ಕೆಂಪೇಗೌಡರು ದೂರದೃಷ್ಟಿತ್ವವನ್ನು ಹೊಂದಿದ್ದರು- ನಾಡಪ್ರಭು ಕೆಂಪೇಗೌಡ ಜಯಂತಿ ದಿನಾಚರಣೆಯಲ್ಲಿ ಸೀತಾರಾಮ ಕೇವಳ

0

ಪುತ್ತೂರು: ನಾಡಪ್ರಭು ಕೆಂಪೇಗೌಡ ಅವರ ಒಡನಾಟ ಪಡೆದ ಕರ್ನಾಟಕದ ನಾವೆಲ್ಲ ಧನ್ಯರು. ಯಾಕೆಂದರೆ ನಗರ ಹೇಗಿರಬೇಕೆಂದು ಬಹಳ ದೂರದೃಷ್ಟಿಯುಳ್ಳವರಾಗಿದ್ದು ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಸವಣೂರು ವಿದ್ಯಾರಶ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಹೇಳಿದರು.


ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಬೆಂಗಳೂರು ಹೇಗಿರಬೇಕೆಂದು ಚಿಂತನೆ ಮಾಡಿದ ಅವರು ಬೆಂಗಳೂರಿನಲ್ಲಿ 54 ವಿವಿಧ ಪೇಟೆಗಳನ್ನು ನಿರ್ಮಾಣ ಮಾಡಿದ್ದರು. ಒಂದೊಂದು ಕಡೆ ಒಂದೊಂದು ವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟ ಅವರು ಕೆರೆಗಳನ್ನು ಕಟ್ಟು, ಮರಗಳನ್ನು ನೆಡು ಎಂಬ ಗುರಿಯೊಂದಿಗೆ ಅಪ್ಪಟ ಪರಿಸರವಾದಿ ನೆಲೆಯಲ್ಲಿ ಅವರು ಕೆಲಸ ಮಾಡಿದವರು. ಇವತ್ತು ರಾಜಕಾರಣಿಗಳು 60 ಅಥವಾ 70 ವರ್ಷದಲ್ಲಿ ಹೆಸರು ಸಂಪದಾನೆ ಮಾಡುವ ಸಂದರ್ಭದಲ್ಲಿ ನಾಡಪ್ರಭು ಕರೆಸಿಕೊಂಡ ಕೆಂಪೇಗೌಡ ಅವರು 25 ನೇ ವಯಸ್ಸಿನಲ್ಲೇ ಹೆಸರು ಸಂಪಾದನೆ ಮಾಡಿದವರು. ಅವರ ಕೆಲಸದಲ್ಲಿ ಅತಿ ಮುಖ್ಯವಾದ ಇವತ್ತಿನ ಟೌನ್ ಪ್ಲಾನಿಂಗ್ ಅನ್ನು ನೆನಪಿಡಬೇಕು. ಇವತ್ತು ಟೌನ್ ಇದೆ. ಪ್ಲಾನಿಂಗ್ ಇದೆ. ಆದರೆ ಟೌನ್ ಪ್ಲಾನಿಂಗ್ ಕೊರತೆ ಇದೆ. ನಮ್ಮಲಿ ಟೌನ್ ಪ್ಲಾನಿಂಗ್ ಶಸಕ್ತವಾಗಿ ಆಗುತ್ತಿಲ್ಲ. ಆದರೆ ಆ ಕಾಲಕ್ಕೆ ಅಂತಹ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿರುವುದು ಕೆಂಪೇಗೌಡರ ವಿಶೇಷತೆ ಎಂದರು.


