ಚೆಲ್ಯಡ್ಕ ಸೇತುವೆಯಲ್ಲಿ ರಾತ್ರಿ ವಾಹನ ಸಂಚಾರ ಬಂದ್-ಘನ ವಾಹನ ಸಂಚಾರ ಸಂಪೂರ್ಣ ನಿಷೇಧ

0

ಪುತ್ತೂರು:ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚೆಲ್ಯಡ್ಕದ ಮುಳುಗು ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡುವಂತೆ ಸಹಾಯಕ ಆಯುಕ್ತರು ಸೂಚಿಸಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್, ತಾ.ಪಂ ಕಾರ್ಯನಿರ್ವಾಹಕಾಽಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ರಸ್ತೆಯನ್ನು ಸಂಪೂರ್ಣ ಬಂದ್ ಮಾಡಬಾರದು.ರಾತ್ರಿ ವೇಳೆ ಮಾತ್ರ ಬಂದ್ ಮಾಡಬೇಕು ಎಂದು ಗ್ರಾಮಸ್ಥರು ಬೇಡಿಕೆ ಇರಿಸಿದ ಪರಿಣಾಮ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ವಾಹನ ಸಂಚಾರ ಸ್ಥಗಿತಗೊಳಿಸಲು ಒಪ್ಪಿಗೆ ನೀಡಿದ್ದರು.ಸಂಜೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ, ಸೇತುವೆಯಲ್ಲಿ ಎಲ್ಲಾ ರೀತಿಯ ಘನ ವಾಹನ ಸಂಚಾರ ನಿಷೇಧಿಸಲಾಗುವುದು.ರಾತ್ರಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗುವುದು ಎಂದು ತಿಳಿಸಿದರು.


ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಅಪಾಯಕಾರಿ ಸಂಚಾರ ಬಂದ್ ಮಾಡಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದ್ದರು.ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರರವರು ಜೂ.28ರಂದು ಚೆಲ್ಯಡ್ಕದ ಮುಳುಗು ಸೇತುವೆಯ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದ್ದರು.ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ಎರಡು ತಿಂಗಳ ಅವಧಿಗೆ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲು ಸೂಚಿಸಿದ್ದರು.ಅವರ ಸೂಚನೆಯಂತೆ ಜು.28ರಂದು ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿಯವರು ಸ್ಥಳಕ್ಕೆ ಭೇಟಿ ನೀಡಿದ್ದರು.


ರಾತ್ರಿ ವೇಳೆ ಮಾತ್ರ ಬಂದ್ ಮಾಡಿ-ಗ್ರಾಮಸ್ಥರ ಮನವಿ:
ಸೇತುವೆ ಬಂದ್ ಮಾಡುವ ಸುದ್ದಿ ತಿಳಿಯುತ್ತಲೇ ಹಲವು ಮಂದಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು.ಸದರಿ ರಸ್ತೆಯಾಗಿ ಪ್ರತಿನಿತ್ಯ ಖಾಸಗಿ ಬಸ್‌ಗಳು, ಶಾಲಾ ವಾಹನಗಳು, ಹಾಲಿನ ವಾಹನಗಳು ಸೇರಿದಂತೆ ನೂರಾರು ವಾಹನಗಳು ಓಡಾಟ ನಡೆಸುತ್ತಿವೆ.ಇಲ್ಲಿ ಬದಲಿ ರಸ್ತೆಯಿಲ್ಲ.ಇದ್ದರೂ ಹತ್ತಾರು ಕಿಲೋ ಮೀಟರ್ ಸುತ್ತಾಡಿ ಬರಬೇಕಾಗುತ್ತದೆ.ಈ ಸೇತುವೆ ಮೇಲಿನ ಸಂಚಾರ ಬಂದ್ ಮಾಡಿದರೆ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಈ ಭಾಗದ ನಾಗರಿಕರು ಬಹಳಷ್ಟು ಸಂಕಷ್ಟಕ್ಕೀಡಾಗಬೇಕಾಗುತ್ತದೆ.ಹೀಗಾಗಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಬಾರದು ಎಂದು ಗ್ರಾಮಸ್ಥರು ತಹಶೀಲ್ದಾರ್, ತಾ.ಪಂ ಕಾರ್ಯನಿರ್ವಾಹಕಾಧಿಕಾರಿಯವರಲ್ಲಿ ವಿನಂತಿಸಿದರು.ರಾತ್ರಿ ವೇಳೆ ಮಾತ್ರ ಬಂದ್ ಮಾಡಿ ಹಗಲು ಹೊತ್ತಿನಲ್ಲಿ ಸಂಚಾರಕ್ಕೆ ಅವಕಾಶ ಕೊಡಬೇಕು.ವಿಪರೀತ ಮಳೆಯಾಗಿ ಸೇತುವೆ ಮುಳುಗಡೆಯಾದರೆ ಹಗಲು ಹೊತ್ತಿನಲ್ಲಿಯೂ ಬಂದ್ ಮಾಡಿ.ಇದರ ಹೊರತಾಗಿ ಎಲ್ಲಾ ದಿನಗಳಲ್ಲಿಯೂ ಸಂಪೂರ್ಣ ಬಂದ್ ಮಾಡದಂತೆ ಗ್ರಾಮಸ್ಥರು ವಿನಂತಿ ಮಾಡಿದರು.ಹಗಲು ಹೊತ್ತಿನಲ್ಲಿ ಸೇತುವೆ ಮುಳುಗಡೆಯಾದರೆ ಪಂಚಾಯತ್‌ನಿಂದ ರಸ್ತೆ ಬಂದ್ ಮಾಡಲಾಗುತ್ತಿದೆ ಎಂದು ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸಿದರು.


