ಉಪ್ಪಿನಂಗಡಿ: ನೆರೆ ಭೀತಿ-24 ಗಂಟೆ ಕಾರ್ಯಾಚರಣೆಗೆ ರಕ್ಷಣಾ ತಂಡ ಸನ್ನದ್ಧ

0

ಉಪ್ಪಿನಂಗಡಿ: ನೆರೆ ಪೀಡಿತ ಪ್ರದೇಶವಾಗಿರುವ ಉಪ್ಪಿನಂಗಡಿಯಲ್ಲಿ ಪ್ರಾಕೃತಿಕ ವಿಕೋಪಗಳುಂಟಾದಾಗ ತಕ್ಷಣಕ್ಕೆ ಸ್ಪಂದಿಸಲು ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡವೊಂದು ಜೂ.1ರಿಂದಲೇ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿಯಲ್ಲಿ ಬೀಡು ಬಿಟ್ಟಿದ್ದು, ಏನಾದರೂ ಅನಾಹುತಗಳಾದಲ್ಲಿ 24*7 ಸ್ಪಂದಿಸಲು ಈ ತಂಡ ಸಕಲ ಸಿದ್ಧತೆಗಳೊಂದಿಗೆ ಸನ್ನದ್ಧವಾಗಿದೆ.


ಜಿಲ್ಲಾಧಿಕಾರಿಯವರ ಆದೇಶದಂತೆ ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡರ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸುತ್ತಿದ್ದು, ಈ ತಂಡದಲ್ಲಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಎ.ಎಸ್.ಎಲ್. ಜನಾರ್ದನ ಆಚಾರ್ಯ, ಸಮದ್, ಹಸೀದ್, ದೇವರಾಜ್, ಸುದರ್ಶನ್, ಮಂಜುನಾಥ್, ಸೋಮನಾಥ್ ಇದ್ದಾರೆ. ಇವರಲ್ಲಿ ಮೂವರು ಈಜುಗಾರರು, ಓರ್ವರು ದೋಣಿ ಅಪರೇಟರ್, ಓರ್ವರು ಎಲೆಕ್ಟ್ರಿಷಿಯನ್, ಓರ್ವರು ಪ್ಲಂಬರ್ ಕೆಲಸದಲ್ಲಿ ಪರಿಣತಿಯನ್ನು ಪಡೆದವರಾಗಿದ್ದಾರೆ. ಈ ತಂಡದಲ್ಲಿ ಎರಡು ರಬ್ಬರ್ ದೋಣಿ, ಹಗ್ಗ ಸೇರಿದಂತೆ ಇನ್ನಿತರ ರಕ್ಷಣಾ ಪರಿಕರಗಳು, ಆಸ್ಕಾ ಲೈಟ್, ಮರ ಕತ್ತರಿಸುವ ಯಂತ್ರ ಸೇರಿದಂತೆ ಅಗತ್ಯ ಸಾಧನಗಳಿವೆ. ಇದರಲ್ಲಿ ಒಂದು ದೋಣಿಯನ್ನು ನೇತ್ರಾವತಿ ನದಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಮಳೆಗಾಲದಲ್ಲಿ ದಾರಿಗಡ್ಡವಾಗಿ ಮರ ಬಿದ್ದರೆ ತೆರವು ಮಾಡುವುದು, ನೆರೆಯ ಸಂದರ್ಭ ಜನರನ್ನು ಸ್ಥಳಾಂತರಿಸುವುದು, ನದಿಗೆ ಬಿದ್ದವರನ್ನು ರಕ್ಷಿಸುವುದು ಸೇರಿದಂತೆ ನೆರೆಯ ಸಂದರ್ಭ ಈ ತಂಡ ಅಗತ್ಯ ಕಾರ್ಯಾಚರಣೆ ನಡೆಸಲಿದೆ. ಜೂನ್‌ನಿಂದ ಸಪ್ಟೆಂಬರ್ ವರೆಗೆಈ ತಂಡ ಮೂರು ಪಾಳಿಯಾಗಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದೆ.


ದೋಣಿಯ ಕಾರ್ಯಕ್ಷಮತೆ ಪರಿಶೀಲನೆ:
ಜೂ.28ರಂದು ಈ ತಂಡವು ನೇತ್ರಾವತಿ ನದಿಯಲ್ಲಿ ದೋಣಿಯ ಕಾರ್ಯಕ್ಷಮತೆ ಪರಿಶೀಲನೆ ನಡೆಸಿತು. ಈ ಸಂದರ್ಭ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಅವಿನಾಶ್ ಗೌಡ, ಸಿಬ್ಬಂದಿ ರುದ್ರಪ್ಪ ಉಪಸ್ಥಿತರಿದ್ದರು.


ಇಳಿಕೆಯಾದ ನದಿ ನೀರು:
ಕಳೆದ ಎರಡು ದಿನಗಳಲ್ಲಿ ಏರಿಕೆಯಾಗಿದ್ದ ನೇತ್ರಾವತಿ- ಕುಮಾರಧಾರ ನದಿಗಳ ನೀರು ಶುಕ್ರವಾರ ಇಳಿಕೆಯಾಗಿದೆ. ದೇವಸ್ಥಾನದ ಬಳಿ ನದಿಗಿಳಿಯಲು ಇರುವ 36 ಮೆಟ್ಟಿಲುಗಳಲ್ಲಿ ನಿನ್ನೆ ರಾತ್ರಿ 25 ಮೆಟ್ಟಿಲುಗಳು ಮುಳುಗಿದ್ದರೆ, ಜೂ.28ರಂದು ಬೆಳಗ್ಗೆ 10 ಮೆಟ್ಟಿಲುಗಳಷ್ಟು ನೀರು ಇಳಿಕೆಯಾಗಿದ್ದು, 15 ಮೆಟ್ಟಿಲುಗಳು ಕಾಣುತ್ತಿತ್ತು.

LEAVE A REPLY

Please enter your comment!
Please enter your name here