ಕೆಂಪೇಗೌಡರ ದೃಷ್ಟಿಕೋನದಲ್ಲಿ ಪುತ್ತೂರನ್ನು ಬೆಳೆಸಬೇಕು:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರಯೋಜನ ಪ್ರಾಧಿಕಾರ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಅವರು ಮಾತನಾಡಿ ಕೆಂಪೇಗೌಡರು ಬೆಂಗಳೂರು ನಗರ ಹೇಗಿರಬೇಕೆಂದು ಬಹಳ ಹಿಂದೆಯೇ ಯೋಜನೆ ಹಾಕಿದ್ದರು. ಆದರೆ ನಾವು ಈಗ ಮುಂದುವರಿದರೂ ಹೆಚ್ಚೆಂದರೆ ಹತ್ತರಿಂದ ಹದಿನೈದು ವರ್ಷದ ಯೋಜನೆಯಾಗಿರಬಹುದು. ಉದಾಹರಣೆಗೆ ಮಾಣಿ ಮಡಿಕೆರಿ ರಸ್ತೆ ನಿರ್ಮಾಣ ಮಾಡಿ ಇಕ್ಕೆಡೆಗಳಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಿ ಆಗಿದೆ. ಇದು ಇನ್ನು ಚತುಷ್ಪತ ಆಗುವಾಗ ಯಾವ ಚರಂಡಿಯೂ ಇರುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಪ್ಲಾನ್‌ಗಿಂತ ಕೆಂಪೇಗೌಡರ 500 ವರ್ಷಗಳ ಹಿಂದಿನ ಪ್ಲಾನ್ ಉತ್ತಮವಾಗಿದೆ. ಹರಪ್ಪ ಮೊಹೆಂಜಾದಾರ್, ಸಿಂಧೂ ನಾಗರಿಕತೆಯಲ್ಲಿ ಪಟ್ಟಣದ ಯೋಜನೆ ಬಹಳ ಉತ್ತಮವಾಗಿತ್ತು. ನಗರ ಸುಂದರವಾಗಿ ಬೆಳೆಯಬೇಕಾದರೆ ನಮಗೆ ನೂರುಇನ್ನೂರು ವರ್ಷದ ಯೋಜನೆ ನಮ್ಮ ತಲೆಯಲ್ಲಿರಬೇಕು. ಅದು ಇಲ್ಲದೆ ಯಾವುದೇ ನಿರ್ಮಾಣ ಮಾಡಿದರೂ ಹಣದ ದುರುಪಯೋಗ ಆಗುತ್ತದೆ ಹೊರತು ಅಭಿವೃದ್ಧಿಯಾಗುವುದಿಲ್ಲ. ನಾವು ಕೂಡಾ ಕೆಂಪೇಗೌಡರ ದೃಷ್ಟಿಕೋನದಲ್ಲಿ ಪುತ್ತೂರನ್ನು ಬೆಳೆಸಬೇಕೆಂದರು.


ಒಕ್ಕಲಿಗರ ಕೊಡಗೆ ಅಪಾರವಾಗಿದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಪುರಂದರ ಹೆಗ್ಡೆಯವರು ಮಾತನಾಡಿ ನಾನು ಕಂಡಂತೆ ಎಲ್ಲಾ ಕ್ಷೇತ್ರಗಳಲ್ಲೂ ಒಕ್ಕಲಿಗರ ಕೊಡುಗೆ ಅಪಾರವಾಗಿದೆ. ನಿಷ್ಠೆ, ಕರ್ತವ್ಯ ಪ್ರಜ್ಞೆ ಇರುವ ಒಕ್ಕಲಿಗರು ಬಹಳಷ್ಟು ಸೌಮ್ಯ ಸ್ವಭಾವದವರು. ಇವತ್ತು ನಿಮ್ಮ ಸಂಘಟನೆಯಿಂದ ನಮಗೂ ಬಹಳಷ್ಟು ಅನುಕೂಲವಾಗಿದೆ. ಇಲ್ಲವಾದಲ್ಲಿ ನಾವು ತಾಲೂಕು ಕಚೇರಿಯಲ್ಲಿ ಚಿಕ್ಕದಾಗಿ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತು. ಯಾಕೆಂದರೆ ನಮಗೂ ಆಗಾಗ ವಿಡಿಯೋ ಕಾನ್ಪರೆನ್ಸ್ ಮೀಟಿಂಗ್ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ನಮಗೆ ಒಕ್ಕಲಿಗರ ಪೂರ್ಣ ಸಹಕಾರ ಸಿಕ್ಕಿದೆ ಎಂದರು.


ದೂರದೃಷ್ಟಿತ್ವದ ಕಾರ್ಯಕ್ರಮ ಪ್ರತಿ ಶಾಲೆಯಲ್ಲೂ ಆಚರಿಸುವಂತಾಗಲಿ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ ಪ್ರತಿ ವರ್ಷ ಕೆಂಪೇಗೌಡ ಜಯಂತಿ ತಾಲೂಕು ಕಚೇರಿಯಲ್ಲಿ ನಡೆಯುತ್ತಿತ್ತು. ಈ ವರ್ಷ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಯಕೆಯಂತೆ ಎಲ್ಲರನ್ನು ಸೇರಿಸಿಕೊಂಡು ಇಲ್ಲಿ ಮಾಡುವಂತೆ ವಿನಂತಿಸಲಾಗಿತ್ತು. ಅದೆ ರೀತಿ ಇವತ್ತು ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆದಿದೆ. ದೂರದೃಷ್ಟಿತ್ವ ಕಾರ್ಯಕ್ರಮ ಪ್ರತಿ ಶಾಲೆಯಲ್ಲೂ ನಡೆಯಬೇಕು ಎಂದರು.