ಜನರ ಜೀವ ಉಳಿಸುವುದು ಮುಖ್ಯ:
ಜನರ ಜೀವ ಉಳಿಸುವುದು ಮುಖ್ಯ.ಯಾರ ಪ್ರಾಣಕ್ಕೂ ಹಾನಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ, ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆ ಮೇಲಿನ ಸಂಚಾರ ಬಂದ್ ಮಾಡಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ಮಾತ್ರ ಸೇತುವೆ ಮೇಲಿನ ಸಂಚಾರವನ್ನು ಬಂದ್ ಮಾಡುವಂತೆ ಗ್ರಾಮಸ್ಥರು ವಿನಂತಿಸಿದ್ದು ಇದಕ್ಕೆ ಅಽಕಾರಿಗಳು ಒಪ್ಪಿಗೆ ಸೂಚಿಸಿದರು.


ಜಿಲ್ಲಾಧಿಕಾರಿ ಭೇಟಿ:
ಸಂಜೆ ವೇಳೆಗೆ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸೇತುವೆ ಮೇಲಿನ ಸಂಚಾರವನ್ನು ಸಂಪೂರ್ಣ ಬಂದ್ ಮಾಡುವಂತೆ ಅವರು ಸೂಚಿಸಿದರು.ಸಂಪೂರ್ಣ ಬಂದ್ ಮಾಡುವುದರಿಂದ ಸಾರ್ವಜನಿಕರು ತೀರಾ ಸಮಸ್ಯೆ ಎದುರಿಸಬೇಕಾಗಿರುವುದರಿಂದ ರಾತ್ರಿ ವೇಳೆ ಮಾತ್ರ ಸಂಚಾರ ಬಂದ್ ಮಾಡುವಂತೆ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.ಜನರ ಜೀವ ಸುರಕ್ಷತೆಯ ದೃಷ್ಠಿಯಿಂದ ಬಂದ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಹಗಲು ಹೊತ್ತಿನಲ್ಲಿ ಅಧಿಕ ಮಳೆಯಾಗಿ ಸೇತುವೆ ಮುಳುಗಡೆಯಾದಾಗ ಸಂಚಾರ ಬಂದ್ ಮಾಡುವುದಾಗಿ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸಿದರು.ರಸ್ತೆಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡುವುದಲ್ಲದೆ ಅಲ್ಲಿಗೆ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಕೊನೆಗೂ ಗ್ರಾಮಸ್ಥರ ಮನವಿಯಂತೆ, ರಾತ್ರಿ 8ರಿಂದ ಬೆಳಿಗ್ಗೆ 6 ಗಂಟೆಯ ತನಕ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು,ಸೇತುವೆ ಮೇಲೆ ಘನ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸುವುದಾಗಿ ತಿಳಿಸಿದರು.


