ಬಾಲವಿಕಾಸದಲ್ಲಿ “ವಿಕಾಸೋತ್ಸವ 2024-25 – ದ ಕಲ್ಚರಲ್ ಫೆಸ್ಟ್ “, ವಿಜ್ಞಾನ – ಕಲಾ ಸಂಘಗಳ ಉದ್ಘಾಟನೆ

0

ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭೆಗಳನ್ನು ಹೊರತರಲು ಸೂಕ್ತವಾದ ವೇದಿಕೆಯನ್ನು ಒದಗಿಸಲು ಮೂರು ದಿನಗಳ ಕಾಲ ನಡೆಯಲಿರುವ ಶಾಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು “ವಿಕಾಸೋತ್ಸವ 2024-25 – ದ ಕಲ್ಚರಲ್ ಫೆಸ್ಟ್ ” ಹಾಗೂ ವಿಜ್ಞಾನ ಮತ್ತು ಕಲಾ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

“ವಿಕಾಸೋತ್ಸವ 2024-25 ದ ಕಲ್ಚರಲ್ ಫೆಸ್ಟ್ -ಫೆಸ್ಟಿವಿಟಿ ಆಫ್ ಕ್ರಿಯೇಟಿವಿಟಿ ” ಎಂದು ಉಲ್ಲೇಖಿಸಲಾದ ವಿಜಯದ ಚೌಕಟ್ಟಿನ ಪರದೆಯನ್ನು ಅನಾವರಣಗೊಳಿಸುವುದರ ಮೂಲಕ ಹಾಗೂ ವಿವಿಧ ಲಲಿತ ಕಲೆಗಳನ್ನು ಬಿಂಬಿಸುವಂತಹ ವಿನ್ಯಾಸವಿರುವ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳಿರುವ ಪೆಟ್ಟಿಗೆಯನ್ನು ತೆರೆಯುವ ಮೂಲಕ ವಿಕಾಸೋತ್ಸವ 2024-25 ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಬಳಿಕ “ಇನಾಗರೇಷನ್ ಆಫ್ ಸೈನ್ಸ್ ಅಂಡ್ ಆರ್ಟ್ಸ್ ಕ್ಲಬ್ ” ಎಂದು ಉಲ್ಲೇಖಿಸಲಾದ ಎಲ್ ಈ ಡಿ ಬೋರ್ಡಿನ ಗುಂಡಿಯನ್ನು ಒತ್ತುವ ಮೂಲಕ 2024-25ನೇ ಶೈಕ್ಷಣಿಕ ಸಾಲಿನ ವಿಜ್ಞಾನ ಹಾಗೂ ಕಲಾ ಸಂಘವನ್ನು ಉದ್ಘಾಟಿಸಲಾಯಿತು.

ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸದೆ ವಿಕಾಸೋತ್ಸವದಂತಹ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಪೋಷಕರ ಹಾಗೂ ಶಿಕ್ಷಕರ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಪ್ರಯತ್ನವನ್ನು ಮಾಡಿ ಜಯಗಳಿಸಬೇಕು ಎಂದರು.