ಸ್ಪರ್ಧಾ ವಿಜೇತರಿಗೆ ಬಹುಮಾನ- ಸಾಧಕರಿಗೆ ಸನ್ಮಾನ
ನಾಡಪ್ರಭು ಕೆಂಪೇಗೌಡರ ಕುರಿತು ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಅದೇ ರೀತಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಒಕ್ಕಲಿಗ ಗೌಡ ಸಮುದಾಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮದ ಶ್ರೀನಿಧಿ, ಧನ್ವಿ ಆರ್ ವಿ, ತ್ರಿಶೂಲ್ ಎನ್‌ಡಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಗಣ್ಯಶ್ರೀ, ಅಂಬಿಕಾ ವಿದ್ಯಾ ಸಂಸ್ಥೆಯ ಅನುಶ್ರೀ ಎಸ್, ಸಂತ ಫಿಲೋಮಿನಾ ಕಾಲೇಜಿನ ಪಿ ತನ್ವಿ ಕೆ, ಅಂಬಿಕಾ ವಿದ್ಯಾಲಯದ ಅನ್ವಿಕಾ ಮತ್ತು ಚೈತನ್ಯ ಕೆ, ಪಿಯುಸಿ ಕಲಾವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಉಪ್ಪಿನಂಡಿ ಪ.ಪೂ ಕಾಲೇಜಿನ ಪ್ರೀಯ, ಮೋಕ್ಷಿತಾ, ಗೌರಿ, ಕೊಂಬೆಟ್ಟು ಪ.ಪೂ ಕಾಲೇಜಿನ ರಕ್ಷಾ, ವಾಣಿಜ್ಯ ವಿಭಾಗದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪ್ರತಿಕ್ಷಾ ಡಿ ಎಸ್, ಧನುಶ್ರೀ ಕೆ, ಕೊಂಬೆಟ್ಟು ಪ.ಪೂ ಕಾಲೇಜಿನ ಕೆ.ಎನ್ ತ್ರಿಶಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭ ಪ್ರಗತಿ ಪರ ಕೃಷಿಕ ಕೋಳ್ತಿಗೆ ತಿಮ್ಮಪ್ಪ ಗೌಡ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಯೋಜನೆಯಲ್ಲಿ ಪೂರ್ಣರೀತಿಯಲ್ಲಿ ಶ್ರಮವಹಿಸಿದ ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕ ರಾಧಾಕೃಷ್ಣ ನಂದಿಲ ಅವರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗೌರವಿಸಲಾಯಿತು.


ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ, ಮಹಿಳಾ ಗೌಡ ಸಂಘದ ಅಧ್ಯಕ್ಷ ವಾರಿಜ ಕೆ, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ, ಸಂಘದ ಪ್ರಧಾನ ಕಾರ್ಯದರ್ಸಿ ದಯಾನಂದ ಕೆ.ಎಸ್, ಪುರುಷೋತ್ತಮ ಮುಂಗ್ಲಿಮನೆ, ಸುಂದರ ಗೌಡ ನಡುಬೈಲು ಅತಿಥಿಗಳನ್ನು ಗೌರವಿಸಿದರು. ಒಕ್ಕಲಿಗ ಗೌಡ ಸಂಘದ ಮುಖಂಡ ಮಾಜಿ ಶಾಸಕ ಸಂಜೀವ ಮಠಂದೂರು, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಸ್ವಾಗತಿಸಿದರು. ಸಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಅವರು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಲಿಂಗೇಶ್ವರ ಐಟಿಐ, ಸುದಾನ ವಿದ್ಯಾಸಂಸ್ಥೆ, ವಿದ್ಯಾರ್ಥಿಗಳ ವಸತಿನಿಲಯದ ವಿದ್ಯಾರ್ಥಿಗಳು. ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು, ವಿವಿಧ ಸಮುದಾಯದ ಮುಖಂಡರು ಮತ್ತು ಗೌಡ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕೋಟೆ ಮಾದರಿಯ ವೇದಿಕೆ
ಕೆಂಪೇಗೌಡರ ಜಯಂತಿಯ ಅಂಗವಾಗಿ ಒಕ್ಕಲಿಗ ಗೌಡ ಸಮುದಾಯ ಭವನದ ಕಾರ್ಯಕ್ರಮದ ವೇದಿಕೆಯನ್ನು ಕೋಟೆಯ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ವೇದಿಕೆಯ ಬಲ ಭಾಗದ ಕೆಳಗೆ ಕೆಂಪೇಗೌಡರ ಪ್ರತಿಮೆಯನ್ನು ಇರಿಸಲಾಗಿತ್ತು. ಗಣ್ಯರು ಪ್ರತಿಮೆಗೆ ಪುಷ್ಪಾರ್ಚಣೆ ಮಾಡಿ ವೇದಿಕೆ ಆಸನ ಸ್ವೀಕರಿಸಿದರು ಬಳಿಕ ವೇದಿಕೆಯಲ್ಲಿ ಕೆಂಪೇಗೌಡರ ಇನ್ನೊಂದು ಪ್ರತಿಮೆಯ ಮುಂಭಾಗ ದೀಪ ಪ್ರಜ್ವಲಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕೆಂಪೇಗೌಡರ ಇತಿಹಾಸ ಕುರಿತು ಡಾಕ್ಯುಮೆಂಟ್‌ನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಸುದ್ದಿ ಯು ಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮದ ನೇರಪ್ರಸಾರ ನೀಡಲಾಯಿತು.

LEAVE A REPLY

Please enter your comment!
Please enter your name here