್ಷಣಾರ್ದದಲ್ಲಿ ನಡೆದ ಘಟನೆಯನ್ನು ಕಂಡ ಸ್ಥಳೀಯರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿ, ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಭಸದಿಂದ ಹರಿಯುವ ಹೊಳೆ ನೀರಿನ ನಡುವೆ ಮರದ ಕೊಂಬೆ ಹಿಡಿದು ನಿಂತಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ಕಾರು ಮಾತ್ರ ಹೊಳೆ ಪಾಲಾಗಿದೆ. ಇಬ್ಬರೂ ಉಪ್ಪಿನಂಗಡಿಯ ಎಲ್ಲಿಗೆ ಪ್ರಯಾಣಿಸುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಘಟನೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