ರಾತ್ರಿ 8ರಿಂದ ಬೆಳಿಗ್ಗೆ 6 ಗಂಟೆಯ ತನಕ ಬಂದ್:
ಗ್ರಾಮಸ್ಥರ ಮನವಿಯಂತೆ ಹಗಲು ಹೊತ್ತಿನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿ, ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ಬಂದ್ ಮಾಡಲಾಗುವುದು.ಆದರೆ ಘನವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗುವುದು.ರಾತ್ರಿ ರಸ್ತೆ ಬಂದ್ ಮಾಡಿ ಬೆಳಿಗ್ಗೆ ತೆರವುಗೊಳಿಸಲು ಸೇತುವೆ ಇಕ್ಕೆಲಗಳಲ್ಲಿರುವ ಮನೆಯವರಿಗೆ ತಿಳಿಸಿ ಏನಾದರೂ ತೊಂದರೆಗಳಾದಲ್ಲಿ ತಕ್ಷಣ ಮಾಹಿತಿ ನೀಡುವಂತೆ ತಿಳಿಸಲಾಯಿತು.ಸೇತುವೆ ಎರಡೂ ಭಾಗಗಳಲ್ಲಿಯೂ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಬೇಕು.ಅದರಲ್ಲಿ ಬ್ಯಾನರ್ ಅಳವಡಿಸಿ ಸೂಚನೆ ನೀಡಬೇಕು.ಅಲ್ಲದೆ ಸೇತುವೆಯ ಎರಡೂ ಭಾಗದಲ್ಲಿ ಬೀದಿ ದೀಪ ಅಳವಡಿಸುವಂತೆ ಬೆಟ್ಟಂಪಾಡಿ ಗ್ರಾ.ಪಂ ಪಿಡಿಒಗೆ ತಹಶೀಲ್ದಾರ್ ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ, ಕಂದಾಯ ನಿರೀಕ್ಷಕ ಗೋಪಾಲ್, ಸಂಪ್ಯ ಠಾಣಾ ಇನ್ಸ್‌ಪೆಕ್ಟರ್ ರಂಗ ಸಾಮಯ್ಯ, ಎಸ್.ಐ.ಜಂಬೂರಾಜ್ ಮಹಾಜನ್, ಬೆಟ್ಟಂಪಾಡಿ ಗ್ರಾಮ ಆಡಳಿತಾಧಿಕಾರಿ ಮಂಜುನಾಥ, ಬೆಟ್ಟಂಪಾಡಿ ಗ್ರಾ.ಪಂ ಪಿಡಿಓ ಸ್ಥಳಕ್ಕೆ ಭೇಟಿ ನೀಡಿದ್ದರು.
ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ, ಒಳಮೊಗ್ರು ಗ್ರಾ.ಪಂ ಸದಸ್ಯ ಮಹೇಶ್ ರೈ, ಬೆಟ್ಟಂಪಾಡಿ ಗ್ರಾ.ಪಂ ಮಾಜಿ ಸದಸ್ಯ ಜಗನ್ನಾಥ ರೈ ಕೊಮ್ಮಂಡ, ಇರ್ದೆ ಬೆಟ್ಟಂಪಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ, ಭೂ ನ್ಯಾಯ ಮಂಡಳಿ ಸದಸ್ಯ ಕೃಷ್ಣಪ್ರಸಾದ್ ಆಳ್ವ ಸಹಿತ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಬೆಟ್ಟಂಪಾಡಿ ಗ್ರಾ.ಪಂಗೆ ಸಂಬಂಧಿಸಿದ ಜಾಗ.ಮಳೆ ಬರುವಾಗ ಮಾತ್ರ ಸೇತುವೆ ನೆನಪಾಗುತ್ತದೆ.ಸಣ್ಣ ಮಳೆಯಾದರೂ ಈ ಸೇತುವೆ ಮುಳುಗಡೆಯಾಗುತ್ತದೆ.ಅದಕ್ಕೆ ಅಂತಿಮ ವ್ಯವಸ್ಥೆ ಆಗಬೇಕು.ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಎರಡು ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭಿಸಿಲ್ಲ.ಸೇತುವೆ ನಿರ್ಮಾಣದಲ್ಲಿ ನಾವು ಯಾವುದೇ ರಾಜಕೀಯ ಮಾಡುವುದಿಲ್ಲ.ಹೊಸ ಸೇತುವೆ ನಿರ್ಮಾಣ ಮಾಡಿ ಜನರಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು.ಸೇತುವೆ ಬಂದ್ ಆದರೆ ಬಹಳಷ್ಟು ಮಂದಿಗೆ ಸಮಸ್ಯೆ ಉಂಟಾಗುತ್ತದೆ
-ಪ್ರಕಾಶ್ ರೈ ಬೈಲಾಡಿ, ಸದಸ್ಯರು ಬೆಟ್ಟಂಪಾಡಿ ಗ್ರಾ.ಪಂ

ಪ್ರಾಕೃತಿಕ ವಿಕೋಪದಿಂದ ಹಾನಿಗಳು ಉಂಟಾಗುತ್ತಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಪಂಚಾಯತ್‌ನಿಂದ ಪರಿಹಾರ ನೀಡುವ ಕಾರ್ಯವಾಗುತ್ತಿದೆ.ಜಿಲ್ಲಾಽಕಾರಿಗಳ ಆದೇಶದಂತೆ ನದಿ ತಟದಲ್ಲಿ ಜನರು ಹೋಗದಂತೆ ಪಂಚಾಯತ್‌ನಿಂದ ಕ್ರಮಕೈಗೊಳ್ಳಲಾಗಿದೆ.ಚೆಲ್ಯಡ್ಕದಲ್ಲಿ ನೂತನ ಸೇತುವೆ ನಿರ್ಮಾಣವಾಗಬೇಕು ಎನ್ನುವ ಹಲವು ವರ್ಷದ ಬೇಡಿಕೆಯಿದ್ದು ಶಾಸಕರು ಈಡೇರಿಸಿಕೊಡಬೇಕು ಎನ್ನುವ ವಿನಂತಿ
-ವಿದ್ಯಾಶ್ರೀ, ಅಧ್ಯಕ್ಷರು ಬೆಟ್ಟಂಪಾಡಿ ಗ್ರಾ.ಪಂ

