ಕೊಂಬಾರು: ಹೊಳೆಯಲ್ಲಿ ನೀರು ಹರಿಯುತ್ತಿದ್ದರೂ ಕಾರು ದಾಟಿಸುವ ದುಸ್ಸಾಹಸ – ನೀರಿನಲ್ಲಿ ಸಿಲುಕಿದ ಕಾರು

0

ಕಡಬ: ಕೊಂಬಾರು ಗ್ರಾಮದ ನಾರಡ್ಕ ಎಂಬಲ್ಲಿ ಹೊಳೆಯಲ್ಲಿ ವಿಪರೀತ ನೀರು ಹರಿಯುತ್ತಿದ್ದರೂ ಆ ನೀರಿನ ಪ್ರವಾಹದಲ್ಲಿ ಕಾರೊಂದನ್ನು ದಾಟಿಸುವ ದುಸ್ಸಾಹಸ ಮಾಡಿದ ಘಟನೆ ಜು.27ರಂದು ನಡೆದಿದೆ.

ಈ ಕಾರು ರೈಲ್ವೇ ಇಲಾಖೆಯವರಿಗೆ ಸಂಬಂಧಪಟ್ಟದ್ದು ಎಂದು ಹೇಳಲಾಗುತ್ತಿದ್ದರೂ ಸ್ವಷ್ಟ ಮಾಹಿತಿ ಲಭ್ಯವಾಗಿಲ್ಲ. ಕಳೆದೆರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಈ ನೀರಿನಲ್ಲಿ ಕಾರನ್ನು ದಾಟಿಸುವ ದುಸ್ಸಾಹಸ ಮಾಡಿರುವುದು ಮಾತ್ರ ಅಚ್ಚರಿ ತಂದಿದೆ.

ಶಾಶ್ವತ ಸೇತುವೆ ನಿರ್ಮಾಣಕ್ಕೆ ಆಗ್ರಹ

ಕೊಂಬಾರು ಗ್ರಾಮದ ಕೆಂಜಾಲದಿಂದ ಪ್ರಾರಂಭಗೊಂಡು ,ಕೊಲ್ಕಜೆ,ಓಡೋಳಿ, ನಾರಡ್ಕ, ಸುಬ್ರಹ್ಮಣ್ಯ ರೇಲ್ವೆ ಸ್ಟೇಷನ್ ಮೂಲಕ ಹಾದು ನೆಟ್ಟಣವನ್ನು ಸೇರುವ ಈ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯೂ ದ.ಕ.ಜಿಲ್ಲಾ ಪಂಚಾಯತಿನ ಅಧೀನದಲ್ಲಿ ಬರುವ ರಸ್ತೆಯಾಗಿರುತ್ತದೆ, ಸುಮಾರು ಹದಿನೈದು ವರ್ಷಗಳಿಂದಲೂ ಕೂಡ ಈ ರಸ್ತೆ ತುಂಬಾ ಹದಗೆಟ್ಟಿದ್ದು ಜನರಿಗೆ ಸಂಚರಿಸಲು ಕೂಡ ಪರದಾಡುವಂತಹ ಪರಿಸ್ಥಿತಿ ಇದೆ.
ಮಾತ್ರವಲ್ಲದೆ ಇದೆ ರಸ್ತೆಯ ಮಧ್ಯ ಭಾಗದ ಓಡೋಳಿ ಎಂಬ ಸ್ಥಳದಲ್ಲಿ ರೈಲ್ವೇ ಇಲಾಖೆಯವರು ನಿರ್ಮಿಸಿದ ಹಿಂದಿನ ಕಾಲದ ಕಬ್ಬಿಣದ ತಗಡು ಶೀಟ್ ಹಾಸಿ ನಿರ್ಮಿಸಿದ ಒಂದು ಸೇತುವೆ ಇದ್ದು ಈ ಸೇತುವೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಹೋಗುವಂತಹ ಪರಿಸ್ಥಿತಿ ಇದೆ.
ಈ ಹಿನ್ನಲೆಯಲ್ಲಿ ಭಾಗದ ಜನರು ಅಸಮಾಧಾನಗೊಂಡು ಕಳೆದ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವ ಬಗ್ಗೆ ಬ್ಯಾನರ್ ಗಳನ್ನು ಹಾಕಿ ಎಚ್ಚರಿಕೆ ನೀಡಿದ್ದರು.

ಈ ಸಂದರ್ಭದಲ್ಲಿ ಮಾತುಕತೆ ನಡೆಸಿ ಚುನಾವಣೆ ಕಳೆದ ತಕ್ಷಣವೇ ಈ ರಸ್ತೆ ಮತ್ತು ಅಪಾಯದಂಚಿನಲ್ಲಿರುವ ಮೋರಿ ಮತ್ತು ಸಂಕವನ್ನು ಸಂಪೂರ್ಣ ದುರಸ್ತಿ ಮಾಡಿ ಜನರ ಬೇಡಿಕೆಯನ್ನು ಈಡೇರಿಸುವುದಾಗಿ ಅಧಿಕಾರಿಗಳು ಹಾಗೂ ಪ್ರಮುಖರು ಭರವಸೆ ನೀಡಿದ್ದು ಮತದಾನ ಬಹಿಷ್ಕಾರ ಹಿಂಪಡೆಯಲಾಗಿತ್ತು.
ಅಲ್ಲದೆ ಊರಿನವರು ಸೇರಿಕೊಂಡು ಶ್ರಮದಾನ ಎಂಬ ಒಂದು ವಾಟ್ಸಪ್ ಗ್ರೂಪ್ ರಚನೆ ಮಾಡಿಕೊಂಡು ಆ ಮೂಲಕ ಕಳೆದ ಬೇಸಿಗೆಯಲ್ಲಿ ಜನರು ಓಡಾಡುವಂತೆ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿ ಮಾಡಿ ಕೊಂಡಿದ್ದಾರೆ. ಮತ್ತು ಈಗ ಮುಳುಗಡೆಯಾಗಿರುವ ಕಾರು ಇರುವ ಸ್ಥಳದಲ್ಲಿ ಊರಿನವರು ಸೇರಿ ಮರದ ದಿಮ್ಮಿಗಳನ್ನು ಜೋಡಿಸಿ ತಾತ್ಕಾಲಿಕವಾದ ಪಾಲವೊಂದನ್ನು ನಿರ್ಮಿಸಿದ್ದು ಈ ಸಂಕದಲ್ಲಿ ಕಾರು ಚಲಾಯಿಸಲು ಭಯಗೊಂಡು ಕಾರಿನ ಚಾಲಕ ಹೊಳೆ ದಾಟಿಸಲು ಮುಂದಾದ ಸಂದರ್ಭದಲ್ಲಿ ಕಾರು ನೀರಲ್ಲಿ ಮುಳುಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here