ವೇದಶಂಕರ ನಗರದ ಶ್ರೀ ರಾಮ ಶಾಲೆಯಲ್ಲಿ ನಡೆಯಲಿರುವ ಯಕ್ಷಧ್ರುವ – ಯಕ್ಷ ಶಿಕ್ಷಣ 2024-25ನೇ ಸಾಲಿನ ಯಕ್ಷಗಾನ ತರಬೇತಿ ತರಗತಿಯ ಉದ್ಘಾಟನೆ

0

ಜಗ್ಗದೆ, ಬಗ್ಗದೆ ಮುಂದುವರಿದಾಗ ಯಶಸ್ಸು ಸಾಧ್ಯ: ಪ್ರತಾಪ್ ಸಿಂಹ ನಾಯಕ್

ಉಪ್ಪಿನಂಗಡಿ: ನಮ್ಮ ಬದುಕಿನಲ್ಲಿ ವಿಶೇಷ ಬಲ ಹಾಕಿದಾಗ ಮಾತ್ರ ನಾವು ಸಾಮಾನ್ಯರಿಗಿಂತ ಅಸಾಮಾನ್ಯರಾಗಲು ಸಾಧ್ಯ. ನಮ್ಮ ಮನಸ್ಸಿಗೆ ಎಲ್ಲವನ್ನೂ ದಾಟುವ ಶಕ್ತಿಯಿದ್ದು, ಮಾಡುವ ಕೆಲಸದಲ್ಲಿ ಕಷ್ಟಗಳು ಎದುರಾದರೂ ಜಗ್ಗದೆ, ಬಗ್ಗದೆ ಮುಂದುವರಿದಾಗ ಮಾತ್ರ ಜೀವನದಲ್ಲಿ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ವತಿಯಿಂದ ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀ ರಾಮ ಶಾಲೆಯಲ್ಲಿ ನಡೆಯಲಿರುವ ಯಕ್ಷಧ್ರುವ- ಯಕ್ಷ ಶಿಕ್ಷಣ 2024-25ನೇ ಸಾಲಿನ ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಹಿರಿಯರು ಅನಕ್ಷರಸ್ಥರಾಗಿದ್ದರೂ, ಮಹಾಭಾರತ, ರಾಮಾಯಣ ಮುಂತಾದ ಗ್ರಂಥಗಳನ್ನು ಓದದಿದ್ದರೂ, ಅವರಿಗೆ ಅವುಗಳ ಬಗ್ಗೆ ಅರಿವಿದೆ. ಇದಕ್ಕೆ ಕಾರಣ ಯಕ್ಷಗಾನ. ಯಕ್ಷಗಾನವು ನಮ್ಮ ಸಂಸ್ಕೃತಿಯನ್ನು ಪಸರಿಸುವ ಮಾಧ್ಯಮವಾಗಿದ್ದು, ಈ ಕಲೆಗೆ ಅದರದ್ದೇ ಆದ ಗೌರವ, ಮಹತ್ವ ಇದೆ. ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಇದನ್ನು ಕಲಿತಾಗ ಈ ಕಲೆ ಒಲಿಯಲು ಸಾಧ್ಯ ಎಂದರಲ್ಲದೆ, ಶ್ರೀ ರಾಮ ಶಾಲೆಗೆ ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿ ನಿವೃತ್ತ ಶಿಕ್ಷಕ, ಯಕ್ಷಗಾನ ಅರ್ಥಧಾರಿ ಗೋಪಾಲಕೃಷ್ಣ ಶೆಟ್ಟಿ ಕಳೆಂಜ ಮಾತನಾಡಿ, ಯಕ್ಷಗಾನವೆಂಬ ಶಬ್ದಕ್ಕೆ ಚುಂಬಕ ಶಕ್ತಿಯಿದ್ದು, ಇದರಿಂದ ಸಮಾಜಕ್ಕೆ ಸಂಸ್ಕಾರ ದೊರೆಯಲು ಸಾಧ್ಯ. ಚಿಕ್ಕ ಪ್ರಾಯದಲ್ಲಿ ದೊರೆತ ವಿದ್ಯೆ ಎಂದಿಗೂ ನಮ್ಮಿಂದ ದೂರ ಸರಿಯಲು ಸಾಧ್ಯವಿಲ್ಲ. ಇನ್ನಷ್ಟು ಕಲಾವಿದರ ಸೃಷ್ಟಿಯಾಗಬೇಕೆಂಬ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಿದ್ದು, ಕಲಾವಿದನಿಗೊಂದು ಇದು ಪಂಚಾಂಗ ಆಗಿದೆ. ಕಲಿಕೆಯಲ್ಲಿ ಸ್ಥಿರವಾದ ಬದ್ಧತೆ, ಶ್ರದ್ಧೆಯಿದ್ದಾಗ ಮಾತ್ರ ಎತ್ತರಕ್ಕೆ ಏರಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡಾಗ ಹೊಸ ಹೊಸ ಕಲಾರತ್ನಗಳ ಸೃಷ್ಟಿಯಾಗಿ ಕಾಂತಿ ಬೀರಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ ಶೆಟ್ಟಿ ಮಾತನಾಡಿ, ಪಟ್ಲ ಸತೀಶ್ ಶೆಟ್ಟಿಯವರು ಬಂದ ಮೇಲೆ ಯಕ್ಷಗಾನದಲ್ಲಿ ಕ್ರಾಂತಿಯಾಗಿದ್ದು, ಈಗಿನ ಯುವ ಪೀಳಿಗೆಯನ್ನು ಯಕ್ಷಗಾನ ಕ್ಷೇತ್ರದತ್ತ ಸೆಳೆದಿದ್ದಾರೆ. ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಾಡಿ ಅದರ ಮೂಲಕ 9 ವರ್ಷದಲ್ಲಿ ಹದಿಮೂರುವರೆ ಕೋಟಿ ರೂ.ವನ್ನು ಅಶಕ್ತ ಕಲಾವಿದರಿಗೆ ನಾನಾ ವಿಧದಲ್ಲಿ ನೀಡುವ ಕಾರ್ಯ ಮಾಡಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಕಲಾವಿದರನ್ನು ಬೆಳೆಸಬೇಕೆಂಬ ದೃಷ್ಟಿಯಿಂದ ಟ್ರಸ್ಟ್ ಮೂಲಕ ಯಕ್ಷಗಾನ ತರಬೇತಿ ಆಯೋಜಿಸಲಾಗಿದೆ ಎಂದರು. ವೇದಿಕೆಯಲ್ಲಿ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ, ಶ್ರೀ ರಾಮ ಶಾಲೆಯ ಸಂಚಾಲಕ ಯು.ಜಿ. ರಾಧಾ, ಅಧ್ಯಕ್ಷ ಸುನೀಲ್ ಆನಾವು, ಪೋಷಕ ವೃಂದದ ಅಧ್ಯಕ್ಷ ಮೋಹನ್ ಭಟ್, ಯಕ್ಷಗುರು ಸತೀಶ ಆಚಾರ್ಯ ಮಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಎನ್. ಉಮೇಶ್ ಶೆಣೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೊರೋಳಿ, ಗಣೇಶ್ ವಳಾಲು, ರವೀಶ್ ಎಚ್.ಟಿ., ಶ್ಯಾಮ ಸುದರ್ಶನ್, ಗುಣಕರ ಅಗ್ನಾಡಿ, ಶರತ್ ಕೋಟೆ, ಚಂದ್ರಶೇಖರ ಶೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಚಂದ್ರಶೇಖರ ಮಡಿವಾಳ, ಲೊಕೇಶ ಆಚಾರ್ಯ ಸರಪಾಡಿ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಗಣೇಶ್ ಆಚಾರ್ಯ, ಯತೀಶ್ ಶೆಟ್ಟಿ, ಅಚಲ್ ಉಬರಡ್ಕ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಉದಯ ಅತ್ರೆಮಜಲು ಮತ್ತಿತರರು ಉಪಸ್ಥಿತರಿದ್ದರು. ಶ್ರೀ ರಾಮ ಶಾಲೆಯ ಪ್ರೌಢವಿಭಾಗದ ಮುಖ್ಯಗುರು ರಘುರಾಮ ಭಟ್ ಸಿ. ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಮಲಾ ತೇಜಾಕ್ಷಿ ವಂದಿಸಿದರು. ಶಿಕ್ಷಕರಾದ ಪವಿತ್ರಾ ಕೆ., ವಿಜಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here