ಪುತ್ತೂರಿನ ವಿವೇಕಾನಂದ ಕೇಂದ್ರೀಯ ಶಾಲೆಯ ಅಧ್ಯಕ್ಷರಾದ ವಸಂತಿ ಕೆ. ರವರು ಕಾರ್ಯಕ್ರಮವನ್ನು‌ ಉದ್ಘಾಟಿಸಿ ಮಾತನಾಡಿ ಮಾಣಿಯಂತಹ ಗ್ರಾಮೀಣ ಪರಿಸರದಲ್ಲಿ ಒಂದು ಅಚ್ಚುಕಟ್ಟಾದ ಹಾಗೂ ಸೌಲಭ್ಯಭರಿತ ಅತ್ಯದ್ಭುತವಾದ ಶಾಲಾ ಕಟ್ಟಡವನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅತ್ಯುತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ತ್ಯಾಗ ಮತ್ತು ಸೇವಾ ಮನೋಭಾವನೆ ಶ್ಲಾಘನೀಯವಾದುದು. ಶಾಲೆಯಲ್ಲಿ ರಚನೆ ಮಾಡುವ ವಿಜ್ಞಾನ ಸಂಘಗಳತಹ ವಿವಿಧ ಸಂಘಗಳು ವಿದ್ಯಾರ್ಥಿಗಳನ್ನು ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ0ತೆ ಮಾಡಿ ಜೀವನಾನುಭವಗಳನ್ನು ಗಳಿಸಿಕೊಳ್ಳಲು ನೆರವಾಗುತ್ತವೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ಸ್ವಂತಿಕೆ ಮತ್ತು ಜೀವನಾಸಾಕ್ತಿಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಕರುಣಾಕರ ಬಳ್ಕೂರುರವರು ಮಾತನಾಡಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಒಂದು ಅತ್ಯುತ್ತಮ ಶಿಕ್ಷಣ ಸಂಸ್ಥೆ. ಎಲ್ಲಾ ಪೋಷಕರು ತಮ್ಮ ನಿಷ್ಕಲ್ಮಶ ಮನಸ್ಸಿನ ಮಕ್ಕಳಿಗೆ ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣವನ್ನು ಒದಗಿಸುತ್ತಿರುವುದು ಸಾರ್ಥಕ. ಹಳ್ಳಿಯ ಪರಿಸರದಲ್ಲಿ ಸುಂದರವಾದ ಪ್ರಕೃತಿ ಮಾತೆಯ ಮಡಿಲಲ್ಲಿ ಅತ್ಯದ್ಭುತವಾದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವ ಇಂತಹ ಶಾಲೆಯಲ್ಲಿ ನಾನು ಕೂಡ ಒಬ್ಬ ವಿದ್ಯಾರ್ಥಿಯಾಗಿರಬೇಕಿತ್ತು ಎಂದು ಅನಿಸುತ್ತಿದೆ. ವಿದ್ಯೆ ಕದಿಯಲಾಗದ ಸಂಪತ್ತು. ಅಂತಹ ವಿದ್ಯೆಯನ್ನು ಮಕ್ಕಳೆಲ್ಲರೂ ಇಷ್ಟಪಟ್ಟು ಕಲಿತು ವಿದ್ಯೆಯ ಜೊತೆಗೆ ಸಾಂಸ್ಕೃತಿಕವಾಗಿಯೂ ಕೂಡ ಬೆಳೆಯಬೇಕು. ಈ ಮೂರು ದಿನಗಳ ಕಾಲ ಶಾಲೆಯಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಕ್ಕಳೆಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿ ಜೀವನದಲ್ಲಿ ಸಾಧನೆಯನ್ನು ಮಾಡಬೇಕು ಎಂದರು.

ಜೂನ್ 26 ರಿಂದ ಜೂನ್ 28ರವರೆಗೆ 3 ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಹಬ್ಬದಲ್ಲಿ ಒಟ್ಟು 83 ಸ್ಪರ್ಧೆಗಳು ನಡೆಯಲಿದ್ದು ಒಂದರಿಂದ ಹತ್ತನೆ ತರಗತಿಯವರೆಗಿನ ಒಟ್ಟು 647 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವ್ಯವಸ್ಥಾಪಕಿ ನಯನ ಎಂ, ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಜಯಲಕ್ಷ್ಮಿ ವಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲರಾದ ರವೀಂದ್ರ ದರ್ಬೆ ಕಾರ್ಯಕ್ರಮವನ್ನು ಸ್ವಾಗತಿಸಿ ಸಹಶಿಕ್ಷಕಿ ಯಜ್ಞೆಶ್ವರಿ ಎನ್ ವಂದಿಸಿ, ಸಹಶಿಕ್ಷಕಿಯರಾದ ಜಯಶ್ರೀ ಆಚಾರ್ಯ ಹಾಗೂ ಅನಿತಾ ಜಿ. ಕಾರ್ಯಕ್ರಮನಿರೂಪಿಸಿದರು.

LEAVE A REPLY

Please enter your comment!
Please enter your name here