40 ವರ್ಷದಿಂದ ಪ್ರತಿದಿನ ಸಂಚಾರ ಮಾಡುತ್ತಿದ್ದು ಅಂದಿಗೂ, ಇಂದಿಗೂ ಹಾಗೆಯೇ ಇದೆ.ಕಾಯಕಲ್ಪ ಕಂಡಿಲ್ಲ.ಮುಳುಗಡೆಯಾದಾಗ ಬಸ್‌ಗಳು ಸುತ್ತಾಡಿಕೊಂಡು ಬರಬೇಕು.ಸೇತುವೆ ಕುಸಿಯುವ ಹಂತದಲ್ಲಿದ್ದು ಸಹಾಯಕ ಆಯುಕ್ತರು ಬಂದ್ ಮಾಡುವಂತೆ ಸೂಚಿಸಿದ್ದಾರೆ.ಬಂದ್ ಮಾಡಿದರೆ ಪರ‍್ಯಾಯ ವ್ಯವಸ್ಥೆ ಕಲ್ಪಿಸಬೇಕು.ಹಗಲು ಹೊತ್ತಿನಲ್ಲಿ ಅವಕಾಶ ನೀಡಿ, ರಾತ್ರಿ ವೇಳೆ ಮಾತ್ರ ಬಂದ್ ಮಾಡಿ ಹಗಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರಿಗೆ ಕೃತಜ್ಞತೆಗಳು
-ರಾಮಯ್ಯ ರೈ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಂಪಾಡಿ ಸಿಎ ಬ್ಯಾಂಕ್

ಮಳೆ ಅಧಿಕ ಬಂದಾಗ ಸೇತುವೆ ಮುಳುಗಡೆಯಾಗುತ್ತಿದೆ.ಇಲ್ಲಿ ಪರಿಹಾರ ನೀಡುವುದು ಮುಖ್ಯವಲ್ಲ. ಪ್ರಾಣ ಹಾನಿಯಾಗಬಾರದು ಎನ್ನುವುದೇ ಉದ್ದೇಶ.ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಮನೆ ಬಳಿ ಭೂ ಕುಸಿತವಾಗುವ ಪ್ರದೇಶಗಳನ್ನು ಗುರುತಿಸಲು ಎಲ್ಲಾ ಗ್ರಾ.ಪಂಗಳಿಗೆ ಸೂಚನೆ ನೀಡಲಾಗಿದೆ.ಅಪಾಯಕಾರಿ ಮನೆಗಳಿದ್ದರೆ ತಕ್ಷಣ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ.ಹೀಗಾಗಿ ಎರಡು ದಿನಗಳ ಕಾಲ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು
-ನವೀನ್ ಭಂಡಾರಿ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ

ತಾಲೂಕಿನಲ್ಲಿ ಯಾವುದೇ ಜೀವ ಹಾನಿಯಾಗಬಾರದು ಎನ್ನುವುದು ನಮ್ಮ ಧ್ಯೇಯ. ಮಳೆ ಅಧಿಕವಾದಾಗ ಸೇತುವೆ ಮುಳುಗಡೆಯಾಗಿ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ.ಹೀಗಾಗಿ ಚೆಲ್ಯಡ್ಕ ಸೇತುವೆಯನ್ನು 24 ಗಂಟೆಯೂ ಬಂದ್ ಮಾಡಬೇಕು ಎನ್ನುವ ನಿರ್ದೇಶನವಿದೆ.ಹಾಗಿದ್ದರೂ ಸಾರ್ವಜನಿಕರ ಹಿತದೃಷ್ಠಿಯಿಂದ ಎಲ್ಲರ ಕೋರಿಕೆಯಂತೆ ರಾತ್ರಿ ಮಾತ್ರ ಬಂದ್ ಮಾಡಲಾಗುತ್ತದೆ.ಈ ಕುರಿತು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ಗಮನಕ್ಕೂ ತರಲಾಗುವುದು.ಊರಿನವರೂ ಸಹಕರಿಸುವ ಭರವಸೆ ನೀಡಿದ್ದಾರೆ.ಪೊಲೀಸರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು
-ಪುರಂದರ ಹೆಗ್ಡೆ, ತಹಶೀಲ್ದಾರರು ಪುತ್ತೂರು

LEAVE A REPLY

Please enter your comment!
Please enter your name here